ರೈಲಿನಲ್ಲಿ ಗದ್ದಲ ಎಬ್ಬಿಸಿದ ಅಪರಿಚಿತರು: ಸಿಟ್ಟಾದ ರಾಮಭಕ್ತರು, ಒಂದೂವರೆ ಗಂಟೆ ರೈಲು ತಡೆ
ಹೊಸಪೇಟೆ : ಅಯೋಧ್ಯೆಯಿಂದ ಮೈಸೂರಿನತ್ತ ತೆರಳುತ್ತಿದ್ದ ರೈಲನ್ನು ಒಂದೂವರೆ ಗಂಟೆಗಳ ಕಾಲ ರಾಮಭಕ್ತರು ತಡೆದ ಘಟನೆ ಇಲ್ಲಿನ ರೈಲು ನಿಲ್ದಾಣದಲ್ಲಿ ನಡೆಯಿತು.
ರೈಲಿನ ಬೋಗಿಯೊಂದಕ್ಕೆ ಹತ್ತಿದ ಅಪರಿಚಿತರು ಕೆಲವೊಂದು ಪ್ರಚೋದನಕಾರಿ ಮಾತು ಆಡಿದ್ದರಿಂದ ಸಿಟ್ಟಿಗೆದ್ದ ರೈಲಿನೊಳಗಿದ್ದ ರಾಮಭಕ್ತರು ಗದ್ದಲ ಎಬ್ಬಿಸಿ, ರೈಲು ತಡೆದಿದ್ದಾರೆ.
ಪ್ರಚೋದನಕಾರಿಯಾಗಿ ಮಾತನಾಡಿದ ವ್ಯಕ್ತಿಗಳನ್ನು ರೈಲಿನೊಳಗಿದ್ದವರು ಹಿಡಿದು ರೈಲ್ವೆ ಪೊಲೀಸರಿಗೆ ಒಪ್ಪಿಸಿದ್ದರು. ಆದರೆ ಅವರನ್ನು ಬಂಧಿಸದೆ ಬಿಟ್ಟು ಕಳುಹಿಸಲಾಗಿದೆ ಎಂದು ಆರೋಪ ಕೇಳಿಬಂದ ಕಾರಣ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವಂತಾಯಿತು.
ವಿಷಯ ತಿಳಇದು ನೂರಾರು ಸಂಖ್ಯೆಯಲ್ಲಿ ಬಿಜೆಪಿ ಮತ್ತು ಹಿಂದೂಪರ ಕಾರ್ಯಕರ್ತರೂ ರೈಲು ನಿಲ್ದಾಣದಲ್ಲಿ ಜಮಾಯಿಸಿದ್ದರಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಕೂಡಲೇ ಸ್ಥಳಕ್ಕೆ ಧಾವಿಸಿದ ಎಸ್‌ಪಿ ಶ್ರೀಹರಿಬಾಬು ಬಿ.ಎಲ್. ಮತ್ತು ಹಲವು ಠಾಣೆಗಳ ಪೊಲೀಸರು ಸಮಾಧಾನಪಡಿಸುವ ಕೆಲಸ ಮಾಡಿದರು. ಬಿಜೆಪಿ ನಾಯಕರು ಸಹ ಉದ್ರಿಕ್ತರನ್ನು ಸಮಾಧಾನಪಡಿಸುವ ಕೆಲಸ ಮಾಡಿದ್ದಾರೆ.
ಹುಬ್ಬಳ್ಳಿ, ಗದಗ, ಕೊಪ್ಪಳ ಮೂಲಕ ರಾತ್ರಿ 8.40ಕ್ಕೆ ನಿಲ್ದಾಣಕ್ಕೆ ಬಂದಿದ್ದ ಈ ಅಯೋಧ್ಯಾ ವಿಶೇಷ ರೈಲು 10 ಗಂಟೆ ಸುಮಾರಿಗೆ ಬಳ್ಳಾರಿಯತ್ತ ತೆರಳಿತು.
ರೈಲಿನ ಎರಡನೇ ಬೋಗಿಗೆ ಮೂವರು ಅಪರಿಚಿತರು ಹತ್ತಿದ್ದರು. ಆಗ ಅಲ್ಲಿ ರಾಮಭಕ್ತರಿಂದ ಭಜನೆ ನಡೆಯುತ್ತಿತ್ತು. ಇದನ್ನು ಕೇಳಿ ಸಹಿಸಲಾಗದ ಈ ಮೂವರು ಪ್ರಚೋದನಕಾರಿಯಾಗಿ ಮಾತನಾಡಿದರು ಎಂದು ಹೇಳಲಾಗುತ್ತಿದೆ.