ದಾವಣಗೆರೆ: ಶ್ರೀ ವಾಗ್ದೇವಿ ಭಜನಾ ಮಂಡಳಿ ವತಿಯಿಂದ ಪಿಬಿ ರಸ್ತೆಯಲ್ಲಿರುವ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥ ಹಾಗೂ ಅಧಿಕ ಶ್ರಾವಣ ಮಾಸ ಪ್ರಯುಕ್ತ ೧೧ ಬಾರಿ ವಿಷ್ಣು ಸಹಸ್ರನಾಮ ಪಾರಾಯಣ ಹಾಗೂ ೧೦೮ ಸದಸ್ಯೆಯರಿಗೆ ಮಡಲಕ್ಕಿ ಕಾರ್ಯಕ್ರಮವನ್ನು ಬುಧವಾರದಂದು ಹಮ್ಮಿಕೊಳ್ಳಲಾಗಿತ್ತು.
ಬೆಳಿಗ್ಗೆ ೮ ಗಂಟೆಯಿಂದಲೇ ಆರಂಭವಾದ ವಿಷ್ಣುಸಹಸ್ರನಾಮ ಪಾರಾಯಣದಲ್ಲಿ ೧೧ ತಂಡಗಳು ಪಾಲ್ಗೊಂಡಿದ್ದರು. ಪಾರಾಯಣ ನಂತರ ಶ್ರೀಮನ್ನಾರಾಯಣ, ಆಂಜನೇಯ, ಶ್ರೀ ಬೀರಲಿಂಗೇಶ್ವರ ಹಾಗೂ ಚೌಡೇಶ್ವರಿ ದೇವಿಗೆ ಮಹಾಮಂಗಳಾರತಿ ಹಾಗೂ ನೆರೆದಿದ್ದವರಿಗೆ ಅನ್ನಸಂತರ್ಪಣೆ ಮಾಡಲಾಯಿತು.
ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ್ದ ನಳಿನಿ ಅಚ್ಯುತ್ ಹಾಗೂ ಪ್ರಭಾ ರವೀಂದ್ರ ಅವರು ಮೊದಲಿಗೆ ಚೌಡೇಶ್ವರಿ ದೇವಿಗೆ ಮಡಲಕ್ಕಿ ತುಂಬಿದರು. ನಂತರ ೧೦೮ ಮುತ್ತೈದೆಯರಿಗೆ ಶಾಸ್ತ್ರೋಕ್ತವಾಗಿ ಮಡಲಕ್ಕಿ ತುಂಬಿಸಲಾಯಿತು.
ಇದೇ ವೇಳೆ ಈ ಧಾರ್ಮಿಕ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟ ದೇವಸ್ಥಾನ ಧರ್ಮದರ್ಶಿ ಮಂಡಳಿಯವರಿಗೆ ಭಜನಾ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕಾರ್ಯದರ್ಶಿ ಜೆ.ಕೆ. ಕೊಟ್ರಬಸಪ್ಪ, ಬಿಜಾಪುರದ ಸಿದ್ದೇಶ್ವರ ಸ್ವಾಮಿಗಳು ಉಪನ್ಯಾಸ ನೀಡಲು ದಾವಣಗೆರೆಗೆ ಆಗಮಿಸಿದಾಗ ಬರುತ್ತಿದ್ದ ಜನಸ್ತೋಮದಂತೆ ಇಲ್ಲಿ ಪ್ರತಿನಿತ್ಯ ಭಜನಾ ಮಂಡಳಿಯ ಸದಸ್ಯರು ಸೇರಿಕೊಂಡು ಪಾರಾಯಣ, ಭಜನೆ ಮಾಡುತ್ತಿದ್ದೀರಿ. ನಮ್ಮ ಧಾರ್ಮಿಕ ಸಂಸ್ಕೃತಿಯನ್ನು ಪಸರಿಸುತ್ತಿರುವ ನಿಮ್ಮ ಕಾರ್ಯಕ್ಕೆ ನಮ್ಮಗಳ ಸಹಕಾರ ಸದಾ ಇರುತ್ತದೆ ಎಂದು ಭರವಸೆಯ ಮಾತುಗಳನ್ನಾಡಿದರು.
ಕಾರಿಗನೂರು ತಿಪ್ಪಣ್ಣ ಮಾತನಾಡಿ, ಸೇವೆಯ ಮೂಲಕ ದೇವರನ್ನು ಕಾಣುತ್ತಿರುವ ನಿಮಗೆ ನಾವು ಸಹಕಾರ ನೀಡಲಿದ್ದೇವೆ ಎಂದರು. ದೇವಸ್ಥಾನ ಮಂಡಳಿಯ ಸಂಗಪ್ಪ, ಹನುಮಂತಪ್ಪ, ಪರಮೇಶ್ವರಪ್ಪ, ಗುತ್ಯಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ರಾಜು ಬನ್ನಿಕಟ್ಟಿ ಉಪಸ್ಥಿತರಿದ್ದರು.
ಈ ಎಲ್ಲಾ ಕಾರ್ಯಕ್ರಮಗಳನ್ನು ವಾಗ್ದೇವಿ ಭಜನಾ ಮಂಡಳಿಯ ಅಧ್ಯಕ್ಷೆ ಕನ್ಯಾಕುಮಾರಿ, ಕಾರ್ಯದರ್ಶಿ ಸ್ವರ್ಣಲತಾ ಹಾಗೂ ಖಜಾಂಚಿ ಆರ್.ಡಿ. ಗೀತಾ ಅವರ ನೇತೃತ್ವದಲ್ಲಿ ಎಲ್ಲ ಸದಸ್ಯೆಯರು ಕೂಡಿ ನಡೆಸಿಕೊಟ್ಟರು
