40 ಸಾವಿರ ಪೌರ ಕಾರ್ಮಿಕರ ಖಾಯಂಗೆ ಆಗ್ರಹ: ಭಯೋತ್ಪಾದಕರಂತೆ ರಕ್ತ ಹೀರುತ್ತಿರುವ ಗುತ್ತಿಗೆದಾರರು.! ಪೌರ ಕಾರ್ಮಿಕನ ಮಗ ಇಂದು ಶಾಸಕರಾಗಿರುವುದು ಹೆಮ್ಮೆ – ಬಸವಂತಪ್ಪ

ಪೌರ ಕಾರ್ಮಿಕ

ದಾವಣಗೆರೆ: ರಾಜ್ಯದಲ್ಲಿ ಗುತ್ತಿಗೆ ಆಧಾರದ ಮೇಲೆ ಸುಮಾರು 30 ರಿಂದ 40 ಸಾವಿರ ಪೌರ ಕಾರ್ಮಿಕರಿದ್ದು, ಗುತ್ತಿಗೆದಾರರು ಅವರ ರಕ್ತ ಹೀರುತ್ತಿದ್ದಾರೆ. ಕೂಡಲೇ ಸರ್ಕಾರ ಅವರನ್ನು ಖಾಯಂಗೊಳಿಸಿ ಅವರ ಬದುಕಿಗೆ ಆಸರೆಯಾಗಬೇಕೆಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಆಗ್ರಹಿಸಿದರು.

ಗುರುವಾರ ಸದನದ ಗ್ಯಾಲರಿಯಲ್ಲಿ ಪೌರಕಾರ್ಮಿಕರಿಗೆ ಸದನ ವೀಕ್ಷಿಸಲು ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ಸಭಾಪತಿಗಳು ಗೌರವ ಸಲ್ಲಿಸುವ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೆ.ಎಸ್.ಬಸವಂತಪ್ಪ, ನಾನು ಹುಟ್ಟಿದ್ದು ಗಾಂಧಿನಗರ. ನನ್ನ ತಾಯಿ ಹನುಮಕ್ಕ, ತಂದೆ ಸಂಗಪ್ಪ ಇಬ್ಬರೂ ಪೌರ ಕಾರ್ಮಿಕರು. ಅಜಾದ್ನಗರದ ಅಬ್ದುಲ್ ಜಬ್ಬಾರ್ ಮನೆ ಹತ್ತಿರ ನನ್ನ ತಾಯಿಯ ಜೊತೆಗೆ ಕಸ ಹೊಡೆಯಲು ಹೋಗುತ್ತಿದ್ದೆ. ಹೀಗಾಗಿ ಪೌರ ಕಾರ್ಮಿಕರ ಸಮಸ್ಯೆಗಳನ್ನು ಹತ್ತಿರದಿಂದ ನೋಡಿ ಬೆಳೆದಿದ್ದೇನೆ ಎಂದು ತನ್ನ ಬಾಲ್ಯದಲ್ಲಿ ಕಳೆದ ಕಷ್ಟದ ದಿನಗಳ ಬಗ್ಗೆ ವಿವರಿಸಿದರು.

ಒಬ್ಬ ಪೌರ ಕಾರ್ಮಿಕನ ಮಗ ಇವತ್ತು ಶಾಸಕನಾಗಿದ್ದೇನೆ ಎಂದರೆ ನನ್ನ ತಂದೆ-ತಾಯಿಯ ಪಟ್ಟ ಶ್ರಮದಿಂದ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿAದ ಈ ಸದನದಲ್ಲಿ ನಿಂತು ಮಾತನಾಡುವ ಅವಕಾಶ ಸಿಕ್ಕಿದೆ ಎಂದರು.
ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಗುತ್ತಿಗೆದಾರರು ಹಗಲು ದರೋಡೆ ಮಾಡಿ, ಒಂದು ರೀತಿ ಭಯೋತ್ಪಾದಕರಂತೆ ರಕ್ತ ಹೀರುತ್ತಿದ್ದಾರೆ. ಕೂಡಲೇ ಸರ್ಕಾರ ಅವರ ರಕ್ಷಣೆಗೆ ನಿಲ್ಲಬೇಕಾಗಿದೆ.

ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ಬೃಹತ್ ಮಹಾನಗರಪಾಲಿಕೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ 10 ಸಾವಿರ ಪೌರ ಕಾರ್ಮಿಕರನ್ನು ಖಾಯಂಗೊಳಿಸಿದರು. ಈ ವೇಳೆ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದ ಎಚ್.ಆಂಜನೇಯ ಅವರು ರಾಜ್ಯದಲ್ಲಿ ದಿನಗೂಲಿ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ 25 ಸಾವಿರ ಪೌರ ಕಾರ್ಮಿಕರ ಟೆಂಡರ್ ರದ್ದುಗೊಳಿಸಿ ಖಾಯಂಗೊಳಿಸಬೇಕೆಂದು ಒತ್ತಾಯಿಸಿದ್ದರು. ಆಗ ಸಿದ್ದರಾಮಯ್ಯ ಅವರು ಖಾಯಂಗೊಳಿಸಿದ್ದರಿAದ ಇವತ್ತು ಅವರು ನೆಮ್ಮದಿ ಜೀವನ ನಡೆಸುತ್ತಿದ್ದಾರೆ. ಅದೇ ರೀತಿ ಈಗ ರಾಜ್ಯದಲ್ಲಿ ಸುಮಾರು 30 ರಿಂದ 40 ಸಾವಿರ ಪೌರಕಾರ್ಮಿಕರಿದ್ದು, ಅವರನ್ನೂ ಕೂಡ ಸೇವೆ ಖಾಯಂಗೊಳಿಸಬೇಕೆAದು ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಹಕಾರ ಸಚಿವ ಕೆ.ಎನ್.ರಾಜಣ್ಣ, ವಿಧಾನ ಪರಿಷತ್ನಲ್ಲಿ ಶಿಕ್ಷಕರ ಕ್ಷೇತ್ರ ಸೃಷ್ಟಿಸಿ ಅವರನ್ನು ಪ್ರತಿನಿಧಿಸುವವರು ಅವರ ಸಮಸ್ಯೆಗಳ ಕುರಿತು ಧ್ವನಿ ಎತ್ತುವಂತೆ, ಪೌರ ಕಾರ್ಮಿಕರಿಗೂ ಕ್ಷೇತ್ರ ಸೃಷ್ಟಿ ಮಾಡಿ, ಅವರ ಪರವಾಗಿ ಪ್ರತಿನಿಧಿಸುವವರು ಅವರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು ಅನುಕೂಲ ಮಾಡಿಕೊಡುವುದು ಸೂಕ್ತ ಎಂದು ಸಭಾಪತಿಗಳಲ್ಲಿ ಮನವಿ ಮಾಡಿದರು.

Leave a Reply

Your email address will not be published. Required fields are marked *

error: Content is protected !!