ಪ್ರಜಾಪ್ರಭುತ್ವದ ಆಶಯಗಳನ್ನು ಗಾಳಿಗೆ ತೂರಿ ಕಾಂಗ್ರೆಸ್ ಪ್ರತಿಭಟನೆ! ಸಚಿವ ಸುಧಾಕರ್

ಚಿಕ್ಕಬಳ್ಳಾಪುರ: ಸಂವಿಧಾನದ ಆಶಯಗಳನ್ನು ಕಾಂಗ್ರೆಸ್ ಮುಖಂಡರು ಗಾಳಿಗೆ ತೂರಿ ಬೀದಿಗಿಳಿದಿರುವುದು ವಿಪರ್ಯಾಸ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಕಿಡಿ ಕಾರಿದರು. ಘನತ್ಯಾಜ್ಯ ಘಟಕಗಳಿಗೆ ಭೂಮಿಪೂಜೆ ನೆರವೇರಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಲು ಎಲ್ಲರಿಗೂ ಅವಕಾಶವಿದೆ. ಆದರೆ ಯಾವ ವಿಷಯಕ್ಕೆ, ಯಾವ ಸಂದರ್ಭದಲ್ಲಿ ಮತ್ತು ಯಾಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂಬುದು ಮುಖ್ಯ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುವುದೇ ತಪ್ಪು ಎಂದರೆ ಹೇಗೆ? ಈ ಹಿಂದೆ ಪ್ರಧಾನಿ ಆಗಿದ್ದವರು ವಿಚಾರಣೆ ಎದುರಿಸಿದ್ದಾರೆ. ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ವಿಚಾರಣೆಗೆ ಹಾಜರಾಗಿದ್ದಾಗ ಇವರು ಎಲ್ಲಿ ಹೋಗಿದ್ದರು ಎಂದು ಕಿಡಿ ಕಾರಿದರು.

ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ನಡೆಸಲು ಹೈಕೋಟ್೯ ಅವಕಾಶ ನೀಡಿದೆ. ಆದರೂ ಕಾಂಗ್ರೆಸ್ಸಿಗರು ವಿತಂಡವಾದ ಮಾಡಿ ಪ್ರತಿಭಟನೆ ಮಾಡುತ್ತಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದೇಶದಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಬೀದಿ ಬೀದಿಯಲ್ಲಿ ಪ್ರತಿಭಟನೆ ಮಾಡಿ, ಸಂಚಾರಕ್ಕೆ ಅಡಚಣೆ ಮಾಡಿ, ಜನರಿಗೆ ತೊಂದರೆ ಕೊಟ್ಟು ಏನು ಸಾಧನೆ ಮಾಡಲು ಹೊರಟಿದ್ದಾರೆ, ಈ ದೇಶಕ್ಕೆ ಏನು ಸಂದೇಶ ನೀಡುತ್ತಿದ್ದಾರೆ. ಕಾನೂನು ಒಬ್ಬರಿಗೊಂದು, ಮತ್ತೊಬ್ಬರಿಗೆ ಇನ್ನೊಂದು ಇರಬೇಕಾ, ಸಮಾನತೆ ಬಗ್ಗೆ, ಸಾಮಾಜಿಕ ನ್ಯಾಯ, ಸಂವಿಧಾನದ ಬಗ್ಗೆ ಉಪದೇಶ ನೀಡುವ ಇವರು ಇದ್ಯಾವುದಕ್ಕೂ ಕೊಡದಿದ್ದರೆ ಸರ್ಕಾರಗಳು ಏನು ಮಾಡಬೇಕು
ಎಂದು ಪ್ರಶ್ನಿಸಿದರು.

ರಾಜ್ಯದ ಜನರ ಆರೋಗ್ಯದ ಜವಾಬ್ದಾರಿ ನನ್ನದು. ಆರೋಗ್ಯ ಸಚಿವನಾಗಿ ಜನತೆಯ ಆರೋಗ್ಯ ಕಾಪಾಡುವುದು ನನ್ನ ಕರ್ತವ್ಯ. ಹಾಗಾಗಿ ಇದು ಪ್ರತಿಭಟಿಸುವ ಸಮಯವಲ್ಲ. ಕೋವಿಡ್ ಹೆಚ್ಚಳ ಆದಲ್ಲಿ ಅದಕ್ಕೆ ಪ್ರತಿಭಟನೆ ಕಾರಣ ಆಗುತ್ತದೆ ಎಂದು ಹೇಳಿದ್ದೇನೆ. ಅದನ್ನು ಸರಿಯಿಲ್ಲ ಎಂದರೆ ಏನು ಹೇಳಬೇಕು, ಎರಡನೇ ಅಲೆಯಲ್ಲಿ ಕೋವಿಡ್ ತೀವ್ರವಾದಾಗ ಸರ್ಕಾರವನ್ನು ಟೀಕಿಸಿದ ಇವರು, ಮುಂದಿನ ದಿನಗಳಲ್ಲಿ ಸಮಸ್ಯೆಯಾದರೆ ಯಾರು ಹೊಣೆ ಹೊರುತ್ತಾರೆ? ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್, ಡಿ.ಕೆ. ಶಿವಕುಮಾರ್ ಜವಾಬ್ದಾರರಲ್ಲ, ಡಾ. ಸುಧಾಕರ್ ಮತ್ತು ಬಸವರಾಜಬೊಮ್ಮಾಯಿ ಜವಾಬ್ದಾರರಾಗಬೇಕು ಹಾಗಾಗಿಯೇ ಹೇಳಿದ್ದೇನೆ ಎಂದು ಸಮರ್ಥಿಸಿಕೊಂಡರು.

ಇವರ ಪ್ರತಿಭಟನೆಯನ್ನು ಜನ ಗಮನಿಸುತ್ತಿದ್ದಾರೆ, ಪ್ರಜಾಪ್ರಭುತ್ವದ ನೀತಿ ನಿಯಮಾವಳಿಗಳನ್ನು ಕಗ್ಗೊಲೆ ಮಾಡುತ್ತಿದ್ದಾರೆ, ಎಲ್ಲವನ್ನೂ ಗಾಳಿಗೆ ತೂರಿದ್ದಾರೆ, ಪ್ರತಿಭಟನೆಗಳಿಂದ ತನಿಖಾ ಸಂಸ್ಥೆಯವರು ವಿಚಾರಣೆಗೆ ಕರೆಯಬಾರದು ಎಂದು ಒತ್ತಡ ಹೇರಲು ಪ್ರತಿಭಟನೆ ಮಾಡುತ್ತಿದ್ದಾರೆ. ಇದರಿಂದ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲ ಎಂದು ಹೇಳಿದರು. ಪ್ರತಿಭಟನೆ ನಡೆಸುತ್ತಿರುವ ನಾಯಕರೇ ಆತ್ಮವಿಮರ್ಶೆ ಮಾಡಿಕೊಳ್ಳಲಿ, ದೆಹಲಿಯಿಂದ ಬೆಂಗಳೂರಿನವರೆಗೂ ಅವರು ನಡೆಸಿರುವ ಪ್ರಹಸನವನ್ನು ರಾಜ್ಯದ ಜನರು ಗಮನಿಸುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಜನರೇ ಅವರ ತೀರ್ಮಾನ ನೀಡುತ್ತಾರೆ ಎಂದು ಹೇಳಿದರು.

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!