ಬರಗಾಲದಲ್ಲಿ ಸಾಹಿತ್ಯ ಸಮ್ಮೇಳನಗಳು ಸರಳತೆಯ ಜಾತ್ರೆಯಾಗಲಿ – ಗಂಗಾಧರ ನಿಟ್ಟೂರು

ಸಾಹಿತ್ಯ ಸಮ್ಮೇಳನಗಳು

ದಾವಣಗೆರೆ: ಬೇಸಿಗೆ ನೀರಿಲ್ಲದೆ ಬರಗಾಲದ ಬವಣೆಯ ಛಾಯೆ ಜನ ಮನಗಳಲ್ಲಿ ಕಾಣುತ್ತಿರುವ ಈ ಸಂದರ್ಭದಲ್ಲಿ ಸಾಹಿತ್ಯ ಸಮ್ಮೇಳನಗಳು ಅದ್ಧೂರಿತನ & ಆಡಂಬರದ ಗೋಜಿಗೆ ಹೋಗುವ ಬದಲು ಸರಳತನ ಮೆರೆಯುವಂತಾಗಬೇಕು. ಆಡಂಬರ & ಜಾತ್ರೆ ಸಾಹಿತ್ಯದ ಮೂಲ ಉದ್ದೇಶ ಅಲ್ಲವೇ ಅಲ್ಲ.

ಮೀಸಲಿಟ್ಟ ಹಣ ಜ್ಞಾನ ದಾಸೋಹಕ್ಕೆ ಸಮರ್ಪಕವಾಗಿ ಬಳಕೆಯಾಗಿ, ಜನ ಮನಗಳಲ್ಲಿ ಚಿಂತನೆಯ ಬೀಜ ಬಿತ್ತುವ ಕಾರ್ಯವಾಗಬೇಕು. ನಾಡು – ನುಡಿ, ದೇಶ – ಭಾಷೆಯ ಪ್ರೇಮವನ್ನು ಇಮ್ಮಡಿಗೊಳಿಸುವ ಕೈಂಕರ್ಯವಾಗಬೇಕು. ಸಾಹಿತ್ಯಕ ಚಟುವಟಿಕೆಗೆ, ಚಿಂತನ ಮಂಥನಕ್ಕೆ, ಕನ್ನಡ ಸಾಹಿತ್ಯದ ಹಿರಿಮೆ – ಗರಿಮೆ ಪರಿಚಯಿಸುವ ಕಾರ್ಯಕ್ಕೆ ಮೊದಲ ಆದ್ಯತೆ ಇರಬೇಕು. ನಾಡಿನ ಸಂಸ್ಕೃತಿ, ಗೌರವಕ್ಕೆ ಕನ್ನಡಿ ಹಿಡಿಯುವಂತಾಗಬೇಕು. ಏಕತೆ ಮತ್ತು ಭಾವ ಬೆಸುಗೆಯ ಕೊಂಡಿಯಾಗಬೇಕು.

ಸಾಹಿತ್ಯಕ್ಕಾಗಿ ಜನ ಜಾತ್ರೆ ಸೇರುವಂತಾಗಬೇಕೇ ಹೊರತು ಖಾರ ಮಂಡಕ್ಕಿ, ಬೆಂಡು – ಬಿಸ್ಕತ್ತು ತಿಂದು ಕೈ ತೊಳೆದುಕೊಂಡು ಉಯ್ಯಾಲೆ ಆಡಿ, ಸಿಕ್ಕ ಸಿಕ್ಕಿದ್ದನ್ನು ಖರೀದಿಸಿ ಎದ್ದು ಹೋಗುವ ಜಾತ್ರೆಯಂತಾಗಬಾರದು.

ಸನ್ಮಾನ – ಗೌರವಾರ್ಪಣೆಗಳು ನೈಜ ಪ್ರತಿಭೆಗಳ ಪ್ರೋತ್ಸಾಹಕ್ಕೆ ಪ್ರೇರಕ, ಪೂರಕ ಹಾಗೂ ಉತ್ತೇಜಕವಾಗಿರಬೇಕು. ಉಪ್ಪಿನ ಕಾಯಿಯಂತೆ ಇರಬೇಕೇ ಹೊರತು ಅದೇ ಊಟವಾಗಬಾರದು. ಆ ಊಟಕ್ಕೆ ಮುಗಿ ಬೀಳುವಂತಾಗಬಾರದು.

ಹಾಗೆ ನೋಡಿದರೆ ನಮ್ಮ ನಡುವೆ ಸದ್ದಿಲ್ಲದ ಸಾಧಕರು ಸಾಕಷ್ಟು ಮಂದಿ ಇದ್ದಾರೆ. ಅಂಥವರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವಾದರೆ ಸನ್ಮಾನ ಕಾರ್ಯಕ್ಕೂ ಸಾರ್ಥಕತೆ ದೊರೆತೀತು. ಪರಿಚಿತರು, ಒಡನಾಡಿಗಳು, ಪ್ರಾಯೋಜಕರು ಅದು ಇದು ಎಂದು ಎಲ್ಲರನ್ನೂ ತೃಪ್ತಿಪಡಿಸಲು ಹೊರಟರೆ ಸಾಹಿತ್ಯ ವೇದಿಕೆ ಕೇವಲ ಸನ್ಮಾನದ ವೇದಿಕೆಯಾಗಿ ಮಾರ್ಪಟ್ಟು ನಿಜ ಸತ್ವ ಕಳೆದುಕೊಳ್ಳುತ್ತದೆ ಅಷ್ಟೇ. ತೃಪ್ತಿಪಡಿಸುವ ಕಾರ್ಯಕ್ಕಿಂತ ಸಾಹಿತ್ಯ ಕಾರ್ಯ ಸಂಪನ್ನವಾಗಬೇಕು. ಕಂಡ ಕಂಡವರ ಮೆಚ್ಚಿಸುವ ಕಾರ್ಯಕ್ಕಿಂತ ಕನ್ನಡಮ್ಮನ ಹಾಗೂ ಕನ್ನಡತನವನ್ನು ಮೆಚ್ಚಿಸುವ ಕಾರ್ಯವಾಗಬೇಕು.

ಸಮ್ಮೇಳನಗಳು ನಿಗದಿತ ಸಮಯಕ್ಕೆ ಸರಿಯಾಗಿ ಆರಂಭವಾಗಬೇಕು. ಕನ್ನಡದ ಹಿರಿಯ ಸಾಹಿತಿಗಳ ಹಾಗೂ ಆಯಾ ಜಿಲ್ಲೆಗಳ ಐತಿಹಾಸಿಕ ಸ್ಥಳಗಳ ಪರಿಚಯದ ಜೊತೆ ಹಿರಿ – ಕಿರಿಯ ಲೇಖಕರ ಜಾಗೃತಿ ಮೂಡಿಸುವ, ಭಾಷಾ ಸೊಗಡು ಬಿಂಬಿಸುವ ವಿವಿಧ ಪುಸ್ತಕಗಳನ್ನು ಪರಿಚಯಿಸಬೇಕು. ವಿಚಾರ ಗೋಷ್ಠಿ ಹಾಗೂ ಕವಿಗೋಷ್ಠಿಗಳು ನಿಗದಿತ, ನಿರ್ದಿಷ್ಟ ವಿಷಯಗಳ ಮೇಲೆ ಬೆಳಕು ಬೀರುವಂತಿರಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾದೇಶಿಕ ಉಡುಗೆ – ತೊಡುಗೆ ಇತ್ಯಾದಿ ವೈಶಿಷ್ಟ್ಯಗಳನ್ನು ಪರಿಚಯಿಸುವಂತಿರಬೇಕು.

ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಗಳಲ್ಲಿ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಶುಭ ಕೋರುವವರ ಭಾವ ಚಿತ್ರಗಳೇ ರಾರಾಜಿಸುವ ಬದಲು ಕನ್ನಡ ನಾಡು, ನುಡಿ, ಇತಿಹಾಸ, ಸಂಸ್ಕೃತಿ, ವೈಭವ ಸಾರುವ ಚಿತ್ರಗಳು ಇದ್ದು ಕೆಳ ಸಾಲಿನಲ್ಲಿ ವೈಯಕ್ತಿಕ ಭಾವಚಿತ್ರಗಳು ಇರುವಂತಾದರೆ ಚೆನ್ನ .

ಕಳೆದ ವರ್ಷದ ಮತ್ತು ಹಳೆಯ ಕೆಲ ವರ್ಷದ ಆಹ್ವಾನ ಪತ್ರಿಕೆಗಳನ್ನು ಎದುರಿಗೆ ಇಟ್ಟುಕೊಂಡು ಪರಿಶೀಲಿಸಿ ಉದ್ಘಾಟಕರು, ಧ್ವಜ ಹಸ್ತಾಂತರ ಮಾಡುವವರು ಮತ್ತು ಹಾಲಿ ಅಧಿಕಾರ ಉಳ್ಳ ವ್ಯಕ್ತಿಗಳನ್ನು ಹೊರತು ಪಡಿಸಿ ಅತಿಥಿ ಗಣ್ಯರು, ಭಾಗವಹಿಸುವ ಕವಿಗಳು, ವಿಚಾರ ಮಂಡಿಸುವ ಉಪನ್ಯಾಸಕರು, ಸನ್ಮಾನಿತರು ಯಾರನ್ನೇ ಆಗಲಿ ಒಮ್ಮೆ ಬಂದವರನ್ನು ಮತ್ತೇ ಕರೆಯದಂತೆ ಹೊಸಬರಿಗೆ ಆದ್ಯತೆ ನೀಡಿ, ಗುರುತಿಸಿ, ಆಹ್ವಾನಿಸಬೇಕು . ಉಳಿದವರು ಹಾಗೂ ಕೋಟಿ ಕೋಟಿ ಹಣ ಪ್ರಾಯೋಜಕತ್ವ ನೀಡಿದ್ದರೂ ಸಹ ವೇದಿಕೆ ಮೇಲೆ ಬೇಡ. ವಿಐಪಿ ಗಳ ಅಥವಾ ಸಾಮಾನ್ಯರ ಸಾಲಿನಲ್ಲಿ ಕೂತು ಕನ್ನಡದ ಕಾರ್ಯಕ್ರಮವನ್ನು ಹೆಮ್ಮೆಯ ಭಾವದಿಂದ ಸವಿಯುವಂತಹ ನಿಸ್ವಾರ್ಥ ಭಾವಕ್ಕೆ ಆ ಮಹನೀಯರು ಸಾಕ್ಷಿಯಾಗಲಿ .

ತಿಂಡಿ ಮತ್ತು ಊಟದ ಸಮಯ ನಿಗದಿತ ಸಮಯಕ್ಕೆ ಸರಿಯಾಗಿ ಭೋಜನ ಮುಗಿಸಿ ಎಲ್ಲರೂ ವೇದಿಕೆಗಳ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳಲು ಅನುವಾಗುವಂತೆ ಇರಲಿ. ಹತ್ತಾರು ಕೌಂಟರ್ ಗಳ ವ್ಯವಸ್ಥೆ ಮೂಲಕ ವೇದಿಕೆ ಬಳಿ ಜನಸಂದಣಿ ಉಂಟಾಗದಂತೆ, ಕಾರ್ಯಕ್ರಮಕ್ಕೆ ಧಕ್ಕೆ ಉಂಟು ಮಾಡದಂತೆ ಊಟದ ವ್ಯವಸ್ಥೆ ದೂರದಲ್ಲಿ ಇರಲಿ.

ಮುಖ್ಯ ವೇದಿಕೆ ಹಾಗೂ ಇತರೆ ವೇದಿಕೆಗಳು ವಿಶಾಲ ಪ್ರಾಂಗಣದಲ್ಲಿ ಇದ್ದು, ಧ್ವನಿವರ್ಧಕಗಳು ಸ್ಪಷ್ಟವಾಗಿ ಕೇಳುವಂತೆ ವ್ಯವಸ್ಠೆ ಮಾಡುವ ಪೂರ್ವ ಕಾಳಜಿ ಆಯೋಜಕರಿಗೆ ಇರಲಿ.

ಮೊದಲು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಲ್ಲಿ ಕನ್ನಡತನ – ಗಟ್ಟಿತನ ಇರಬೇಕು. ಪದಾಧಿಕಾರಿಗಳು ಕನ್ನಡ ನಾಡು – ನುಡಿ , ಸಾಹಿತ್ಯದ ಆಳ – ಅರಿವು ಹೊಂದಿರಬೇಕು. ಸಾಹಿತ್ಯ ಕೃಷಿಯಲ್ಲಿ ತೊಡಗಿ ಕನ್ನಡಕ್ಕೆ ಅಪಾರ ಕೊಡುಗೆ ಕೊಟ್ಟು ಈ ಮೆಟ್ಟಿಲು ಏರಿರಬೇಕು . ಸಾಹಿತ್ಯವನ್ನು ಜನ – ಮನದ ಬಾಗಿಲಿಗೆ ತಲುಪಿಸುವ ಕಾರ್ಯ ಒಂದೇ ಗುರಿಯಾಗಿರಬೇಕು. ಎಲ್ಲಾ ಭೇದಗಳ ಮೀರಿದ ಪದಾಧಿಕಾರಿಗಳು ಕೂಡಿ ಸಾಹಿತ್ಯದ ತೇರು ಎಳೆಯುವ ವಾತಾವರಣ ನಿರ್ಮಾಣವಾದಾಗ ಮಾತ್ರ ಎಲ್ಲವೂ ಸಾಧ್ಯ. ಆಂತಹ ಭಾಗ್ಯ ಕನ್ನಡಿಗರಾದ್ದಾಗಲಿ ಎಂಬ ಆಶಯದೊಂದಿಗೆ ವಂದನೆಗಳು.

– ಗಂಗಾಧರ ಬಿ ಎಲ್ ನಿಟ್ಟೂರ್

Leave a Reply

Your email address will not be published. Required fields are marked *

error: Content is protected !!