ಬ್ಯಾಂಕುಗಳಿಗೆ ಮೋಸ ಮಾಡುವ ದುರಾಲೋಚನೆ ಜನರಲ್ಲಿ ಬರಬಾರದು – ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

ದಾವಣಗೆರೆ: ಸಾರ್ವಜನಿಕರ ಅನುಕೂಲಕ್ಕಾಗಿ ಇರುವ ಬ್ಯಾಂಕ್‌ಗಳು ನಿಯಮಾನುಸಾರ ಸಾಲಗಳನ್ನು ನೀಡುತ್ತವೆ. ಸಾಲವನ್ನು ಪಡೆದ ಜನರು ತಮ್ಮ ಬದುಕನ್ನು ಕಟ್ಟಿಕೊಳ್ಳುವ ಕೆಲಸ ಮಾಡಬೇಕು. ಅಲ್ಲದೆ ಬ್ಯಾಂಕುಗಳಿಗೆ ಮೋಸ ಮಾಡುವ ದುರಾಲೋಚನೆ ಬರಬಾರದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ವಿದ್ಯಾನಗರದ ಕುವೆಂಪು ಕನ್ನಡ ಭವನದಲ್ಲಿ ಲೀಡ್ ಬ್ಯಾಂಕ್ ಕಚೇರಿ ವತಿಯಿಂದ ಸ್ವಾತಂತ್ರö್ಯ ಅಮೃತ ಮಹೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ಸಾಲ ಸಂಪರ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಹೆಸರೇ ಸೂಚಿಸುವಂತೆ ಸಾಲ ಸಂಪರ್ಕ ಕಾರ್ಯಕ್ರಮದಿಂದ ಬ್ಯಾಂಕುಗಳು ಮತ್ತು ಗ್ರಾಹಕರ ನಡುವೆ ಬಾಂಧವ್ಯ ವೃದ್ಧಿಸಲಿದೆ. ಆರ್ಥಿಕ ಅಭಿವೃದ್ಧಿ, ಸುಸ್ಥಿರ ಬೆಳವಣಿಗೆ, ಆರ್ಥಿಕ ಸುಧಾರಣೆಗೆ ಇಂತಹ ಕಾರ್ಯಕ್ರಮಗಳು ನೆರವಾಗಲಿದೆ. ಬ್ಯಾಂಕುಗಳಿಂದ ಸಾಲ ಪಡೆದವರು ಸರಿಯಾಗಿ ಮರುಪಾವತಿ ಮಾಡುವುದರ ಮೂಲಕ ಬ್ಯಾಂಕುಗಳೂ ಅಭಿವೃದ್ಧಿ ಪಥದಲ್ಲಿ ಸಾಗಲು ನೆರವಾಗಬೇಕು. ಇದು ಪ್ರತಿಯೊಬ್ಬ ಸಾಲಗಾರನ ಜವಾಬ್ದಾರಿಯೂ ಆಗಿದೆ. ಹಾಗಾದಲ್ಲಿ ಮಾತ್ರ ಬ್ಯಾಂಕುಗಳು ಹೆಚ್ಚು ಹೆಚ್ಚು ಗ್ರಾಹಕರಿಗೆ ಸಾಲ ನೀಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಕೋವಿಡ್ ಸಂಕಷ್ಟದ ಸಮಯದಲ್ಲಿ ಬ್ಯಾಂಕುಗಳು ಸಾರ್ವಜನಿಕರಿಗೆ ಅತ್ಯುತ್ತಮ ಸೇವೆ ನೀಡಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆನರಾ ಬ್ಯಾಂಕಿನ ದಾವಣಗೆರೆ ಕ್ಷೇತ್ರೀಯ ಕಾರ್ಯಾಲಯದ ಸಹಾಯಕ ಮಹಾ ಪ್ರಬಂಧಕ ವೈ.ವಿ.ಎನ್.ಶಿವಪ್ರಸಾದ್ ಮಾತನಾಡಿ, ಬ್ಯಾಂಕಿAಗ್ ಸೌಲಭ್ಯ ಪಡೆಯುವುದು ಪ್ರತಿಯೊಬ್ಬ ದೇಶವಾಸಿಯ ಹಕ್ಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರಕಾರದ ಮತ್ತು ಬ್ಯಾಂಕುಗಳ ಯೋಜನೆಯ ಲಾಭ ಸಿಗಬೇಕು ಎನ್ನುವುದು ನಮ್ಮ ಆಶಯವಾಗಿದೆ. ಪ್ರಧಾನ ಮಂತ್ರಿಗಳ ಸಾಮಾಜಿಕ ಭದ್ರತಾ ಯೋಜನೆಗಳು, ಮುದ್ರಾ, ಸ್ಟಾ÷್ಯಂಡ್ ಅಪ್ ಇಂಡಿಯಾ, ಕೃಷಿ ಮೂಲ ಸೌಕರ್ಯ ನಿಧಿ ಯೋಜನೆ, ಪಿಎಮ್ ಆವಾಸ್ ಯೋಜನೆ, ಪಿ.ಎಂ.ಸ್ವನಿಧಿ, ಪಶು ಸಂಗೋಪನಾ ಮೂಲಸೌಕರ್ಯ ಅಭಿವೃದ್ಧಿ ನಿಧಿ ಯೋಜನೆ, ಸಣ್ಣ ಅತಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿ ನಿಧಿ ಮುಂತಾದ ಅತ್ಯುತ್ತಮ ಯೋಜನೆಗಳು ಜನರಿಗೆ ತಲುಪಿಸಲು ಬ್ಯಾಂಕುಗಳು ಮುತುವರ್ಜಿ ವಹಿಸಲು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಎ.ಚನ್ನಪ್ಪ ಮಾತನಾಡಿ, ಇದು ಮಾಹಿತಿಯುಗ, ತಂತ್ರಜ್ಞಾನ ಯುಗ. ನಮಗೆ ಬೇಕಾದಾಗ ಎಲ್ಲಾ ಮಾಹಿತಿಗಳು ಕೈಬೆರಳಲ್ಲಿ ದೊರೆಯುತ್ತವೆ. ಯಾವ ಬ್ಯಾಂಕ್ ಯಾವ ಯೋಜನೆ ಮೇಲೆ ಎಷ್ಟು ಸಾಲ ನೀಡುತ್ತವೆ. ಅಲ್ಲದೆ ಎಷ್ಟು ಬಡ್ಡಿ ದರ ವಿಧಿಸುತ್ತವೆ ಎನ್ನುವುದು ತಕ್ಷಣವೇ ಸಿಗುತ್ತದೆ ಎಂದರು.

ಸಾಲ ಪಡೆದ ನಂತರ ಸಾಲ ಪಡೆದ ಉದ್ದೇಶಕ್ಕಾಗಿ ಬಳಸಬೇಕಾಗಿ ಬೇಕೆ ವಿನಃ ಬೇರೆ ಉದ್ದೇಶಕ್ಕಾಗಿ ಬಳಸಿಕೊಳ್ಳಬಾರದು. ಆಗ ನಾವು ಸಾಲಗಾರರಾಗಿಯೇ ಉಳಿಯುತ್ತೇವೆ. ಸಾಲ ಪಡೆದ ಸಾಲವನ್ನು ನ್ಯಾಯಯುತವಾಗಿ ಜನರು ಮರು ಪಾವತಿ ಮಾಡಿದಾಗ ಮಾತ್ರ ಜನರು ಸ್ವಾವಲಂಬಿಗಳಾಗುತ್ತಾರೆ. ಅಲ್ಲದೆ ಬ್ಯಾಂಕ್ ಗಳು ಉತ್ತಮವಾಗಿ ಬೆಳೆಯುತ್ತವೆ. ಮಾತ್ರವಲ್ಲ ದೇಶದ ಆರ್ಥಿಕ ಪರಿಸ್ಥಿತಿ ಸದೃಢವಾಗಲಿದೆ ಎಂದರು.

ಲೀಡ್ ಬ್ಯಾಂಕ್ ವಿಭಾಗೀಯ ಪ್ರಬಂಧಕ ಜಿ.ಜಿ.ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅರ್ಥಪೂರ್ಣ ಆಚರಣೆಯ ಭಾಗವಾಗಿ ಕೇಂದ್ರ ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯ ಸೂಚನೆಯಂತೆ ಇಂದು ದೇಶದಾದ್ಯಂತ 75 ಕೇಂದ್ರಗಳಲ್ಲಿ ಗ್ರಾಹಕರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಸಾಲ ಸಂಪರ್ಕ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಜೂನ್ 6ರಿಂದ 12ರ ತನಕ ವಿಶೇಷವಾದ ಸಪ್ತಾಹವನ್ನಾಗಿ ಆಚರಿಸುವ ಮೂಲಕ ಹಣಕಾಸು ಸೇವೆಗೆ ಸಂಬಂಧಪಟ್ಟ ಹಲವಾರು ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದರು.

ಕರ್ನಾಟಕ ರಾಜ್ಯಮಟ್ಟದ ಬ್ಯಾಂಕರುಗಳ ಸಮಿತಿಯ ಉಸ್ತುವಾರಿಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದ ಮೂಲಕ ಎಲ್ಲಾ ಬ್ಯಾಂಕುಗಳ ಸೇವೆಗಳು ಒಂದೇ ವೇದಿಕೆಯಲ್ಲಿ ಸಾರ್ವಜನಿಕರಿಗೆ ಹಾಗೂ ಗ್ರಾಹಕರಿಗೆ ಲಭ್ಯವಾಗಿಸುವುದು ನಮ್ಮ ಉದ್ದೇಶ ಎಂದರು.

ನಬಾರ್ಡ್ನ ಜಿಲ್ಲಾ ವ್ಯವಸ್ಥಾಪಕ ವಿ.ರವೀಂದ್ರ ಮಾತನಾಡಿ, ನಬಾರ್ಡ್ನಿಂದ ನಿರ್ಮಾಣ ಕಾಮಗಾರಿ, ಉತ್ಪಾದಕ ಘಟಕಗಳಿಗೆ ಸಬ್ಸಿಡಿ ಸಹಿತ ಸಾಲ ಸೌಲಭ್ಯ ದೊರಕಲಿದೆ. ಆದರೆ ಕಳೆದ 2ವರ್ಷಗಳಿಂದ ಕೊವುಡ್ ನಿಂದಾಗಿ ಯಾವುದೇ ಸಬ್ಸಿಡಿ ಸಾಲ ನೀಡಲಾಗುತ್ತಿಲ್ಲ. ಅಕ್ಟೋಬರ್ ನಂತರ ಇದು ಮತ್ತೆ ಮುಂದುವರಿಯಲಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹಾಯಕ ಮಹಾಪ್ರಬಂಧಕ ಅನಿಲ್ ಬಿಹಾರಿ, ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಸಹಾಯಕ ಮಹಾಪ್ರಬಂಧಕ ನಾಗೇಶ್ ಪ್ರಭು, ಡಿಡಿಸಿಸಿ ಬ್ಯಾಂಕಿನ ಉಪ ಮಹಾಪ್ರಬಂಧಕ ಗುರುರಾಜ್ ಎನ್.ಅಂಬೇಕರ್ ಇತರರು ಇದ್ದರು. ರಾಘವೇಂದ್ರ ನಾಯರಿ ಕಾರ್ಯಕ್ರಮ ನಿರೂಪಿಸಿದರು. ಎನ್.ರಾಮಮೂರ್ತಿ ಸ್ವಾಗತಿಸಿದರು. ಮೂರ್ತಿನಾಯ್ಕ ವಂದನಾರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕರ್ನಾಟಕ ಗ್ರಾಮೀಣ ಬ್ಯಾಂಕ್, ಬ್ಯಾಂಕ್ ಆಪ್ ಬರೋಡ, ಯೂನಿಯನ್ ಬ್ಯಾಂಕ್ ಆಪ್ ಇಂಡಿಯಾ, ಇಂಡಿಯನ್ ಬ್ಯಾಂಕ್, ಪಂಜಾಬ್ ನಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಕರ್ಣಾಟಕ ಬ್ಯಾಂಕ್, ದಾವಣಗೆರೆ ಡಿಸಿಸಿ ಬ್ಯಾಂಕ್, ಹೆಚ್.ಡಿ.ಎಫ್.ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಕರೂರ್ ವೈಶ್ಯಾ ಬ್ಯಾಂಕ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಮುಂತಾದ ಹಣಕಾಸು ಸಂಸ್ಥೆಗಳು ತಮ್ಮ ಕೌಂಟರ್‌ಗಳನ್ನು ತೆರೆದು ನೂರಾರು ಗ್ರಾಹಕರಿಗೆ ಬ್ಯಾಂಕಿAಗ್ ಸೌಲಭ್ಯಗಳು ಮತ್ತು ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಯಿತು. ಇದೇ ವೇಳೆ ನಾನಾ ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಮುಖಾಂತರ ವಿವಿಧ ಬ್ಯಾಂಕುಗಳಿಂದ ಮಂಜೂರಾದ ಸಾಲಗಳ ಮಂಜೂರಾತಿ ಪತ್ರಗಳನ್ನು ಜಿಲ್ಲಾಧಿಕಾರಿ ಸೇರಿದಂತೆ ಇತರೆ ಅಧಿಕಾರಿಗಳು ವಿತರಿಸಿದರು.

www. garuda voice.com 9740365719 

Leave a Reply

Your email address will not be published. Required fields are marked *

error: Content is protected !!