ಗುತ್ತಿಗೆ ನೌಕರರ ಹಿತ ಕಾಯುವುದು ಇಲಾಖೆ ಅಧಿಕಾರಿ ಹಾಗೂ ಏಜೆನ್ಸಿಗಳ ಜವಾಬ್ದಾರಿ: ಪಿ.ಎನ್.ಲೋಕೇಶ್
ದಾವಣಗೆರೆ: ಸರ್ಕಾರಿ ನೌಕರರಂತೆ ಹೊರಗುತ್ತಿಗೆ ನೌಕರರಿಗೂ ಮೂಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಪಿ.ಎನ್ ಲೋಕೇಶ್ ತಿಳಿಸಿದರು.
ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕಾರ್ಮಿಕ ಇಲಾಖೆ ಇವರ ಸಹಯೋಗದೊಂದಿಗೆ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಜರುಗಿದ ಸರ್ಕಾರದ ವಿವಿಧ ಇಲಾಖೆಗಳ ಹಾಗೂ ನಿಗಮ ಮಂಡಳಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ದೊರಕುವ ಶಾಸನಾತ್ಮಕ ಸೌಲಭ್ಯಗಳ ಕುರಿತು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೂಲ ಮಾಲೀಕರು ಮತ್ತು ಗುತ್ತಿಗೆದಾರರು ಕಾನೂನಿನ ಎಲ್ಲಾ ನಿಯಮಾವಳಿಗಳನ್ನು ತಿಳಿದು ಕಾರ್ಮಿಕರ ಸಮಸ್ಯೆಗಳನ್ನು ಅರಿತು ಅವರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಒದಗಿಸಬೇಕು, ಕಾನೂನು ಎಲ್ಲಾರಿಗೂ ಸಮಾನವಾದದ್ದು, ಕಾರ್ಮಿಕನು ಕೆಲಸದ ಸಮಯದಲ್ಲಿ ಅಪಘಾತಕ್ಕಿಡಾಗಿ ಅಥವಾ ಸಾವಿಗಿಡಾದರೆ ಅವರಿಗೆ ಶೀಘ್ರವೇ ಪರಿಹಾರ ನೀಡಬೇಕು. ಸೌಲಭ್ಯಗಳ ಜೊತೆಗೆ ಅಗತ್ಯ ಸುರಕ್ಷಾ ಸಾಮಗ್ರಿಗಳನ್ನು ಒದಗಿಸಿ ಅವುಗಳ ಬಳಕೆ ಕುರಿತು ಅರಿವು ನೀಡಿಸಬೇಕು ಎಂದರು.
ಹೊರ ಗುತ್ತಿಗೆ ಕಾರ್ಮಿಕರಿಗೆ ನೀಡಬೇಕಾದ ಕನಿಷ್ಠ ವೇತನದ ಅಧಿಸೂಚನೆಗಳಂತೆ ವೇತನ ನೀಡಬೇಕು, ತಪ್ಪು ಮಾಡಿದಾಗ ಏಕಾಏಕಿ ಅವರನ್ನು ಕೆಲಸದಿಂದ ತೆಗೆಯಬಾರದು, ಒಂದೆರಡು ಬಾರಿ ತಪ್ಪು ತಿದ್ದಿಕೊಳ್ಳಲು ಅವಕಾಶ ನೀಡಬೇಕು, ತಪ್ಪುಗಳು ಮರುಕಳಿಸಿದಾಗ ನಿಯಮಾನುಸಾರ ನೊಟೀಸ್ ಜಾರಿ ಮಾಡಿ ವಿಚಾರಣೆಗೊಳಪಡಿಸಬೇಕು ಎಂದರು.
ಕಲಬುರಗಿ ಪ್ರಾದೇಶಿಕ ಉಪ ಕಾರ್ಮಿಕ ಆಯುಕ್ತ ವೆಂಕಟೇಶ್ ಅ. ಶಿಂದಿಹಟ್ಟಿ ಮಾತನಾಡಿ ಹೊರ ಗುತ್ತಿಗೆ ನೌಕರರಿಗೆ ಶಾಸನಬದ್ಧ ಸೌಲಭ್ಯಗಳನ್ನು ಒದಗಿಸುವುದು ಇಲಾಖೆಯ ಅಧಿಕಾರಿ ಹಾಗೂ ಏಜೆನ್ಸಿಯ ಕರ್ತವ್ಯ, ಆದರೇ ಗುತ್ತಿಗೆದಾರರು ಮೂಲ ಸೌಲಭ್ಯಗಳನ್ನು ನೀಡುತ್ತಿಲ್ಲ, ಸೇವಾ ಶುಲ್ಕ ಹೊರತುಪಡಿಸಿ ಇತರೆ ಯಾವುದೇ ಅನಧಿಕೃತ ವೇತನ ಕಡಿತ ಮಾಡಬಾರದು ಎಂದರು.
ಪ್ರತಿಯೊಬ್ಬ ಹೊರಗುತ್ತಿಗೆ ನೌಕರರು ಕಡ್ಡಾಯವಾಗಿ ಭವಿಷ್ಯನಿಧಿ, ಇ.ಎಸ್.ಐ ಮತ್ತಿತರ ಖಾತೆ ಹೊಂದಿರುವುದನ್ನು ಕೂಡ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು, ಪ್ರತಿ ತಿಂಗಳು 7 ಹಾಗೂ 10ನೇ ತಾರೀಖಿನೊಳಗೆ ಬ್ಯಾಂಕ್ ಮೂಲಕ ಖಾತೆಗೆ ಜಮೆ ಮಾಡಬೇಕು ಎಂದರು.
ವಿವಿಧ ಇಲಾಖೆಗಳಲ್ಲಿ ಬಾಲ ಕಾರ್ಮಿಕರನ್ನು ಕೆಲಸಕ್ಕಾಗಿ ನೇಮಿಸಬಾರದು, ಹೊರ ಗುತ್ತಿಗೆದಾರರ ಪರವಾನಗಿ ಕಡ್ಡಾಯವಾಗಿರಬೇಕು, ಕಾರ್ಮಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶೌಚಾಲಯದ ವ್ಯವಸ್ಥೆ ಮಾಡಬೇಕು ಎಂದರು.
ಪಿ.ಎಫ್ ಅಧಿಕಾರಿ ಅರ್ಸಲನ್ ಗುತ್ತಿಗೆ ನೌಕರರ ಭವಿಷ್ಯ ನಿಧಿಯ ಕುರಿತು ವಿವರಣೆ ನೀಡಿದರು. ಕಾರ್ಯಕ್ರಮದಲ್ಲಿ ಕಾರ್ಮಿಕ ಅಧಿಕಾರಿ ಜಿ. ಇಬ್ರಾಹಿಂ ಸಾಬ್, ಸಹಾಯಕ ಕಾರ್ಮಿಕ ಆಯುಕ್ತರಾದ ವೀಣಾ ಎಸ್.ಆರ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.