ಸಿದ್ದಗಂಗಾ ಶಾಲೆ ಮುಖ್ಯಸ್ಥೆ ‘ಜಸ್ಟಿನ್ ಡಿಸೋಜ’ ರಿಗೆ 2021 ರ ‘ವರ್ಷದ ವ್ಯಕ್ತಿ’ ಪ್ರಶಸ್ತಿ
ದಾವಣಗೆರೆ: ಮಕ್ಕಳಲ್ಲಿ ಅಂತರ್ಗತವಾಗಿರುವ ಪ್ರತಿಭೆಯನ್ನು ಹೊರತೆಗೆಯುವುದು ಶಿಕ್ಷಕ ಮಾತ್ರ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ಹೇಳಿದರು.
ಜಿಲ್ಲಾ ಸಮಾಚಾರ ಪತ್ರಿಕಾ ಬಳಗದಿಂದ ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೋಜರಿಗೆ- 2021ರ ‘ವರ್ಷದ ವ್ಯಕ್ತಿ’ ಪ್ರಶಸ್ತಿಯನ್ನು ಭಾನುವಾರ ಸಿದ್ಧಗಂಗಾ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಪ್ರದಾನ ಮಾಡಿ ಅವರು ಮಾತನಾಡಿದರು.
ಮಕ್ಕಳಿಗೆ ತಂದೆ ತಾಯಿ ಉಸಿರು ನೀಡಿದರೆ, ಗುರುಗಳು ಹೆಸರು ಗಳಿಸುವಂತೆ ಮಾಡುತ್ತಾರೆ. ಶಿಕ್ಷಣ ನೀಡುವವರೇ ವ್ಯಕ್ತಿತ್ವವನ್ನು ರೂಪಿಸವವರು. ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ತಂದೆ ತಾಯಿಗಳ ಜತೆಗೆ ಶಿಕ್ಷಕರು ಹೊರತಗೆಯುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಪೋಷಕರು ಮಕ್ಕಳ ಅಭಿರುಚಿಗೆ ತಕ್ಕಂತೆ ಅವರನ್ನು ಬೆಳೆಸಿ, ಅವರಿಗೆ ಪ್ರೋತ್ಸಾಹ ನೀಡಿರಿ. ವೈದ್ಯರು, ಇಂಜಿನಿಯರ್ ಆಗಬೇಕೆಂಬ ನಿಮ್ಮ ಒತ್ತಡಗಳನ್ನು ಮಕ್ಕಳ ಮೇಲೆ ಹಾಕಬೇಡಿ. ಇದರಿಂದ ಮಕ್ಕಳ ಸಾಧನೆಗೆ ಅಡ್ಡಿಯಾಗುತ್ತದೆ. ಅವರ ಪ್ರತಿಭೆಯನ್ನು ಪೋಷಿಸುವ ಕೆಲಸ ಮಾಡಿರಿ ಎಂದು ಸಲಹೆ ನೀಡಿದರು.
ಪ್ರಶಸ್ತಿಗಾಗಿ ಸಾಧಕರೇ ಅರ್ಜಿ ಹಿಡಿದುಕೊಂಡು ಹೋಗುವಂತಾಗದೇ, ಸಮಾಜವೇ ಅವರನ್ನು ಗುರುತಿಸುವ ಕೆಲಸ ಆಗಬೇಕೆಂದು ಅಭಿಪ್ರಾಯಿಸಿದರು.
ವರ್ಷದ ವ್ಯಕ್ತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜಸ್ಟೀನ್ ಡಿ’ಸೌಜ, ಹೋರಾಟ ಇಲ್ಲದೇ ಮುನ್ನುಗ್ಗಲು ಸಾಧ್ಯವಿಲ್ಲ. ಸಾಧನೆ ಮಾಡಲು ಕೂಡ ಸಾಧ್ಯವಾಗದು. ನಮ್ಮ ಜೀವನವೇ ಹೋರಾಟವಾಗಿದೆ. ಆದ್ದರಿಂದ ಎಲ್ಲಾ ಸಮಸ್ಯೆಗಳನ್ನು ಎದುರಿಸಿ ನಿಲ್ಲಿರಿ ಎಂದು ತಿಳಿಸಿದರು.
ಸಿದ್ದಗಂಗಾ ವಿದ್ಯಾಸಂಸ್ಥೆಯ ರುವಾರಿಯಾದ ಶಿವಣ್ಣ ಅವರು ತಾವೊಬ್ಬ ಶಿಕ್ಷಕರಾಗಬೇಕೆಂದು ಕನಸು ಕಂಡಿದ್ದರು. ಅವರು ದಾವಣಗೆರೆಗೆ ಬಂದಾಗ ಅವರ ಬಳಿಯಿದ್ದದ್ದು ಕೇವಲ ನಾಲ್ಕಣೆ ಮಾತ್ರ. ಆದರೆ, ಗುರಿ ಸಾಧನೆಗೆಗಾಗಿ ಪಟ್ಟ ಪರಿಶ್ರಮ ಇಂದು ಇಷ್ಟು ದೊಡ್ಡಮಟ್ಟದ ಸಾಮ್ರಾಜ್ಯ ಕಟ್ಟಲು ಸಾಧ್ಯವಾಯಿತು ಎಂದರು.
ಬಾಪೂಜಿ ವಿದ್ಯಾಸಂಸ್ಥೆಯ ನಿರ್ದೇಶಕ ಎ.ಎಸ್. ವೀರಣ್ಣ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆ ಸಮಾಚಾರ ಸಂಪಾದಕ ವಿ. ಹನುಮಂತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತ್ಯಭಾಮ ಮಂಜುನಾಥ್ ಸ್ವಾಗತಿಸಿದರು. ಪ್ರಸಾದ್ ಬಂಗೇರ ವಂದಿಸಿದರು. ರಾಘವೇಂದ್ರ ನಾಯರಿ ಅತಿಥಿಗಳನ್ನು ಪರಿಚಯಿಸಿದರು. ಭಾರತಿ ಪ್ರಶಸ್ತಿ ಪತ್ರ ವಾಚಿಸಿದರು. ಸಾಲಿಗ್ರಾಮ ಗಣೇಶ್ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಡಾ. ಈಶ್ವರ ಶರ್ಮ, ವೆಂಕಟೇಶ್ ಅವರೂ ಉಪಸ್ಥಿತರಿದ್ದರು.