ಕಡಿ, ಬಡಿ, ಕತ್ತರಿಸು, ಕೊಲ್ಲು ಎಂಬುದು ಆರ್.ಎಸ್.ಎಸ್.ನಲ್ಲಿ ತರಬೇತಿ ಪಡೆದವರ ಭಾಷೆ : ಮುಖ್ಯಮಂತ್ರಿ ಸಿದ್ದರಾಮಯ್ಯ

ಚಿತ್ರದುರ್ಗ(ಹೊಸದುರ್ಗ), ಫೆಬ್ರವರಿ 9: ಕಡಿ, ಬಡಿ, ಕತ್ತರಿಸು, ಕೊಲ್ಲು ಎಂಬ ಭಾಷೆ ಬಳಸುವ ಒಂದು ರಾಜಕೀಯ ಪಕ್ಷದ ಮುಖಂಡರು ಆರ್.ಎಸ್.ಎಸ್. ನಲ್ಲಿ ತರಬೇತಿಯಾಗಿದೆ ಎಂದು ಹೇಳಿಕೊಳ್ಳುವವರನ್ನು ರಾಜಕೀಯ ಧುರೀಣರು ಎಂದು ಕರೆಯಬೇಕೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮಾಜಿ ಸಚಿವ ಕೆ.ಎಸ್. ಈಶ್ವರಪ್ಪನವರು ನೀಡಿರುವ ದೇಶ ವಿಭಜನೆಗೆ ಕರೆ ನೀಡಿದವರನ್ನು ಮಾಡುವವರನ್ನು ಗುಂಡಿಟ್ಟು ಕೊಲ್ಲಬೇಕು ಹೇಳಿಕೆಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡುತ್ತಾ ಮುಖ್ಯಮಂತ್ರಿಗಳು ಮಾತನಾಡಿದರು.

ಈಶ್ವರಪ್ಪನವರಿಗೆ ಕಡಿ, ಬಡಿ, ಕತ್ತರಿಸು, ಕೊಲ್ಲು ಇದು ಬಿಟ್ಟರೆ ಬೇರೆ ಭಾಷೆ ಗೊತ್ತಿಲ್ಲ. ನನಗೆ ಆರ್.ಎಸ್.ಎಸ್ ನಲ್ಲಿ ತರಬೇತಿಯಾಗಿದೆ ಎನ್ನುತ್ತಾರೆ. ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಡಿ.ಕೆ.ಸುರೇಶ್ ಅವರನ್ನು ಗುಂಡಿಟ್ಟು ಕೊಲ್ಲಿ ಎಂದು ಹೇಳುವುದು ಒಂದು ರಾಜಕೀಯ ಪಕ್ಷದ ಮುಖಂಡರಾಗಿ ಹೇಳುವ ಮಾತೇ ಎಂದು ಪ್ರಶ್ನಿಸಿದರು. ಇವರನ್ನು ರಾಜಕೀಯ ಧುರೀಣರು ಎಂದು ಕರೆಯಬೇಕೇ ಎಂದರು.

ಪ್ರತಿಭಟನೆಯಲ್ಲ , ತೆರಿಗೆಯಲ್ಲಿ ರಾಜ್ಯದ ಪಾಲು ಪಡೆಯುವ ಬೇಡಿಕೆ

ರಾಜ್ಯಕ್ಕೆ ಅನುದಾನ ಹಂಚಿಕೆಯಲ್ಲಿ ಆಗಿರುವ ವಿಚಾರಕ್ಕೆ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಸಧ್ಯಕ್ಕೆ ಇಂತಹ ಯೋಚನೆ ಸರ್ಕಾರದ ಮುಂದಿಲ್ಲ. ಆದರೆ ರಾಜ್ಯಕ್ಕೆ 100 ರೂ.ಗಳಿಗೆ ಕೇವಲ 13 ರೂ. ಬರುತ್ತಿದೆ. ಪ್ರಧಾನಿ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ, ಗುಜರಾತಿಗೆ ಕಡಿಮೆ ತೆರಿಗೆ ಹಂಚಿಕೆ ವಿರೋಧಿಸಿ, ಗುಜರಾತ್ ನಿಂದ ತೆರಿಗೆ ಪಡೆಯುವುದನ್ನೇ ಕೇಂದ್ರ ಬಿಟ್ಟುಕೊಡಲಿ ಎಂದಿದ್ದರು. ಆದರೆ ಈಗ ಪ್ರಧಾನಿಯಾಗಿ, ರಾಜ್ಯದ ಪ್ರತಿಭಟನೆಗೆ ‘ದೇಶ ವಿಭಜನೆ ಮಾಡಲು ಹೊರಟಿದ್ದಾರೆ’ ಎಂದು ಟೀಕಿಸಿದ್ದಾರೆ. ಇದು ತೆರಿಗೆಯಲ್ಲಿ ರಾಜ್ಯದ ಪಾಲು ಪಡೆಯುವ ಬೇಡಿಕೆಯಾಗಿದೆ. 15ನೇ ಹಣಕಾಸು ಆಯೋಗದಲ್ಲಿ ಕರ್ನಾಟಕದ ತೆರಿಗೆ ಪಾಲಿನ ಪ್ರಮಾಣವನ್ನು 4.71 % ರಿಂದ 3.64% ಇಳಿಸಲಾಗಿದೆ. 2017-18 ರಿಂದ ಇಲ್ಲಿಯವರೆಗೆ 1,87,000 ಲಕ್ಷ ಕೋಟಿ ತೆರಿಗೆ ಪಾಲು ರಾಜ್ಯಕ್ಕೆ ನಷ್ಟವಾಗಿದೆ. ಇದು ಕನ್ನಡಿಗರಿಗೆ ಕ್ರೋಧ ತರುವ ವಿಚಾರ ಎಂದರು.

ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಬಿಡುಗಡೆಯಾಗಿಲ್ಲ

2023-24 ನೇ ಸಾಲಿನ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ.ಗಳ ಅನುದಾನ ನೀಡುವುದಾಗಿ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು. ಈವರೆಗೆ ಒಂದು ರೂಪಾಯಿಯನ್ನೂ ನೀಡಿಲ್ಲ. ನಾವು 8000 ಕೋಟಿ ರೂ.ಗಳನ್ನು ಭದ್ರಾ ಮೇಲ್ದಂಡೆ ಯೋಜನೆಗೆ ಖರ್ಚು ಮಾಡಿದ್ದೇವೆ.ಈ ಪೈಕಿ 6000 ಕೋಟಿ ರೂ.ಗಳೂ ರಾಜ್ಯ ಸರ್ಕಾರ ವೆಚ್ಚ ಮಾಡಿದೆ. ರಾಜ್ಯ ಸರ್ಕಾರದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ , ಜಲಸಂಪನ್ಮೂಲ ಸಚಿವರನ್ನು ಅವರನ್ನು ಭೇಟಿಯಾಗಿ ಹಣ ಬಿಡುಗಡೆಗೆ ಮನವಿ ಮಾಡಿದ್ದಾರೆ. ನಾನೂ ಕೂಡ ಮನವಿ ಮಾಡಿದ್ದೇನೆ ಎಂದರು.

ಕರ್ನಾಟಕದಿಂದ ರಾಜ್ಯ ಸಭಾ ಸದಸ್ಯರಾಗಿರುವ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ನಲ್ಲಿ ಹೇಳಿದಂತೆ 5300 ಕೋಟಿ ಒದಗಿಸುವುದು ಅವರ ಜವಾಬ್ದಾರಿ ಎಂದರು. 15 ನೇ ಹಣಕಾಸು ಆಯೋಗದವರು ಒದಗಿಸಿದ್ದ 5495 ಕೋಟಿ ರೂ.ಗಳ ವಿಶೇಷ ಅನುದಾನ ಹಾಗೂ 6000 ಕೋಟಿ ಸೇರಿ 11495 ಕೋಟಿ ರೂ.ಗಳನ್ನು ತಿರಸ್ಕರಿಸಿದರು. ಇದು ಅನ್ಯಾಯವಲ್ಲವೇ? ಎಂದರು. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2023-24 ನೇ ಸಾಲಿನ ಬಜೆಟ್ ನಲ್ಲಿ ಕೇಂದ್ರದಿಂದ 5300 ಕೋಟಿ ರೂ.ಗಳು ಬರಲಿದೆ ಎಂದು ಪುನರುಚ್ಚರಿಸಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡುತ್ತೇವೆ ಎಂದಿದ್ದರೂ ಇನ್ನೂ ಘೋಷಣೆ ಮಾಡಿಲ್ಲ ಎಂದರು.

ದಾಖಲೆ ಒದಗಿಸಿದರೆ ತನಿಖೆ:

ರಾಜ್ಯಗುತ್ತಿಗೆದಾರರ ಸಂಘದವರು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಧಿಕಾರಿಗಳು ಕಮೀಷನ್ ಕೇಳಿರುವ ಬಗ್ಗೆ ಆರೋಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಹಿಂದಿನ ಬಿಜೆಪಿ ಸರ್ಕಾರದ 40% ಕಮೀಷನ್ ಆರೋಪದ ತನಿಖೆಗೆ ನಾಗಮೋಹನ್ ದಾಸ್ ಆಯೋಗ ರಚಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಈಗ ಸರ್ಕಾರದ ಅಧಿಕಾರಿಗಳೂ ಲಂಚ ಕೇಳುತ್ತಿರುವ ಆರೋಪದ ಮಾಡಿರುವ ಹಿನ್ನಲೆಯಲ್ಲಿ ದಾಖಲಾತಿಗಳನ್ನು ಒದಗಿಸಿದರೆ ಆಯೋಗದಿಂದಲೇ ತನಿಖೆಯನ್ನು ನಡೆಸಲಾಗುವುದು ಎಂದರು.

Leave a Reply

Your email address will not be published. Required fields are marked *

error: Content is protected !!