ಮನೆ-ಮನೆಗೆ ಶ್ರೀಗಂಧ, ಇದು ಸಾಣೆಹಳ್ಳಿ ಪಂಡಿತಾರಾಧ್ಯ ಶ್ರೀಗಳ ವೃಕ್ಷ ಅಭಿಯಾನ

ಚಿತ್ರದುರ್ಗ : ಮುಂಗಾರು ಅತ್ಯಂತ ಚುರುಕಾಗಿದ್ದು ವಾಡಿಕೆಗಿಂತ ಹೆಚ್ಚು ಮಳೆ ಬೀಳುತ್ತಲಿದೆ. ಬಿತ್ತನೆಗೆ ಸಕಾಲವಾಗಿರುವಂತೆ ಗಿಡ-ಮರಗಳನ್ನು ನೆಡಲೂ ಸಹ ಅತ್ಯಂತ ಸಕಾಲ. ಪ್ರತಿವರ್ಷದಂತೆ ಈ ವರ್ಷವೂ ಸಾಣೆಹಳ್ಳಿ ಶ್ರೀಮಠದ ಆವರಣ, ಹೊಲ, ತೋಟಗಳಲ್ಲಿ ಶ್ರೀಗಂಧ, ನೇರಲ, ಪ್ಯಾರಲ, ಮಹಾಘನಿ, ತೆಂಗು, ಅಡಿಕೆ, ಮಾವು, ಬೇವು ಮುಂತಾದ ವೈವಿಧ್ಯಮಯ ಗಿಡಗಳನ್ನು ನೆಡಲಾಗುತ್ತಿದೆ.

ಸಾಣೆಹಳ್ಳಿಯ ಶ್ರೀಮಠದ ಆವರಣದಲ್ಲಿ ಈ ಹಿಂದೆ ನೆಟ್ಟಿರುವ ನೇರಲ, ಪ್ಯಾರಲ, ಮಾವು, ಸೀತಾಫಲ, ರಾಮಫಲ, ಲಕ್ಷಣ ಫಲ, ನೆಲ್ಲಿ, ಚಳ್ಳಕಾಯಿ, ಅಂಜೂರ ಮುಂತಾದ ಮರ-ಗಿಡಗಳು ಫಲಬಿಟ್ಟು ತೊನೆದಾಡುತ್ತಿವೆ. ಪರಿಸರ ಪ್ರಿಯರ ಕಣ್ಣಿಗೆ ಹಬ್ಬವಾಗಿರುವಂತೆ ಹಕ್ಕಿಪಕ್ಷಿಗಳು, ಹಿರಿ-ಕಿರಿಯರೆನ್ನದೆ ವಿವಿಧ ಹಣ್ಣುಗಳ ಸವಿರುಚಿಯನ್ನು ಸವಿಯುತ್ತಿದ್ದಾರೆ. ಮಠದಂತೆ ಮನೆಯಂಗಳ, ಹೊಲ-ಗದ್ದೆಗಳೂ ಹಸಿರಿನಿಂದ ಕಂಗೊಳಿಸಬೇಕು, ಹೂವು-ಹಣ್ಣು-ಕಾಯಿಗಳಿಂದ ಸುಲಭವಾಗಿ ದೊರಕುವಂತಾಗಬೇಕು, ಪರಿಸರ ಶುದ್ದವಾಗಿರಬೇಕು ಎನ್ನುವ ಹಿನ್ನೆಲೆಯಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಪ್ರತಿವರ್ಷವೂ ಮುಂಗಾರಿನಲ್ಲಿ ವಿವಿಧ ಸಸಿಗಳನ್ನು ತರಿಸಿ ಗ್ರಾಮಸ್ಥರಿಗೆ, ಭಕ್ತರಿಗೆ, ಆಸಕ್ತರಿಗೆ ವಿತರಿಸುವರು.

ಈ ವರ್ಷ ಮನೆಗೊಂದರಂತೆ ಶ್ರೀಗಂಧದ ಗಿಡಗಳನ್ನು ನೀಡಿದರು. ಈ ಸಂದರ್ಭದಲ್ಲಿ ಸಾಣೇಹಳ್ಳಿ ಗ್ರಾಮಪಂಚಾಯತಿ ಅಧ್ಯಕ್ಷ ರಂಗಪ್ಪ, ಸದಸ್ಯರಾದ ನಾಗಭೂಷಣ್, ಸ್ವಾಮಿ, ಚೇತನ್, ಜಗದೀಶ್ ಪಟೇಲ್, ನಾರಾಯಣಸ್ವಾಮಿ ಮತ್ತು ಗ್ರಾಮಸ್ಥರಾದ ಪರಮೇಶ್ವರಯ್ಯ, ಚನ್ನಬಸವಯ್ಯ, ಕೃಷ್ಣಪ್ಪ ಮತ್ತು ಶ್ರೀಮಠದ ಸಿಬ್ಬಂದಿವರ್ಗ ಉಪಸ್ಥಿತರಿದ್ದರು. ಸಾಂಕೇತಿಕವಾಗಿ ನಾಲ್ಕಾರು ಜನಕ್ಕೆ ಪೂಜ್ಯರು ಸಸಿ ವಿತರಿಸಿದರು. ನಂತರ ಟ್ರಾಕ್ಟರ್ ನಲ್ಲಿ ಗಂಧದ ಗಿಡಗಳನ್ನು ಇಟ್ಟುಕೊಂಡು ಗ್ರಾಮದ ಪ್ರತಿ ಮನೆಗೂ ತಲುಪಿಸಲಾಯಿತು.

Leave a Reply

Your email address will not be published. Required fields are marked *

error: Content is protected !!