ದಾವಣಗೆರೆ: ಮಾಸಿಕ ಪಿಂಚಣಿಯನ್ನು 5 ಸಾವಿರ ರೂ.ಗಳಿಗೆ ಹೆಚ್ಚಿಸುವಂತೆ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಜಿಲ್ಲಾ ಸಮಿತಿ ಸರ್ಕಾರಕ್ಕೆ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಸಂಘದ ರಾಜ್ಯ ಉಪಾಧ್ಯಕ್ಷ ಟಿ.ವಿ. ರೇಣುಕಮ್ಮ, ಮಾಸಿಕ ಪಿಂಚಣಿ ಹೆಚ್ಚಳ ಸೇರಿದಂತೆ 14 ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇದೇ ಜೂನ್ 12ರಂದು ಜಿಲ್ಲಾ ಹಾಗೂ ತಾಲ್ಲೂಕು ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ಮಾಸಿಕ ಪಿಂಚಣಿಯನ್ನು 1500 ರೂ.ಗಳಿಂದ ಕನಿಷ್ಟ 3 ಸಾವಿರ ರೂ.ಗಳಿಗೆ ಹೆಚ್ಚಿಸುವಂತೆ ಹಿಂದಿನ ಎಲ್ಲಾ ಸರ್ಕಾರಗಳಿಗೆ ಒತ್ತಾಯಿಸಲಾಗಿತ್ತು. ಪ್ರತಿಭಟನೆಯನ್ನೂ ನಡೆಸಿದ್ದೆವು. ಆದರೆ ಯಾವ ಸರ್ಕಾರವೂ ಹೆಚ್ಚಿಸಲಿಲ್ಲ ಎಂದವರು ಹೇಳಿದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಠ ಪಂಗಡಗಳ ಜನ ಸಂಖ್ಯೆಗನುಗುಣವಾಗಿ ಅನುದಾನ 30,000 ಕೋಟಿ ರೂ. ಸುಮಾರು ಅನುದಾನ ಬಿಡುಗಡೆಯಾಗುತ್ತಿದ್ದರೂ ನಮ್ಮ ಗಳ ಅನುದಾನವನ್ನು ಯಾಕೆ ಹಿಚ್ಚಿಸುತ್ತಿಲ್ಲವೆಂಬುದು ಯಕ್ಷ ಪ್ರಶ್ನೆಯಾಗಿದೆ. ಈಗಲಾದರೂ ಮತ್ತು ನಮ್ಮ ಅನುದಾನ ಹೆಚ್ಚಿಸಿಯಾದರೂ ನಮ್ಮಗಳ ಮಾಸಿಕ ಸಹಾಯಧನವನ್ನು ಬೆಲೆ ಏರಿಕೆಯಂತೆ ಕನಿಷ್ಟ 5,000 ರೂಗಳಿಗೆ ಹೆಚ್ಚಿಸಿ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿದರು.
ಗಣತಿ ಪಟ್ಟಿಯಿಂದ ಹೊರಗಿರುವ ಮಹಿಳೆಯರ ಸೇರ್ಪಡೆಗೆ ಅನಗತ್ಯ ತಕರಾರು ತೆಗೆಯಲಾಗುತ್ತಿದೆ. ಅಪಮಾನಿತ ಮತ್ತು ದಮನಿತ ಮಕ್ಕಳ ಅದರಲ್ಲೂ ಪರಿತ್ಯಕ್ತ ಹೆಣ್ಣು ಮಕ್ಕಳ ಗಣತಿ ಮಾಡುವ ಕಾರ್ಯವನ್ನು ಕೈಗೊಳ್ಳದೇ ದೌರ್ಜನ್ಯದ ದೇವದಾಸಿ ಪದ್ಧತಿಯನ್ನು ಬೆಳೆಯಲು ಬಿಡಲಾಗುತ್ತಿದೆ ಎಂದು ಆರೋಪಿಸಿದರು.
ದೇವದಾಸಿ ಮಹಿಳೆಯರ ಮದುವೆಗೆ ಪ್ರೋತ್ಸಾಹ ಧನ ಹೆಚ್ಚಿಸಬೇಕು. ದೇವದಾಸಿ ಮಕ್ಕಳ ಹಾಗೂ ಕುಟುಂಬದವ ಸದಸ್ಯರನ್ನು ಗಣತಿ ಮಾಡಿ ಅವರಿಗೆ ಪುನರ್ವಸತಿ ಕಲ್ಪಿಸಬೇಕು. ವ್ಯವಸಾಯದಲ್ಲಿ ತೊಡಗಲು ಉಚಿತ ನೀರಾವರಿ ಜಮೀನು ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆೆ ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷೆ ಚೆನ್ನಮ್ಮ, ಸಹ ಕಾರ್ಯದರ್ಶಿಗಳಾದ ಮೈಲಮ್ಮ, ಮಂಜಳ, ಜಿಲ್ಲಾ ಕಾರ್ಯದರ್ಶಿ ಆನಂದರಾಜು ಇತರರು ಉಪಸ್ಥಿತರಿದ್ದರು.
