ಭದ್ರಾ ಅಚ್ಚುಕಟ್ಟು ರೈತರೊಂದಿಗೆ ಸಭೆ ಭದ್ರಾ ಬಲದಂಡೆ ಕಾಲುವೆಯಲ್ಲಿ ಕೊನೆಭಾಗದ ರೈತರಿಗೆ ನೀರು ತಲುಪಿಸಲು ಕ್ರಮ; ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ

ಬಲದಂಡೆ ಕಾಲುವೆ

ದಾವಣಗೆರೆ; ಫೆ.23 (ಕರ್ನಾಟಕ ವಾರ್ತೆ) : ಈ ಭಾರಿಯ ಮಳೆಕೊರತೆಯಿಂದ ಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದ್ದರಿಂದ ಬೇಸಿಗೆ ಹಂಗಾಮಿನಲ್ಲಿ ಬೆಳೆದಿರುವ ತೋಟಗಾರಿಕೆ ಬೆಳೆಗಳಿಗೆ ಹಾಗೂ ಕುಡಿಯುವ ನೀರಿಗಾಗಿ ಸರದಿಯಲ್ಲಿ ನೀರು ಬಿಡುಗಡೆ ಮಾಡಲಾಗಿದ್ದು ಕೊನೆಭಾಗದ ರೈತರಿಗೆ ನೀರು ತಲುಪದೇ ಸಂಕಷ್ಟ ಎದುರಿಸುತ್ತಿದ್ದು ಕೊನೆ ಭಾಗದ ರೈತರಿಗೆ ನೀರು ಕೊಡಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ: ವೆಂಕಟೇಶ್ ಎಂ.ವಿ ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ತುಂಗಭದ್ರಾ ಸಭಾಂಗಣದಲ್ಲಿ ತ್ಯಾವಣಿಗಿ, ಮೆಳ್ಳೆಕಟ್ಟೆ, ಹಿರೇಮಳಲಿ, ವಲಯ 2 ರ ರೈತ ಮುಖಂಡರು, ರೈತರೊಂದಿಗೆ ಸಭೆ ನಡೆಸಿ ಮಾತನಾಡಿದರು. ಫೆಬ್ರವರಿ 16 ರಂದು ಕಾಲುವೆಗೆ ನೀರು ಬಿಟ್ಟಿದ್ದರೂ ಕೊನೆ ಭಾಗದ ರೈತರಿಗೆ ನೀರು ತಲುಪಿರುವುದಿಲ್ಲ, ನೀರು ಬಂದಿದ್ದರೂ ಸರಿಯಾಗಿ ಹಾಯಿಸಲು ಸಾಧ್ಯವಾಗಿರುವುದಿಲ್ಲ. ಇದರಿಂದ ರೈತರು ಬೆಳೆದಿರುವ ತೋಟಗಾರಿಕೆ, ಕಬ್ಬು, ಭತ್ತದ ಬೆಳೆಗಳಿಗೆ ನೀರಿಲ್ಲದೆ ಒಣಗುತ್ತಿವೆ ಎಂದು ಪ್ರತಿಭಟನೆ ಮಾಡುತ್ತಿದ್ದಾರೆ.
ಜಲಾಶಯದಲ್ಲಿನ ನೀರಿನ ಸಂಗ್ರಹದ ಆಧಾರದ ಮೇಲೆ ನೀರಿನ ಹಂಚಿಕೆಯಾಗಿದ್ದು ಕಾಲುವೆಗೆ ಅಳವಡಿಸಿರುವ ಅನಧಿಕೃತ ಪಂಪ್‍ಸೆಟ್‍ಗಳನ್ನು ತೆರವು ಮಾಡುವ ಮೂಲಕ ಕಾಲುವೆಯಲ್ಲಿ ಹೆಚ್ಚಿನ ನೀರು ಹರಿಸುವ ಮೂಲಕ ಕೊನೆ ಭಾಗಕ್ಕೆ ನೀರು ತೆಗೆದುಕೊಂಡು ಹೋಗಬೇಕಾಗಿದೆ ಜಿಲ್ಲಾಧಿಕಾರಿಯವರು ತಿಳಿಸಿದರು.

ಬಲದಂಡೆ ಕಾಲುವೆ ಬಲದಂಡೆ ಕಾಲುವೆ
ಈಗಿನ ವೇಳಾಪಟ್ಟಿಯಂತೆ ಫೆಬ್ರವರಿ 28 ರ ವರೆಗೆ ನೀರು ಬಿಡಲಾಗುತ್ತಿದ್ದು ಇದನ್ನು ಕೆಲವು ದಿನ ಮುಂದುವರೆಸಲು ಸಚಿವರ ಗಮನಕ್ಕೆ ತರಲಾಗುತ್ತದೆ. ಮತ್ತು ಕಾಲುವೆಯಲ್ಲಿ ಹೆಚ್ಚಿನ ಕ್ಯೂಸೆಕ್ಸ್ ನೀರು ಹರಿಸಲು ಮತ್ತು ಭದ್ರಾವತಿ ಭಾಗದಲ್ಲಿ ಅನಧಿಕೃತವಾಗಿ ಹಾಕಿರುವ ಕೊಳವೆಬಾವಿ ತೆರವಿಗೂ ಮನವಿ ಮಾಡಲಾಗುತ್ತದೆ. ಕಾಲುವೆ ಮೇಲ್ಬಾಗದಲ್ಲಿನ  ರೈತರಿಗೆ ಸಾಕಷ್ಟು ನೀರು ಲಭ್ಯವಾಗಿದ್ದು ಕೊನೆ ಭಾಗದ ರೈತರ ಹಿತದೃಷ್ಟಿಯಿಂದ ನೀರನ್ನು ಬಳಕೆ ಮಾಡದಂತೆ ಮನವಿ ಮಾಡಲಾಗುತ್ತದೆ ಎಂದರು.
ಚನ್ನಗಿರಿ ತಾ; ಸೇರಿದಂತೆ ಕಾಲುವೆಯ ಅಕ್ಕಪಕ್ಕದಲ್ಲಿ ಅನಧಿಕೃತವಾಗಿ ಪಂಪ್‍ಸೆಟ್ ಅಳವಡಿಸಿರುವುದನ್ನು ಈಗಾಗಲೇ ತೆರವಿಗೆ ಸೂಚನೆ ನೀಡಲಾಗಿದೆ. ವಿದ್ಯುತ್ ಸರಬರಾಜು ನಿಲ್ಲಿಸಲಾಗಿದೆ. ಆದರೂ ಸಹ ನೀರೆತ್ತಿದರೆ ಪಂಪ್‍ಸೆಟ್ ವಶಕ್ಕೆ ಪಡೆಯಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್ ಮಾತನಾಡಿ ಕಾಲುವೆಯಲ್ಲಿ  ಹೂಳೆತ್ತಲು ಖಾತರಿಯಡಿ 4 ಲಕ್ಷ ಮಾನವದಿನಗಳ ಸೃಜನೆಗೆ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ ತೇಜಸ್ವಿ ಪಟೇಲ್, ರೈತ ಮುಖಂಡರಾದ ಕೆ.ಎನ್.ಮಂಜುನಾಥ್, ಹನುಮಂತಪ್ಪ, ಕೋಳೇನಹಳ್ಳಿ ಸತೀಶ್, ಧನಂಜಯ ಕಡ್ಲೆಬಾಳು, ಮಲ್ಲೇಶಪ್ಪ ಈ ರೈತರು ಸಭೆಯಲ್ಲಿ ಮಾತನಾಡಿದರು.
ಹೆಚ್ಚುವರಿ ರಕ್ಷಣಾಧಿಕಾರಿ ವಿಜಯಕುಮಾರ್ ಎಂ.ಸಂತೋಷ್, ಉಪವಿಭಾಗಾಧಿಕಾರಿ ದುರ್ಗಶ್ರೀ, ಹರ್ಷ, ನೀರಾವರಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ್, ಬೆಸ್ಕಾಂ ಇ.ಇ ಪಾಟೀಲ್ ಹಾಗೂ ವಿವಿಧ ರೈತರು ಸಭೆಯಲ್ಲಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!