ಎನ್‌ಐಎ ದಾಳಿ, ಬೆಂಗಳೂರಿನಲ್ಲಿ ಶಂಕಿತ ಐಸಿಸ್‌ ಉಗ್ರ ವಶಕ್ಕೆ

NIA conducts raids at 44 locations in Karnataka and Maharashtra in ISIS terror conspiracy case

ಕರ್ನಾಟಕದ ಒಂದು ಕಡೆ ಸೇರಿದಂತೆ ದೇಶದ 44 ಕಡೆಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಇಂದು ದಾಳಿ ನಡೆಸಿದ್ದು, ಬೆಂಗಳೂರಿನಲ್ಲಿ ಶಂಕಿತ ಐಸಿಸ್‌ ಉಗ್ರನೊಬ್ಬನನ್ನು ಬಂಧಿಸಿದೆ.

ಬೆಂಗಳೂರಿನ ಪುಲಿಕೇಶಿನಗರ ವ್ಯಾಪ್ತಿಯಲ್ಲಿ ವಾಸವಾಗಿದ್ದ ಆಲಿ ಅಬ್ಬಾಸ್ ಪೇಟಿವಾಲ ಎಂಬಾತನನ್ನು ಎನ್‌ಐಎ ವಶಕ್ಕೆ ಪಡೆದಿದೆ. ಮೂಲತಃ ಮುಂಬೈ ಮೂಲದ ಆಲಿ ಅಬ್ಬಾಸ್ ಪೇಟಿವಾಲ, ಪುಲಿಕೇಶಿನಗರ ವ್ಯಾಪ್ತಿಯಲ್ಲಿ ಉರ್ದು ಶಾಲೆ ನಡೆಸುತ್ತಿದ್ದ ಎಂದು ಗೊತ್ತಾಗಿದೆ. ಎನ್‌ಐಎ ಈತನನ್ನು ವಶಕ್ಕೆ ಪಡೆದು ಕರೆದೊಯ್ದಿದ್ದು, ಹೆಚ್ಚಿನ ವಿವರಗಳು ದೊರೆಯಬೇಕಿದೆ

ದೇಶಾದ್ಯಂತ ಭಯೋತ್ಪಾದಕ ದಾಳಿ ನಡೆಸಲು ಜಾಗತಿಕ ಭಯೋತ್ಪಾದಕ ಗುಂಪು ಐಸಿಸ್ ಸಂಚು ರೂಪಿಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕರ್ನಾಟಕ ಮತ್ತು ಮಹಾರಾಷ್ಟ್ರದ ಸುಮಾರು 44 ಸ್ಥಳಗಳಲ್ಲಿ ಇಂದು ಮುಂಜಾನೆ ದಾಳಿ ನಡೆಸಿತ್ತು. ಕರ್ನಾಟಕದಲ್ಲಿ ಒಬ್ಬಾತ ಸೇರಿದಂತೆ 14 ಮಂದಿಯನ್ನು ಎನ್‌ಐಎ ವಶಕ್ಕೆ ತೆಗೆದುಕೊಂಡಿದೆ.

2020ರಲ್ಲಿ ಕೂಡ ಎನ್‌ಐಎ ನಡೆಸಿದ ಇಂಥದೇ ಕಾರ್ಯಾಚರಣೆಯೊಂದರಲ್ಲಿ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದರಲ್ಲಿ ನೇತ್ರತಜ್ಞನಾಗಿದ್ದ ಅಬ್ದುರ್ರಹಮಾನ್‌ ಎಂಬಾತ ಐಸಿಸ್‌ ಪರವಾಗಿ ಕಾರ್ಯಾಚರಿಸುತ್ತಿದ್ದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿತ್ತು.

ಕರ್ನಾಟಕದಲ್ಲಿ ಒಂದುಕಡೆ, ಪುಣೆಯಲ್ಲಿ 2 ಕಡೆ, ಠಾಣೆ ಗ್ರಾಮೀಣದಲ್ಲಿ 31 ಕಡೆ, ಠಾಣೆ ನಗರದಲ್ಲಿ 9 ಕಡೆ ಮತ್ತು ಭಯಂದರ್​ನಲ್ಲಿ ಒಂದು ಕಡೆ ಎನ್ಐಎ ಅಧಿಕಾರಿಗಳು ಶೋಧನೆ ನಡೆಸುತ್ತಿದ್ದಾರೆ. ‘ಭಾರತದಲ್ಲಿ ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ಹರಡುವ ಭಯೋತ್ಪಾದಕ ಸಂಘಟನೆಯ ಯೋಜನೆಗಳನ್ನು ವಿಫಲಗೊಳಿಸಲು ಎನ್ಐಎ ವ್ಯಾಪಕ ತನಿಖೆ ನಡೆಸುತ್ತಿದೆʼ ಎಂದು ಹೇಳಲಾಗಿದೆ.

ಡಿಸೆಂಬರ್ 2 ರಂದು ಬಳ್ಳಾರಿಯಲ್ಲಿ ನಡೆದಿತ್ತು ದಾಳಿ

ರಾಷ್ಟ್ರೀಯ ತನಿಖಾ ದಳವು ನಕಲಿ ನೋಟು ಜಾಲದ ಮೇಲೆ ಮುಗಿಬಿದ್ದಿತ್ತು. ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಎನ್‌ಐಎ ಏಕಕಾಲದಲ್ಲಿ ದಾಳಿ ನಡೆಸಿದ್ದು, ಅದರಲ್ಲಿ ಕರ್ನಾಟಕದ ಬಳ್ಳಾರಿಯಲ್ಲೂ ಒಬ್ಬನನ್ನು ಸೆರೆ ಹಿಡಿದಿದೆ. ಬಳ್ಳಾರಿಯಲ್ಲಿ ಬಂಧಿತ ಆರೋಪಿಯನ್ನು ಮಹೇಂದ್ರ ಎಂದು ಗುರುತಿಸಲಾಗಿದ್ದು, ಆತನಿಂದ ಭಾರಿ ಪ್ರಮಾಣದ ನಕಲಿ ನೋಟು, ನೋಟು ತಯಾರಿಸುವ ಪೇಪರ್, ಪ್ರಿಂಟಿಂಗ್ ಮೆಷಿನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಈತ 500, 200, ಹಾಗೂ 100 ರೂ ಮುಖಬೆಲೆಯ ನೋಟು ತಯಾರಿಸುತ್ತಿದ್ದ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!