rider; ಹಿಂದಿಯಲ್ಲಿ ದಾಖಲೆ ಬರೆದ ನಿಖಿಲ್: 100 ಮಿಲಿಯನ್ ವೀಕ್ಷಣೆ ಕಂಡ ‘ರೈಡರ್

‘ರೈಡರ್’ (rider) 2021 ರಲ್ಲಿ ತೆರೆಗೆ ಬಂದ ಸಿನಿಮಾ. ಸ್ಯಾಂಡಲ್‌ವುಡ್ ಯುವರಾಜ ನಿಖಿಲ್ ಕುಮಾರ್ (Nikhil Kumaraswamy) ಹೀರೋ ಆಗಿ ಅಬ್ಬರಿಸಿದ್ದ ಮಾಸ್ ಚಿತ್ರ. ಇದು ನಿಖಿಲ್ ನಟನೆಯ ನಾಲ್ಕನೆ ಸಿನಿಮಾ. ಅಷ್ಟಕ್ಕೂ ರೈಡರ್ ರಿಲೀಸ್ ಆಗಿ 2 ವರ್ಷಗಳ ಮೇಲಾಗಿದೆ. ಈಗ್ಯಾಕೆ ಆ ಸಿನಿಮಾದ ಬಗ್ಗೆ ಮಾತು ಅಂತೀರಾ? ‘ರೈಡರ್’ ಯೂಟ್ಯೂಬ್‌ನಲ್ಲಿ ದಾಖಲೆ ಬರೆದಿದೆ. ಹೌದು, ಯುವರಾಜನ ಸಿನಿಮಾ ಹಿಂದಿ ವರ್ಷನ್ ಯೂಟ್ಯೂಬ್ ನಲ್ಲಿ ಬರೋಬ್ಬರಿ 100 ಮಿಲಿಯನ್ ವೀಕ್ಷಣೆ ಕಂಡಿದೆ. ಈ ಮೂಲಕ ನಿಖಿಲ್ ಹಿಂದಿ ವಲಯದಲ್ಲೂ ಪ್ರಖ್ಯಾತಿ ಗಳಿಸಿದ್ದಾರೆ.

ಕನ್ನಡ ಸಿನಿಮಾಗಳು ತನ್ನ ಸ್ವಂತ ನೆಲದಲ್ಲಿಯೇ ಈ ಪರಿ ವೀಕ್ಷಣೆಗಳಿಸುವುದು ತುಂಬ ವಿರಳ. ಹಾಗಿರುವಾಗ ನಿಖಿಲ್ (Nikhil Kumaraswamy) ಸಿನಿಮಾ ಹಿಂದಿ (Hindi) ಭಾಷೆಯಲ್ಲಿ 100 ಮಿಲಿಯನ್ ವೀಕ್ಷಣೆ ಕಂಡಿರುವುದು ಸಂತಸದ ವಿಚಾರವಾಗಿದೆ. ಈ ದಾಖಲೆ ನೋಡಿದ್ರೆ ಸ್ಪಷ್ಟವಾಗಿ ಗೊತ್ತಾಗುತ್ತಿದೆ ನಿಖಿಲ್ ಅವರಿಗೆ ಕನ್ನಡದಲ್ಲಿ ಮಾತ್ರವಲ್ಲದೇ ಹಿಂದಿ ವಲಯದಲ್ಲೂ ಉತ್ತಮ ಮಾರುಕಟ್ಟೆ ಇದೆ, ಅಭಿಮಾನಿಗಳಿದ್ದಾರೆ ಎನ್ನುವುದು.

ರೈಡರ್ ಕನ್ನಡದಲ್ಲಿ ಮಾತ್ರ ರಿಲೀಸ್ ಆದ ಸಿನಿಮಾ. ಬಳಿಕ ಈ ಚಿತ್ರ ಹಿಂದಿ ಭಾಷೆಗೆ ಡಬ್ ಆಗಿ ಬಿಡುಗಡೆಯಾಗಿದೆ. ನಿಖಿಲ್ ಅವರನ್ನು ಹಿಂದಿ ಮಂದಿ ಆನ್‌ಲೈನ್‌ನಲ್ಲಿಯೇ ನೋಡಿ ಸಂಭ್ರಮಿಸಿದ್ದಾರೆ ಎನ್ನುವುದಕ್ಕೆ 100 ಮಿಲಿಯನ್ ವೀಕ್ಷಣೆಯೇ ಸಾಕ್ಷಿ. ರೈಡರ್ ವಿಜಯ್ ಕುಮಾರ್ ಕೊಂಡ ಸಾರಥ್ಯದಲ್ಲಿ ಬಂದ ಸಿನಿಮಾ. ಔಟ್ ಅಂಡ್ ಔಟ್ ಮಾಸ್ ಎಂಟಟೈನರ್ ಚಿತ್ರ. ನಿಖಿಲ್ ಜೊತೆ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದ ಕಾಶ್ಮೀರಾ ಪರದೇಶಿ ನಾಯಕಿಯಾಗಿ ಮಿಂಚಿದ್ದರು. ಈ ಮೂಲಕ ಕಾಶ್ಮೀರಾ ಮೊದಲ ಬಾರಿಗೆ ಕನ್ನಡ ಸಿನಿ ಪ್ರೇಕ್ಷಕರ ಮುಂದೆ ಬಂದಿದ್ದರು. ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ಮಾಡಿದ್ದರು.

‘ಪಥ’ ಚಲನಚಿತ್ರ ಹದಿಹರೆಯದ ಮಂದಿಗೆ ದಿಕ್ಸೂಚಿ.. ಇದೊಂದು ಸಾಕ್ಷ್ಯಚಿತ್ರ

ಸದ್ಯ ನಿಖಿಲ್ ಹೊಸ ಸಿನಿಮಾ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. 2 ವರ್ಷಗಳ ಬಳಿಕ ನಿಖಿಲ್ ಹೊಸ ಸಿನಿಮಾಗೆ ಸಹಿ ಮಾಡಿದ್ದು ಇತ್ತೀಚಿಗಷ್ಟೆ ಚಿತ್ರಕ್ಕೆ ಅದ್ದೂರಿ ಚಾಲನೆ ಕೂಡ ಸಿಕ್ಕಿದೆ. ಭಾರತದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ಲೈಕಾ ಪ್ರೊಡಕ್ಷನ್ ನಿಖಿಲ್ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಲಕ್ಷ್ಮಣ್ ಸಾರಥ್ಯದಲ್ಲಿ ಚಿತ್ರ ಮೂಡಿ ಬರುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿಖಿಲ್ ಹೊಸ ಸಿನಿಮಾ ತಯಾರಾಗುತ್ತಿದೆ. ದಕ್ಷಿಣ ಭಾರತದ ಎಲ್ಲಾ ಭಾಷೆಯ ಜೊತೆಗೆ ಹಿಂದಿಯಲ್ಲೂ ರಿಲೀಸ್ ಆಗುತ್ತಿದೆ. ಒಂದಿಷ್ಟು ಗ್ಯಾಪ್‌ನ ಬಳಿಕ ನಿಖಿಲ್ ದೊಡ್ಡ ಮಟ್ಟದಲ್ಲಿ ಎಂಟ್ರಿ ಕೊಡುತ್ತಿದ್ದಾರೆ. ಈ ಸಿನಿಮಾ ಮೂಲಕ ನಿಖಿಲ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.

Leave a Reply

Your email address will not be published. Required fields are marked *

error: Content is protected !!