raksha bandhan; ಸಂಬಂಧ ಬೆಸೆಯುವ ಭರವಸೆಯ ಆಶಾಕಿರಣ-ಆಕಾಶ್ ಗೌಡ್ರ, ವಿದ್ಯಾರ್ಥಿ
ರಕ್ಷಾ ಬಂಧನ (raksha bandhan) ಬರಿ ಒಂದು ಆಚರಣೆಯಲ್ಲ ಅದು ಸಂಬಂಧಗಳನ್ನು ಬೆಸೆಯುವಂತಹ ಭರವಸೆಯ ಆಶಾ ಕಿರಣವನ್ನು ಮೂಡಿಸಿ ಹೆಣ್ಣಿನ ರಕ್ಷಣೆಗೆ ನಮ್ಮ ಹಿರಿಯರು ನಮಗೆ ರೂಡಿಸಿಕೊಟ್ಟ ಒಂದು ಸಂಪ್ರದಾಯ. ಅಣ್ಣನಾದವನು ಅಕ್ಕ ತಂಗಿಗೆ ತಾನು ಬದುಕಿರುವವರೆಗೂ ರಕ್ಷಣೆ ನೀಡುತ್ತಾನೆ ಎಂಬ ನಂಬಿಕೆ ಇಟ್ಟಿರುತ್ತಾರೆ. ಅಣ್ಣನ ಶ್ರೇಯಸಲ್ಲೆತನ್ನ ಜೀವನವಿದೆ ಎಂದು ನಂಬಿ ಕಟ್ಟುವ ರಾಖಿಗೆ ಉಡುಗೊರೆ ಕೊಡುವುದಕ್ಕಿಂತ ಬೆಲೆ ಕಟ್ಟಲಾಗದ ನಂಬಿಕೆ ಎಂಬ ಉಡುಗೊರೆಯನ್ನು ರಕ್ಷಣೆ ಎಂಬ ಪಾತ್ರೆಯಲ್ಲಿಟ್ಟು ನೀಡಿದರೆ ಸಾಕು ಅದುವೇ ಬೆಲೆ ಕಟ್ಟಲಾಗದ ಸಂಬಂಧಗಳಿಗೆ ಬೆಲೆಬಾಳುವ ಉಡುಗೊರೆ ಆಗುತ್ತದೆ.
ನಮ್ಮ ದೇಶದಲ್ಲಿ ಭಾವನಾತ್ಮಕ ಸಂಬಂಧಗಳಿಗೆ ಹೆಚ್ಚಿನ ಮಾನ್ಯತೆ ನೀಡಲಾಗುತ್ತದೆ. ಅಣ್ಣ ತಂಗಿಯರ ಸಂಬಂಧ ಸಾಗರದ ಮುತ್ತಿಗಿಂತಲೂ ಪವಿತ್ರವಾದದ್ದು. ಕೇವಲ ಒಡಹುಟ್ಟಿದವರಲ್ಲದೆ ಹೊರಗಿನವರನ್ನು ಕೂಡ ಸಹೋದರರಂತೆ ಭಾವಿಸಿ ನಡೆದುಕೊಳ್ಳಬೇಕೆಂಬ ಸಂದೇಶವನ್ನು ಸಮಾಜಕ್ಕೆ ಸಾರುವ ಹಬ್ಬವೇ ರಾಕಿ ಹಬ್ಬ. ಪುರಾತನ ಕಾಲದಿಂದಲೂ ನಮ್ಮ ದೇಶದಲ್ಲಿ ರಾಖಿ ಹಬ್ಬವು ತನ್ನದೇ ಆದ ಮಹತ್ವವನ್ನು ಪಡೆದಿದೆ.
ಒಳ್ಳೆಯ ಸಹೋದರನೊಬ್ಬ ರಕ್ತ ಹಂಚಿಕೊಂಡೆ ಹುಟ್ಟಬೇಕೆಂದಿಲ್ಲ, ಬೆನ್ನಿಗೆ ಬಿದ್ದವನೇ ತಮ್ಮನೆಂದೇನೂ ಇಲ್ಲ, ರಕ್ಷಣೆಯ ಭಾರ ಅಣ್ಣನೊಬ್ಬನ ಹೆಗಲ ಮೇಲಿಲ್ಲ. ಅಣ್ಣನಷ್ಟೆ ಅಲ್ಲದೆ ಪ್ರಾಮಾಣಿಕವಾಗಿ ತನ್ನವರೆಂದುಕೊಳ್ಳುವ ಆತ್ಮೀಯ ಭಾವವನ್ನು ತೋರಿಸುವ ಹೆಣ್ಣಿನ ಮಾನ ಪ್ರಾಣ ರಕ್ಷಿಸುವ ಪ್ರತಿಯೊಬ್ಬರು ಅಣ್ಣ-ತಮ್ಮಂದಿರೇ ಆಗುತ್ತಾರೆ. ಆದರೆ ಇಂದು ರಾಕಿ ಹಬ್ಬವನ್ನು ಕೇವಲ ಒಂದು ಶೋಕಿಗಾಗಿ ಆಚರಿಸಲಾಗುತ್ತಿದ್ದು, ಇದರ ಮೂಲ ಉದ್ದೇಶದ ಮೌಲ್ಯವನ್ನೇ ಕಳೆದುಕೊಂಡು ಬರಿ ತೋರಿಕೆಯ ಆಚರಣೆಯಾಗಿ ಬದಲಾಗುತ್ತಿರುವುದು ವಿಪರ್ಯಾಸ.
ಆಕಾಶ್ ಗೌಡ್ರ
ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ
ದಾವಣಗೆರೆ ವಿಶ್ವವಿದ್ಯಾನಿಲಯ