ಮೇಲ್ಮನೆಯಲ್ಲಿ ಮಾಧ್ಯಮಕ್ಕೆ ಪ್ರಾತಿನಿಧ್ಯ: ಹೊರಟ್ಟಿ ಭರವಸೆ

ದಾವಣಗೆರೆ: ರಾಜ್ಯ, ರಾಷ್ಟçದಲ್ಲಿ ಸುಧಾರಣೆ ಕಾಣಬೇಕಾದರೆ ಮಾಧ್ಯಮದಿಂದ ಮಾತ್ರ ಸಾಧ್ಯ. ನಾಲ್ಕನೇ ರಂಗಕ್ಕೂ ವಿಧಾನ ಪರಿಷತ್ತಿನಲ್ಲಿ ಸ್ಥಾನವಿದೆ ಆದರೆ ಅದನ್ನು ತೆಗೆದುಕೊಂಡಿಲ್ಲ. ಖಾದ್ರಿ ಶ್ಯಾಮಣ್ಣನವರು ಪತ್ರಿಕಾ ರಂಗದಲ್ಲಿ ಇರುವುದರಿಂದಲೇ ಅವರಿಗೆ ಸದಸ್ಯತ್ವ ನೀಡಲಾಗಿತ್ತು. ಆಕಸ್ಮಿಕವಾಗಿ ಅಂತಹ ಸಂದರ್ಭ ಬಂದರೆ ಮಾಧ್ಯಮದವರ ಹೆಸರನ್ನೇ ಸೂಚಿಸುತ್ತೇನೆ.ಮಾಧ್ಯಮದವರು ಸಂಗೀತಗಾರರು, ಶಿಕ್ಷಣತಜ್ಞರು ಇರಬೇಕಿದೆ ಬರುವಂತ ದಿನಗಳಲ್ಲಿ ಮುಖ್ಯಮಂತ್ರಿಗೆ ನಾನು ಮನವಿ ಸಲ್ಲಿಸುತ್ತೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.

ನಗರದ ಪಾರ್ವತಮ್ಮ ಶಾಮನೂರು ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಇದೊಂದು ಅಪರೂಪ ಕಾರ್ಯಕ್ರಮ, ನಾಲ್ಕನೇ ಅಂಗವಾಗಿರುವ ಪತ್ರಿಕಾರಂಗ. ಈ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕೆಂದರೆ ಮಾಧ್ಯಮ ಪ್ರಮುಖವಾಗಿದೆ. ೧೯೮೦ರಲ್ಲಿ ಮೊದಲಬಾರಿಗೆ ವಿಧಾನಸಭೆ ಪ್ರವೇಶ ಮಾಡಿದೆವು. ಆಗ ಮಾಧ್ಯಮಗಳು ಹೆಚ್ಚಿರಲಿಲ್ಲ. ಪತ್ರಿಕೆಗಳನ್ನು ಓದುವವರ ಸಂಖ್ಯೆ ಕಡಿಮೆಯಿದೆ. ನಾನು ೯ ಗಂಟೆಯವರೆಗೆ ಎಲ್ಲಾ ಪತ್ರಿಕೆಗಳನ್ನು ಓದುತ್ತೇನೆ. ಪತ್ರಿಕೆಗಳಲ್ಲಿರುವ ಸಂಪೂರ್ಣ ಮಾಹಿತಿ ವಾಟ್ಸಪ್ ಮತ್ತು ಜಾಲತಾಣದಲ್ಲಿರಲಿಲ್ಲ. ಈಗ ಎಲ್ಲ ಸಂಘಟನೆಗಳು ಇವೆ. ಶಾಸಕರ ವೇದಿಕೆಯಂತಲೂ ನಾವು ಮಾಡಿದ್ದೇವೆ. ಸಂಘಟನೆ ಮುಖಾಂತರ ನಾವು ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬೇಕಾಗುತ್ತದೆ. ಮಾಧ್ಯಮಗಳು ಸುಧಾರಣೆಯಾದಷ್ಟು ಸಮಾಜಕ್ಕೆ ದಾರಿದೀಪವಾಗಲಿದೆ ಎಂದರು.

ಆಗ ಪತ್ರಿಕೆಗಳಲ್ಲಿ ನೈಜತೆ ಪ್ರಕಟವಾಗುತ್ತಿತ್ತು. ಈಗ ಎಲ್ಲ ಪತ್ರಕರ್ತರು ಮಾಲೀಕರ ಕೈಯಲ್ಲಿ ಸಿಲುಕಿದ್ದಾರೆ. ಮಾಧ್ಯಮದವರು ಮನಸ್ಸು ಮಾಡಿದರೆ ಏನೂ ಬೇಕಾದರೂ ಮಾಡಬಹುದು. ಎಲ್ಲ ರಂಗಗಳು ಕೆಟ್ಟಿವೆ ಎಂದು ಪತ್ರಿಕಾ ರಂಗವೂ ಕೆಟ್ಟಿದೆ ಎನ್ನಲಾಗುವುದಿಲ್ಲ. ಕೆಲವರು ಮಾಡಿದ ತಪ್ಪಿಗೆ ಎಲ್ಲಾ ಪತ್ರಕರ್ತರನ್ನು ದೂಷಿಸಲಾಗುವುದಿಲ್ಲ. ಮಾಧ್ಯಮಗಳು ಮನಸ್ಸು ಮಾಡಿದರೆ ಏನು ಬೇಕಾದರೂ ಬದಲಿಸಬಹುದು. ಮಾಧ್ಯಮಗಳಿಗೆ ಬೇಕಾದ ಸೆಕ್ಯೂರಿಟಿಯನ್ನು ಸರಕಾರ ಮಾಡಬೇಕಿದೆ. ನಾನು ಕೂಡ ಸರಕಾರದ ಜತೆಗೆ ಮಾತನಾಡುತ್ತೇನೆ. ಸಂಘಟನೆ ಇಲ್ಲದಿದ್ದರೆ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದರು.

ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಮಾತನಾಡಿ, ದಾವಣಗೆರೆಯಲ್ಲಿ ನಡೆದ ೩೮ನೇ ಸಮ್ಮೇಳನ ಅತ್ಯಂತ ಯಶಸ್ವಿಯಾಗಿದೆ. ಸಾಹಿತ್ಯ ಸಮ್ಮೇಳನದ ಜಾತ್ರೆಯಂತೆ ಇಂದು ನಡೆದಿದೆ. ವರ್ಷದಿಂದ ವರ್ಷಕ್ಕೆ ಪತ್ರಕರ್ತರ ಸಂಘ ಮುಂಚೂಣಿಯಲ್ಲಿ ಬೆಳೆಯುತ್ತಿದೆ. ಹಿಂದಿನ ಮತ್ತು ಇಂದಿನ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಯನ್ನು ಪತ್ರಿಕೋದ್ಯಮ ಕಂಡಿದೆ. ಮೊದಲಿನ ಪತ್ರಿಕೋದ್ಯಮ ಇಂದಿಲ್ಲ. ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದ್ದ ಕಾಲ ಈಗಿಲ್ಲ. ಶತಮಾನ ಕಾಣುವತ್ತ ಸಂಘ ಹೆಜ್ಜೆ ಇಡುತ್ತಿದೆ. ಇವತ್ತಿನ ದಿನಗಳಲ್ಲಿ ಅನೇಕ ಮಾಧ್ಯಮಗಳು ಹುಟ್ಟಿಕೊಂಡಿವೆ. ವಾಟ್ಸಪ್, ಯೂಟ್ಯೂಬ್ ಚಾನೆಲ್‌ಗಳು ಸಹ ಇಂದು ನಾಯಿಕೊಡೆಯಂತೆ ಹುಟ್ಟಿಕೊಂಡಿವೆ. ಯೂಟ್ಯೂಬ್ ಚಾನೆಲ್‌ಗೆ ನಿರ್ಬಂಧ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ. ಅನೇಕ ಸುಳ್ಳು ಸುದ್ದಿಗಳನ್ನು ಹರಡಿ ಟಿಆರ್‌ಪಿ ಹೆಚ್ಚಿಸಿಕೊಳ್ಳಲಾಗುತ್ತಿದೆ. ಆದಷ್ಟು ವಿಶ್ವಾಸಾರ್ಹ ಸುದ್ದಿಗಳನ್ನು ಬಿತ್ತರಿಸಬೇಕಾಗಿದೆ ಎಂದರು.

ವಿಜಯವಾಣಿ ಸಂಪಾದಕ ಕೆ.ಎನ್. ಚನ್ನೇಗೌಡ್ರು ಮಾತನಾಡಿ, ಪತ್ರಿಕೋದ್ಯಮದ ದಿಕ್ಕು ಹಳ್ಳಹಿಡಿಯುತ್ತಿದೆ. ಪತ್ರಿಕೆ, ಟಿವಿ ನೋಡುವವರ ಸಂಖ್ಯೆ ಕಡಿಮೆಯಾಗಿದ್ದು, ಸಾಮಾಜಿಕ ಜಾಲತಾಣಗಳ ಅಬ್ಬರ ಹೆಚ್ಚಾಗಿದೆ. ಇದೆಲ್ಲ ಗಮನಿಸಿದರೆ ಮುಂದಿನ ಸಮ್ಮೇಳನ ನಡೆಯುತ್ತದೆಯೋ ಇಲ್ಲವೋ ಎಂಬ ಆತಂಕ ಕಾಡುತ್ತಿದೆ ಎಂದರು.

ಪತ್ರಕರ್ತರು ಮೃತರಾದರೆ ಪರಿಹಾರ ನೀಡಬೇಕು ಎಂಬ ಇತ್ಯಾದಿ ಬೇಡಿಕೆಗಳ ಬದಲಿಗೆ ಪತ್ರಿಕೆಗಳನ್ನು ಓದುವವರ ಸಂಖ್ಯೆ ಅಧಿಕವಾಗಲು ಒತ್ತಾಯ ಹೇರಬೇಕಿದೆ. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದಿ ಚರ್ಚೆ ನಡೆಸಬೇಕು ಎನ್ನುವಂತದ್ದು ಆಗಬೇಕು ಹೊರತು ಬೇಡಿಕೆಗಳಲ್ಲ. ಪತ್ರಿಕೆಗಳನ್ನು ನಡೆಸುವುದು ಕಷ್ಟ. ಅತ್ಯಂತ ಕಡಿಮೆ ಬೆಲೆಗೆ ಪತ್ರಿಕೆಗಳು ಮಾರಾಟ ಮಾಡಬೇಕಿದೆ. ಪತ್ರಿಕೆಗಳು ನಶಿಸಿಹೋಗುವುದಕ್ಕೂ ಮುನ್ನ ನಾವು ಎಚ್ಚೆತ್ತುಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಎರಡು ದಿನಗಳ ಕಾಲ ಆರೋಗ್ಯಕರ ಚರ್ಚೆಗಳು ಇಲ್ಲಿ ನಡೆದಿದೆ. ಯಾವುದೇ ರೀತಿಯ ಮಾಧ್ಯಮಗಳು ಬರಲಿ, ಪತ್ರಿಕೆಗಳನ್ನು ಓದಿದರೆ ಸಿಗುವ ತೃಪ್ತಿ ಮತ್ತಾö್ಯವುದರಲ್ಲೂ ಸಿಗುವುದಿಲ್ಲ. ಪತ್ರಿಕೆ ಕೂಡ ಇನ್ನೂ ಜನರನ್ನು ಸೆಳೆಯುವ ಕೆಲಸ ಮಾಡುವುದು ಸಾಕಷ್ಟಿದೆ. ಸುದ್ದಿ ಸತ್ಯಾಂಶವಿದ್ದರೆ ಜನರು ಮತ್ತಷ್ಟು ವಿಶ್ವಾಸ ಇಡುತ್ತಾರೆ. ಸಂಪಾದಕರು ಮತ್ತಷ್ಟು ಜವಾಬ್ದಾರಿ ಹೊಂದಿ ಸುದ್ದಿಗಳನ್ನು ಪ್ರಕಟಿಸಬೇಕು. ಪತ್ರಕರ್ತರಿಗೆ ಸರಕಾರದಿಂದ ಸಿಗಬೇಕಾದ ಮತ್ತಷ್ಟು ಸೌಲಭ್ಯಗಳನ್ನು ಕೊಡಿಸಲು ನಾನು ಪ್ರಯತ್ನಿಸುತ್ತೇನೆ ಎಂದರು.

ಶಾಸಕ ಬಸವಂತಪ್ಪ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರಕಾರವು ಬಜೆಟ್‌ನಲ್ಲಿ ಮೂಲ ಸೌಲಭ್ಯ ನೀಡಿದರೆ ಮಾತ್ರ ಪತ್ರಿಕಾರಂಗ ಉಳಿಯಲು ಸಾಧ್ಯವಿದೆ. ಆರ್ಥಿಕ ಸ್ವಾವಲಂಬನೆ ನೀಡುವ ಬಗ್ಗೆ ಸರಕಾರಗಳು ಚಿಂತಿಸಬೇಕಿದೆ. ಪತ್ರಕರ್ತರು ಯಾವುದೋ ರಾಜಕೀಯ ಪಕ್ಷಗಳ ಕಪಿಮುಷ್ಠಿಗೆ ಒಳಗಾಗಬಾರದು. ವಸ್ತುನಿಷ್ಠತೆಗೆ ಆದ್ಯತೆ ನೀಡಿ ಎಂದು ಹೇಳಿದರು.
=======
ವಿಷಯ ತಿಳಿದು ಸುದ್ದಿ ಮಾಡಿ
ಸಮಾರಂಭದಲ್ಲಿ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ್, ಪತ್ರಕರ್ತರು ಸುದ್ದಿಯನ್ನು ವೈಭವೀಕರಣ ಮಾಡುತ್ತಾರೆ, ಇದರಿಂದ ಯಾವುದೇ ಉಪಯೋಗವಿಲ್ಲ. ವಾಹನಕ್ಕೆ ಫ್ಯಾನ್ಸಿ ನಂಬರ್ ಹಾಕುವ ಸುದ್ದಿ ಬಿತ್ತರಿಸಿದಂತೆ ಹೆಚ್ಚಿನ ಬೆಳೆದ ರೈತರನ್ನು ತೋರಿಸುವುದಿಲ್ಲ. ಸಮಾಜದ ಮತ್ತು ರಾಜಕಾರಣಿಗಳ ಅಂಕು ಡೊಂಕು ಸರಿಪಡಿಸುವ ಅಧಿಕಾರ ಪತ್ರಕರ್ತರಿಗಲ್ಲದೇ ಬೇರೆಯಾರಿಗೂ ಇರುವುದಿಲ್ಲ. ಬ್ರೇಕಿಂಗ್ ಸುದ್ದಿ ಮುಖ್ಯವಲ್ಲ. ನಮ್ಮ ದೇಶದ ಪ್ರಧಾನಿ, ಮುಖ್ಯಮಂತ್ರಿ, ಶಾಸಕರು ಸಚಿವರು ಏನೂ ಮಾಡಿದ್ದಾರೆ ಎಂಬುದು ಮುಖ್ಯ. ಟಿಆರ್‌ಪಿಗೊಸ್ಕರ ಸುದ್ದಿ ವೈಭವೀಕರಿಸಿ ಬಿತ್ತರಿಸಲಾಗುತ್ತಿದೆ. ಪತ್ರಿಕೆಗಳನ್ನು ಓದುವ ಕೆಲಸವನ್ನು ಮಾಡಿಸಬೇಕು. ಹಾಗಿದ್ದಾಗ ಮಾತ್ರ ಪತ್ರಿಕೆಗೊಂದು ಗೌರವ ಸಿಗುತ್ತದೆ. ಪ್ರತಿ ಜಿಲ್ಲೆಯಲ್ಲೂ ಸುಮಾರು ಐವತ್ತು ಪತ್ರಿಕೆಗಳು ಹುಟ್ಟಿಕೊಳ್ಳುತ್ತಿವೆ. ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಆ ಪ್ರಾದೇಶಿಕವಾಗಿ ಇರುವ ಎಲ್ಲಾ ಸುದ್ದಿಗಳು ಸಿಗುವುದಿಲ್ಲ. ಹಾಗಾಗಿ ನಾವು ಟಿವಿ ಮಾಧ್ಯಮಗಳ ಮೊರೆ ಹೋಗಬೇಕಾಗುತ್ತದೆ. ಆದ್ದರಿಂದ ರಾಜ್ಯ ಪತ್ರಿಕೆಗಳು ರಾಜ್ಯಮಟ್ಟದ ಸುದ್ದಿಗಳನ್ನು ಜಿಲ್ಲೆಗಳು ಜಿಲ್ಲಾ ಮಟ್ಟದ ಸುದ್ದಿಗಳನ್ನು ನೀಡಿದರೆ ಮಾತ್ರ ಪತ್ರ‍್ರಿಕೆಗಳು ಅಭಿವೃದ್ಧಿ ಕಾಣುತ್ತದೆ ಎಂದರು.

ನೈಜ ಸುದ್ದಿಗಳನ್ನು ಬಿತ್ತರಿಸಲು ಹೆಚ್ಚಿನ ಆದ್ಯತೆ ನೀಡಿ. ಟಿಕೆಟ್ ನೀಡುವುದು ರಾಜ್ಯ ಮತ್ತು ರಾಷ್ಟç ನಾಯಕರ ತೀರ್ಮಾನ. ಆದರೆ, ಮಾಧ್ಯಮಗಳು ನಮಗೆ ಮತ್ತು ಜಗದೀಶ್ ಶೆಟ್ಟರ್‌ಗೆ ವಯಸ್ಸಿನ ಕಾರಣಕ್ಕೆ ಟಿಕೆಟ್ ಸಿಗುವುದಿಲ್ಲ ಎಂದು ಸುದ್ದಿ ಬಿತ್ತರಿಸಿರುವುದರಿಂದ ಜನರು ನಮ್ಮನ್ನು ಬಂದು ಪ್ರಶ್ನಿಸುತ್ತಾರೆ. ಯಾರೂ ಹೇಳಿದರು ಎಂಬ ನಿಖರ ವ್ಯಕ್ತಿಯ ಹೆಸರು ಇರುವುದಿಲ್ಲ. ಪತ್ರಿಕಾರಂಗ ತನ್ನದೇ ಆದ ಗೌರವ ಕಾಪಾಡಿಕೊಂಡಿದ್ದು, ನೈಜ ಸುದ್ದಿಗಳನ್ನು ಮಾತ್ರ ಪ್ರಕಟಿಸುವ ಮೂಲಕ ಅದನ್ನು ಉಳಿಸಿಕೊಳ್ಳಿ. ವಿಷಯವನ್ನ ಕೂಲಂಕಷವಾಗಿ ತಿಳಿದುಹಾಕಿದರೆ ಒಳ್ಳೆಯದು ಎಂದು ಹೇಳಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!