ದಾವಣಗೆರೆ: ಇದೇ ಜೂನ್ 12 ರಿಂದ 26ರವರೆಗೆ ಜರ್ಮನಿಯ ಬರ್ಲಿನ್ ನಲ್ಲಿ ನಡೆಯಲಿರುವ ಅಂತರ್ ರಾಷ್ಟ್ರೀಯಮಟ್ಟದ ಸ್ಪೆಷಲ್ ಓಲಂಪಿಕ್ಸ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ದಾವಣಗೆರೆಯ ಸುಶ್ರುತ್ ಎಂ.ಎಸ್. ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂವೇದ ವಿಶೇಷ ಶಾಲೆಯ ಪ್ರಾಂಶುಪಾಲ ಎಸ್.ನಾಗರಾಜ್, ಬೌದ್ಧಿಕ ಸವಾಲು ಎದುರಿಸುತ್ತಿರುವ ಮಕ್ಕಳಿಗಾಗಿ ಈ ಸ್ಪೆಷಲ್ ಓಲಂಪಿಕ್ಸ್ ಸ್ಪರ್ಧೆಗಳು ನಡೆಯುತ್ತಿವೆ ಎಂದು ಹೇಳಿದರು.
ದಾವಣಗೆರೆಯ ಮಂಜುನಾಥ ಹಾಗೂ ಮಮತ ಇವರ ಪುತ್ರ ಸುಶ್ರುತ್ ಅವರನ್ನು ವಿಶೇಷ ತರಬೇತಿಗಾಗಿ 2013ರಲ್ಲಿ ಸಂವೇದ ವಿಶೇಷ ಶಾಲೆ (ಬೌದ್ಧಿಕ ಸವಾಲನ್ನೆದುರಿಸುತ್ತಿರುವ ಮಕ್ಕಳ ಶಾಲೆ) ಪ್ರವೇಶ ಪಡೆದಿದ್ದರು.
ಶಾಲೆಯ ದೈಹಿಕ ಶಿಕ್ಷಕ ದಾದಾಪೀರ್ ಅವರು ಈ ಹುಡುಗನಿಗೆ ತರಬೇತಿ ನೀಡುವಾಗ ಇವರಲ್ಲಿನ ಹೆಚ್ಚಿನ ಕ್ಷಮತೆ ಗಮನಿಸಿ ಸೈಕ್ಲಿಂಗ್ ತರಬೇತಿ ಕೊಡಲಾರಂಭಿಸಿದ್ದರು.
ಶ್ರಮದಿಂದ ಸೈಕ್ಲಿಂಗ್ ತರಬೇತಿ ಪಡೆದ ಸುಶ್ರುತ್, 2021ರ ನವೆಂಬರ್‌ನಲ್ಲಿ ಮಂಗಳೂರಿನಲ್ಲಿ ನಡೆದ ಸ್ಪೆಷಲ್ ಓಲಂಪಿಕ್ಸ್ ರಾಜ್ಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ 5 ಕಿ.ಮೀ.ನಲ್ಲಿ ಪ್ರಥಮ ಸ್ಥಾನ ಪಡೆದಿದ್ದರು ಎಂದು ವಿವರಿಸಿದರು.
2022ಜುಲೈ 21 ರಿಂದ 24ರವರೆಗೆ ಜಾರ್‌ಖಂಡ್‌ನ ಬಕಾರೋದಲ್ಲಿ ನಡೆದ ರಾಷ್ಟ್ರಮಟ್ಟದ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ 5 ಕಿ.ಮೀ.ನಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. ನಂತರ 3 ನ್ಯಾಷನಲ್ ಕೋಚಿಂಗ್ ಕ್ಯಾಂಪ್‌ನಲ್ಲಿ ಭಾಗಹಿಸಿ, ಇದೀಗ ಅಂತರ್ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದರು.
ಸಂವೇದ ವಿಶೇಷ ಶಾಲೆಯು ಬೌದ್ಧಿಕ ಸವಾಲನ್ನೆದುರಿಸುತ್ತಿರುವ ಮಕ್ಕಳಿಗೆ ಸಂಶೋಧನಾಧಾರಿತ ತರಬೇತಿಯನ್ನು ಕಳೆದ 18 ವರ್ಷಗಳಿಂದ ನೀಡುತ್ತ ಬರುತ್ತಿದೆ. ಸುಮಾರು 150 ವಿದ್ಯಾರ್ಥಿಗಳು ಇಲ್ಲಿ ತರಬೇತಿಯನ್ನು 25 ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಾಗುತ್ತದೆ ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ತರಬೇತುದಾರ ದಾದಾಪೀರ್, ಎಂ.ಎಸ್. ಸುಶ್ರುತ್, ತಾಯಿ ಮಮತಾ, ತಂದೆ ಮಂಜುನಾಥ್, ಮಧುಸೂಧನ್, ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.
