ಪೋಷಕರು ಮಕ್ಕಳಿಗೆ ಲಸಿಕೆ ಕೊಡಿಸಲು ಮುಂದಾಗಿ – ಎಸ್ ಎ ರವೀಂದ್ರನಾಥ್

ದಾವಣಗೆರೆ: ಜಿಲ್ಲೆಯಲ್ಲಿನ ಎಲ್ಲಾ ೧೫ ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಲಸಿಕೆ ಹಾಕಿಸಿಕೊಂಡಲ್ಲಿ ಮಾತ್ರ ಓಮಿಕ್ರಾನ್ ತಡೆಗಟ್ಟಲು ಸಾಧ್ಯ. ಆದ್ದರಿಂದ ಪೋಷಕರು ಮಕ್ಕಳಿಗೆ ಲಸಿಕೆ ಕೊಡಿಸಲು ಮುಂದಾಗಿ ಎಂದು ಶಾಸಕ ಎಸ್. ವಿ. ರವೀಂದ್ರನಾಥ್ ಹೇಳಿದರು.
ಸೋಮವಾರ ನಗರದ ಮೋತಿವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ೧೫ ರಿಂದ ೧೮ ವರ್ಷದ ಒಳಗಿನ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಕೋವಿಡ್ ಮತ್ತು ಓಮಿಕ್ರಾನ್ ತಡೆಗಟ್ಟುವ ಉದ್ದೇಶದಿಂದಲೇ ಎಲ್ಲಾ ಕಿರಿಯ ವಯಸ್ಸಿನ ವಿದ್ಯಾರ್ಥಿಗಳಿಗೂ ಲಸಿಕೆ ನೀಡುವ ಅಭಿಯಾನ ರೂಪಿಸಲಾಗಿದೆ. ಕೇರಳ, ಮಹಾರಾಷ್ಟ್ರ, ಗೋವಾದಂತೆ ಓಮಿಕ್ರಾನ್ ವಿಪರೀತವಾಗಿ ಹೆಚ್ಚುತ್ತಿದ್ದು ಎಲ್ಲರೂ ಮುಂಜಾಗ್ರತೆ ವಹಿಸುವಂತೆ ಸಲಹೆ ನೀಡಿದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತಾನಾಡಿ, ಒಟ್ಟಾರೆ ಜಿಲ್ಲೆಯಲ್ಲಿ ೮೮ ಸಾವಿರ ೧೫ ರಿಂದ ೧೮ ವರ್ಷದ ಒಳಗಿನ ವಿದ್ಯಾರ್ಥಿಗಳಿದ್ದಾg, ಸದ್ಯ ೬೫ ಸಾವಿರ ಡೋಸ್ ಲಸಿಕೆ ಲಭ್ಯವಿದ್ದು ಎಲ್ಲಾ ತಾಲ್ಲೂಕುಗಳು ಒಳಗೊಂಡಂತೆ ೫೦೩ ಕೇಂದ್ರಗಳಲ್ಲಿ ಲಸಿಕೆ ನೀಡಲು ಆಯೋಜನೆ ಮಾಡಲಾಗಿದೆ, ಮೊದಲ ಡೋಸ್ ನೀಡಿದ ೨೮ ದಿನಗಳ ನಂತರ ಎರಡನೇ ಡೋಸ್ ನೀಡಲಾಗುವುದು ಎಂದರು.
ಲಸಿಕೆ ಪಡೆಯಲು ವಿದ್ಯಾರ್ಥಿಗಳು ಸ್ವ-ಪ್ರೇರಣೆಯಿಂದ ಮುಂದೆ ಬರಬೇಕು, ಯಾವುದೇ ವಿದ್ಯಾರ್ಥಿ ಅಥವಾ ಪೋಷಕರು ಈ ಬಗ್ಗೆ ಆತಂಕಪಡಬೇಕಾಗಿಲ್ಲ, ಲಸಿಕೆ ಬಹಳ ಸುರಕ್ಷಿತವಾಗಿದ್ದು, ಲಸಿಕೆ ಹಾಕಿಸಿಕೊಳ್ಳುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಈಗಾಗಲೇ ಮೊದಲ ಡೋಸ್ ಅನ್ನು ಶೇ ೯೯ರಷ್ಟು ಹಾಗೂ ಎರಡನೇ ಡೋಸ್‌ಅನ್ನು ಶೇ.೮೦ರಷ್ಟು ಮಂದಿ ಪಡೆದಿದ್ದಾರೆ, ಶೇ.೧೦೦ರಷ್ಟು ಲಸಿಕೆ ನೀಡುವುದರ ಮೂಲಕ ಜಿಲ್ಲೆಯನ್ನು ಕೋವಿಡ್ ಮುಕ್ತ ಜಿಲ್ಲೆಯನ್ನಾಗಿ ಮಾಡುವುದರ ಜೊತೆಗೆ ಜನರನ್ನು ರಕ್ಷಿಸಲು ಜಿಲ್ಲಾಡಳಿತ ಕಟ್ಟಿಬದ್ಧವಾಗಿದೆ ಎಂದು ತಿಳಿಸಿದರು.
ಸ್ವಯಂ ಪ್ರೇರಿತವಾಗಿ ಮಾಸ್ಕ್ ಧರಿಸಿ: ಕೋವಿಡ್ ಪ್ರಕರಣಗಳ ಸಂಖ್ಯೆ ಜಿಲ್ಲೆಯಲ್ಲಿ ಇಳಿಮುಖವಾಗಿದೆ ಎಂಬ ಕಾರಣಕ್ಕೆ ಜನರು ಮಾಸ್ಕ್ ಮತ್ತು ಸಾಮಾಜಿಕ ಅಂತರದ ಬಗ್ಗೆ ಅಲಕ್ಷ್ಯ ಮಾಡಬಾರದು, ನಾಗರೀಕರು ಸ್ವಯಂ ಪ್ರೇರಿತವಾಗಿ ಮಾಸ್ಕ್ ಧರಿಸಬೇಕು. ದಂಡ ವಿಧಿಸುತ್ತಾರೆಂಬ ಭಯಕ್ಕೆ ಧರಿಸುವ ಬದಲು ಸ್ವ ಇಚ್ಚೆಯಿಂದ ಜಾಗೃತಿ ವಹಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಡಾ.ವಿಜಯ ಮಹಾಂತೇಶ್ ದಾನಮ್ಮನವರ್, ಮಹಾನಗರ ಪಾಲಿಕೆ ಮೇಯರ್ ವೀರೇಶ್ ಎಸ್ ಟಿ, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಜಿಲಾ ವೈದ್ಯಾಧಿಕಾರಿ ಡಾ.ನಾಗರಾಜ, ಆರ್ ಸಿ ಹೆಚ್ ಅಧಿಕಾರಿ ಡಾ.ಮೀನಾಕ್ಷಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನೀರ್ದೆಶಕ ಶಿವರಾಜು ಎಂ, ಮೋತಿ ವೀರಪ್ಪ ಕಾಲೇಜಿನ ಪ್ರಾಚಾರ್ಯ ಪಂಚಾಕ್ಷರಪ್ಪ ಎಸ್, ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.