ಹರಜಾತ್ರೆ ಮುಂದೂಡಿಕೆ: ವಚನಾನಂದ ಶ್ರೀ

ದಾವಣಗೆರೆ: ಕರೋನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಹರಿಹರದ ಪಂಚಮಸಾಲಿ ಮಠದಲ್ಲಿ ಇದೇ ೧೪ ಮತ್ತು ೧೫ ರಂದು ನಡೆಯಬೇಕಿದ್ದ ‘ಹರಜಾತ್ರೆ’ ಯನ್ನು ಮುಂದೂಡಿದ್ದೇವೆ ಎಂದು ಪೀಠಾಧಿಪತಿ ವಚನಾನಂದ ಶ್ರೀಗಳು ಹೇಳಿದರು.

ಹರಿಹರದಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ಇತರೆ ಸಚಿವರು ಮತ್ತು ಶಾಸಕರು ಹರಜಾತ್ರೆಗೆ ಆಗಮಿಸಬೇಕಿತ್ತು. ಆದರೆ, ಕರೋನಾ ಮೂರನೇ ಅಲೆ ಎದುರಾಗಿರುವ ಕಾರಣ ಉಪರಾಷ್ಟ್ರಪತಿಯವರು ಕರೆ ಮಾಡಿ ಮನವಿ ಮಾಡಿದ ಮೇರೆಗೆ ಜಾತ್ರೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದರು.

ಕೊವೀಡ್ ರೂಪಾಂತರಿ ಒಮಿಕ್ರಾನ್ ವೇಗವಾಗಿ ಹರಡುತ್ತಿದ್ದು, ಅದನ್ನು ತಡೆಗಟ್ಟಲು ಸರಕಾರದ ನಿಯಮಗಳನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆದ್ದರಿಂದ ಈ ನಿರ್ಧಾರ ಕೈಗೊಂಡು ಜಾತ್ರೆಯನ್ನು ಮುಂದೂಡಿದ್ದೇವೆ. ಕರೋನಾ ಇಳಿಮುಖವಾದ ತಕ್ಷಣ ಶೀಘ್ರದಲ್ಲಿಯೇ ಮುಂದಿನ ದಿನಾಂಕವನ್ನು ನಿಗದಿಗೊಳಿಸಿ ತಿಳಿಸಲಾಗುತ್ತದೆ ಎಂದು ಹೇಳಿದರು.

ಹರಜಾತ್ರೆ ಹಿನ್ನೆಲೆಯಲ್ಲಿ ಜ.೧೪ ರಂದು ಹರಮಾಲ ಸಮರ್ಪಣೆ ದಿನವನ್ನಾಗಿ ಮನೆಯಲ್ಲಿಯೇ ಆಚರಣೆ ಮಾಡಬೇಕಾಗುತ್ತದೆ. ಅಂದು ಸಮಾಜದ ಬಾಂಧವರು ಮನೆಯಲ್ಲಿ ರುದ್ರಾಕ್ಷಿ ಹಿಡಿದು ಹರ ಜಪ ಮಾಡುತ್ತಾರೆ ಎಂದು ಶ್ರೀಗಳು ತಿಳಿಸಿದರು.

ಜನವರಿ ೧೪ ರಂದು ಮುಖ್ಯಮಂತ್ರಿಗೆ ತುಂಗಭದ್ರಾ ಆರತಿಗೆ ಅಡಿಗಲ್ಲು ಹಾಕಲು ಮನವಿ ಮಾಡಿದ್ದೇವೆ. ಅವರು ದಿನಾಂಕ ಕೊಟ್ಟರೆ ಅವತ್ತೇ ನಾವು ಅಡಿಗಲ್ಲು ಕಾರ್ಯಕ್ರಮ ಮಾಡುತ್ತೇವೆ ಎಂದರು.

Leave a Reply

Your email address will not be published. Required fields are marked *

error: Content is protected !!