ಗ್ರಾಮ ಸ್ವರಾಜ್ಯದ ಕನಸು ನನಸು ಮಾಡುತ್ತಿರುವ ಪ್ರಧಾನಿ! ಘನ ತ್ಯಾಜ್ಯ ಘಟಕಗಳಿಗೆ ಭೂಮಿಪೂಜೆ ನೆರವೇರಿಸಿದ ಆರೋಗ್ಯ ಸಚಿವ ಸುಧಾಕರ್
ಚಿಕ್ಕಬಳ್ಳಾಪುರ: ಗಾಂಧೀಜಿಯವರು ಕಂಡಿದ್ದ ಗ್ರಾಮ ಸ್ವರಾಜ್ಯದ ಕನಸನ್ನು ಪ್ರಧಾನಿ ನರೇಂದ್ರಮೋದಿ ಅವರು ನನಸು ಮಾಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಹಾಕುತ್ತಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅಭಿಪ್ರಾಯಪಟ್ಟರು.
ತಾಲೂಕಿನ ಮಂಡಿಕಲ್ಲು, ಕಮ್ಮಗುಟ್ಟಹಳ್ಳಿ, ಅಡ್ಡಗಲ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬಹುಗ್ರಾಮ ಘನ ತ್ಯಾಜ್ಯ ನಿರ್ವಹಣಾ ಘಟಕಗಳ ನಿರ್ಮಾಣ ಹಾಗೂ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಸ್ವಾಭಿಮಾನ, ಆರೋಗ್ಯದ ಪ್ರಶ್ನೆಯಾಗಿದ್ದ ಸ್ವಚ್ಛತೆಯನ್ನು ದೇಶದ ಮೂಲೆ ಮೂಲೆಗೂ ಅನುಷ್ಠಾನಗೊಳಿಸಲು ಪ್ರಧಾನಿಯವರು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದರು. ಸ್ವಚ್ಛ ಭಾರತ್ ಮಿಷನ್ ಮೂಲಕ ದೇಶದಲ್ಲಿ 10 ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಿ, ಮಹಿಳೆಯರ ಸ್ವಾಭಿಮಾನ ರಕ್ಷಣೆಗೆ ಕೈಗೊಳ್ಳಲಾಗಿದೆ. ಇದಕ್ಕೆ ಪೂರಕವಾಗಿ ಘನತ್ಯಾಜ್ಯ ಘಟಕಗಳ ಸ್ಥಾಪನೆಗೂ ಕ್ರಮ ಕೈಗೊಳ್ಳಲಾಗುತ್ತಿದೆ. ನೈರ್ಮಲ್ಯ ರಕ್ಷಣೆ ಮತ್ತು ಸ್ವಚ್ಛತೆಯಿಂದ ಹಳ್ಳಿಗಳು ಸುಂದರವಾಗಲಿವೆ. ಆ ಮೂಲಕ ಗಾಂಧೀಜಿ ಕಂಡ ಗ್ರಾಮ ಸ್ವರಾಜ್ಯದ ಕನಸು ನನಸಾಗಲಿದೆ ಎಂದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನೀರಾವರಿ, ರಸ್ತೆಗಳ ಅಭಿವೃದ್ಧಿ ಸೇರಿದಂತೆ ಮೂಲ ಸೌಲಭ್ಯಗಳಿಗೆ ಹೆಚ್ಚಿನ ಒತ್ತು ನೀಡುತ್ತಿವೆ. ಸ್ವಚ್ಛತೆಯ ಬಗ್ಗೆ ಗ್ರಾಮೀಣರಲ್ಲಿ ಅರಿವು ಮೂಡಿಸುವ ಮೂಲಕ ಗ್ರಾಮ ಸ್ವರಾಜ್ಯ ನಿರ್ಮಾಣ ಮಾಡಬೇಕು, ತ್ಯಾಜ್ಯ ಘಟಕಗಳ ನಿರ್ಮಾಣದಿಂದ ಅಭಿವೃದ್ಧಿ ಸಾಧ್ಯವಿಲ್ಲ. ಎಲ್ಲರ ಸಹಕಾರದಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯಟ್ಟರು. ಜಲಜೀವನ್ ಮಿಷನ್ ನಡಿ ಮನೆ ಮನೆಗೆ ನಲ್ಲಿ ನೀರು ನೀಡಲಾಗುತ್ತಿದೆ. ಕೇವಲ ಭಾಷಣದಿಂದ ಸಮಾನತೆ ಸಾಧ್ಯವಿಲ್ಲ, ಎಲ್ಲರ ಅಭಿವೃದ್ಧಿಯಿಂದ ಮಾತ್ರ ಸಮಾನತೆ ಸಾಧ್ಯ. ಇದಕ್ಕೆ ನಾನು ಬದ್ಧನಾಗಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲರ ಸಹಕಾರದಿಂದ ಎಲ್ಲರ ಅಭಿವೃದ್ಧಿ ಮತ್ತು ಸಮಾನತೆ ಸಾಧ್ಯವಾಗಲಿದೆ ಎಂದು ಹೇಳಿದರು.
ಮಂಡಿಕಲ್ಲು, ಕಮ್ಮಗುಟ್ಟಹಳ್ಳಿ, ಅಡ್ಡಗಲ್ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 24.64 ಲಕ್ಷ ಹಾಗೂ ನರೇಗಾ ಯೋಜನೆಯಡಿ 17.15 ಲಕ್ಷ ಸೇರಿ ಒಟ್ಟು 41.79 ಲಕ್ಷ ವೆಚ್ಚದಲ್ಲಿ ಬಹುಗ್ರಾಮ ಪಂಚಾಯಿತಿಗಳ ಘನ ತ್ಯಾಜ್ಯ ನಿರ್ವಹಣಾ ಘಟಕಗಳ ನಿರ್ಮಾಣಕ್ಕೆ ಸಚಿವರು ಇದೇ ಸಂದರ್ಭದಲ್ಲಿ ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ರಾಜ್ಯ ಮಾವು ಮತ್ತು ಮಾರುಕಟ್ಟೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ವಿ. ನಾಗರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್, ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ್, ಮಂಡಿಕಲ್ಲು ಹಾಗೂ ಅಡ್ಡಗಲ್ಲು ಗ್ರಾಪಂಗಳ ಪಿಡಿಒಗಳು, ಆಶಾ ಕಾರ್ಯಕರ್ತರು, ಗ್ರಾಪಂ ಅಧ್ಯಕ್ಷರು ಸದಸ್ಯರು ಹಾಜರಿದ್ದರು.
garudavoice21@gmail.com 9740365719