ಹೈವೇಯಲ್ಲಿ ಲೇನ್ ಡಿಸಿಪ್ಲೀನ್ ಪಾಲಿಸದಿದ್ದರೆ ದಂಡ: ಎಸ್ಪಿ

ಹೈವೇಯಲ್ಲಿ ಲೇನ್ ಡಿಸಿಪ್ಲೀನ್ ಪಾಲಿಸದಿದ್ದರೆ ದಂಡ: ಎಸ್ಪಿ

ದಾವಣಗೆರೆ: ಹೆದ್ದಾರಿಗಳಲ್ಲಿ ಪಥ ಶಿಸ್ತು (ಲೇನ್‌ ಡಿಸಿಪ್ಲೀನ್‌) ಉಲ್ಲಂಘಿಸುವ ವಾಹನ ಸವಾರರಿಗೆ ದಂಡ ವಿಧಿಸುವ ಕಾರ್ಯ ಆರಂಭವಾಗಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಹೇಳಿದ್ದಾರೆ.
ಸಂಚಾರ ನಿಯಮಗಳ ಜಾಗೃತಿಗಾಗಿ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬೈಕ್ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು. ರಾಷ್ಟ್ರೀಯ ಹೆದ್ದಾರಿ– 48ರಲ್ಲಿ ಪೈಲೆಟ್ ಪ್ರಾಜೆಕ್ಟ್ ಆಗಿ ದಾವಣಗೆರೆ ಜಿಲ್ಲೆಯನ್ನು ಆಯ್ಕೆ ಮಾಡಲಾಗಿದೆ. ಸೋಮವಾರ ಸಂಜೆಯಿಂದಲೇ ಶಿಸ್ತು ಉಲ್ಲಂಘನೆಗೆ ದಂಡ ವಿಧಿಸುವ ಕಾರ್ಯ ಆರಂಭವಾಗಲಿದೆ’ ಎಂದರು.
ಹೆದ್ದಾರಿಯಲ್ಲಿ ನಾಲ್ಕು ಚಕ್ರದ ವಾಹನಗಳು ಫಸ್ಟ್‌ ಲೇನ್, ಒಳ ಪಥ, (ಇನ್ನರ್ ಲೇನ್) ಹಾಗೂ ಭಾರಿ ವಾಹನಗಳಾದ ಲಾರಿ, ಬಸ್, ಟ್ರಕ್, ಟ್ಯಾಂಕರ್‌ಗಳು ಸೆಕೆಂಡ್‌ ಲೇನ್, ಹೊರ ಪಥ, (ಔಟರ್ ಲೇನ್‌)ದಲ್ಲಿ ಸಂಚರಿಸಬೇಕು. ಒಂದು ವೇಳೆ ಈ ಶಿಸ್ತು ಉಲ್ಲಂಘಿಸಿದರೆ 500 ದಂಡ ವಿಧಿಸಲಾಗುವುದು ಎಂದು ಅವರು ಹೇಳಿದರು.
ಹೆದ್ದಾರಿಯಲ್ಲಿ ಕಾರ್‌ ಸೇರಿದಂತೆ ನಾಲ್ಕು ಚಕ್ರದ ವಾಹನಗಳಿಗೆ ಮೀಸಲಾದ ಪಥದಲ್ಲಿ ಭಾರಿ ವಾಹನಗಳು ಸಂಚರಿಸುತ್ತಿವೆ. ಇದರಿಂದ ಕಾರು ಮತ್ತಿತರ ವಾಹನಗಳ ಸವಾರರು ವೇಗದಲ್ಲಿ ಬೇರೆ ಬೇರೆ ಪಥಗಳಲ್ಲಿ ನುಸುಳಿಕೊಂಡು ಹೋಗುವಾಗ ಅಪಘಾತಗಳು ಸಂಭವಿಸಿ ಸಾವು– ನೋವು ದಾಖಲಾಗುತ್ತಿವೆ.  ಅಪಘಾತಗಳನ್ನು ತಗ್ಗಿಸಲು ಪಥ ಶಿಸ್ತು ಕಾಪಾಡುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು.
ದಾವಣಗೆರೆ, ಚಿತ್ರದುರ್ಗ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ನಂಬರ್ ಪ್ಲೇಟ್ ಗುರುತಿಸುವ 9 ಸ್ವಯಂ ಚಾಲಿತ ಕ್ಯಾಮೆರಾ (ಆಟೊಮ್ಯಾಟಿಕ್ ನಂಬರ್‌ ಪ್ಲೇಟ್ ರೆಕಗ್ನೈಷನ್ ಕ್ಯಾಮೆರಾ)ಗಳನ್ನು ಅಳವಡಿಸಲಾಗಿದೆ. ಒಂದು ವೇಳೆ ಬೃಹತ್ ವಾಹನಗಳು ಪಥ ಶಿಸ್ತು ಉಲ್ಲಂಘಿಸಿದರೆ ಆ ವಾಹನಗಳ ನಂಬರ್, ಸ್ಥಳ, ಸಮಯ, ಜಿಪಿಎಸ್ ಲೊಕೇಷನ್ ಸಮೇತ ಚಿತ್ರಗಳು ಟೋಲ್‌ಗೇಟ್‌ಗಳಲ್ಲಿ ಇರುವ ಮಲ್ಪಿ ಫಂಕ್ಷನಲ್ ಡಿವೈಸ್‌ಗೆ ರವಾನೆಯಾಗುತ್ತವೆ. ಟೋಲ್‌ ಗೇಟ್‌ಗಳಲ್ಲಿ ವಾಹನಗಳು ನಿಂತಾಗ ಅಲ್ಲಿ ದಂಡ ವಿಧಿಸಲಾಗುವುದು. ಒಂದು ಟೋಲ್‌ ಗೇಟ್‌ನಲ್ಲಿ ತಪ್ಪಿಸಿಕೊಂಡರೆ ಮತ್ತೊಂದು ಟೋಲ್‌ಗೇಟ್‌ನಲ್ಲಿ ದಂಡ ವಿಧಿಸುವುದು ಖಚಿತ ಎಂದು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *

error: Content is protected !!