ಎಸ್‍ಸಿಪಿ ಹಾಗೂ ಟಿಎಸ್‍ಪಿ ಪ್ರಗತಿ ಪರಿಶೀಲನಾ ಸಭೆ: ವಿವಿಧ ನಿಗಮಗಳಡಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ತ್ವರಿತ ಪೂರ್ಣಗೊಳಿಸಿ – ಪೂಜಾರ್ ವೀರಮಲ್ಲಪ್ಪ

ದಾವಣಗೆರೆ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ವಿವಿಧ ನಿಗಮಗಳಡಿ ಒದಗಿಸಲಾಗುವ ಸರ್ಕಾರಿ ಸೌಲಭ್ಯಗಳಿಗೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ತ್ವರಿತವಾಗಿ ಪೂರ್ಣಗೊಳಿಸಿ, ಸರ್ಕಾರಿ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ಶೀಘ್ರ ದೊರಕುವಂತೆ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಪರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾದ ಪರಿಶಿಷ್ಟ ಜಾತಿ ಉಪಯೋಜನೆ, ಗಿರಿಜನ ಉಪಯೋಜನೆಯ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಡಿ ಸ್ವಯಂ ಉದ್ಯೋಗ ಸಾಲ ಯೋಜನೆ, ಕಿರುಸಾಲ ಯೋಜನೆ, ಗಂಗಾಕಲ್ಯಾಣ, ಭೂ ಒಡೆತನ ಯೋಜನೆಗೆ ಪ್ರಸಕ್ತ ವರ್ಷ 661 ಫಲಾನುಭವಿಗಳಿಗೆ ಒಟ್ಟು 4.98 ಕೋಟಿ ಸಹಾಯಧನ ಹಾಗೂ 1.43 ಕೋಟಿ ರೂ. ಬೀಜಧನ ಸೌಲಭ್ಯ ಕಲ್ಪಿಸುವ ಗುರಿ ನಿಗದಿಪಡಿಸಲಾಗಿದ್ದು, ಇದೇ ಯೋಜನೆಗಳಿಗೆ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಪ್ರಸಕ್ತ ವರ್ಷ 257 ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲು 2.21 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ. ಆದರೆ ಇದುವರೆಗೂ ಗುರಿ ಸಾಧನೆ ಆಗಿಲ್ಲ ಎಂದು ಅಪರ ಜಿಲ್ಲಾಧಿಕಾರಿಗಳು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಭಯ ನಿಗಮಗಳ ಅಧಿಕಾರಿಗಳು, ಪ್ರಸಕ್ತ ವರ್ಷದ ಯೋಜನೆಗಳಿಗಾಗಿ ಈಗಾಗಲೆ ಅರ್ಜಿ ಆಹ್ವಾನಿಸಿ, ಸ್ವೀಕೃತಗೊಂಡ ಅರ್ಜಿಗಳನ್ನು ಪರಿಶೀಲನೆಗೆ ಒಳಪಡಿಸಿದ ಬಳಿಕ, ಫಲಾನುಭವಿಗಳ ಆಯ್ಕೆಗಾಗಿ ನಿಯಮಾನುಸಾರ ಆಯಾ ವಿಧಾನಸಭೆ ಕ್ಷೇತ್ರಗಳ ಶಾಸಕರುಗಳ ಅಧ್ಯಕ್ಷತೆಯ ಆಯ್ಕೆ ಸಮಿತಿಗೆ ಪಟ್ಟಿಯನ್ನು ಸಲ್ಲಿಸಲಾಗಿದೆ. ಶಾಸಕರ ಅಧ್ಯಕ್ಷತೆಯ ಸಮಿತಿಯು ಫಲಾನುಭವಿಗಳನ್ನು ಆಯ್ಕೆ ಮಾಡಿ, ನೀಡಿದ ಬಳಿಕ, ಯೋಜನೆ ಅನುಷ್ಠಾನಗೊಳ್ಳಲಿದೆ ಎಂದರು. ಪ್ರತಿಕ್ರಿಯಿಸಿದ ಜಿ.ಪಂ. ಉಪಕಾರ್ಯದರ್ಶಿಗಳು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೆ ಆಯಾ ಕ್ಷೇತ್ರಗಳ ಶಾಸಕರುಗಳನ್ನು ಭೇಟಿಯಾಗಿ, ಫಲಾನುಭವಿಗಳ ಆಯ್ಕೆ ಪಟ್ಟಿ ಪಡೆಯಲು ಕ್ರಮವಹಿಸಬೇಕು ಎಂದರು. ಅಪರ ಜಿಲ್ಲಾಧಿಕಾರಿಗಳು ಮಾತನಾಡಿ, ಆದಷ್ಟು ಶೀಘ್ರ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿ, ಸಂಬಂಧಪಟ್ಟ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ತ್ವರಿತವಾಗಿ ತಲುಪಿಸಲು ಪ್ರಾಮಾಣಿಕ ಯತ್ನ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಟಿ. ತಿಪ್ಪೇಶಪ್ಪ ಅವರು ಮಾತನಾಡಿ, ಆರ್‍ಟಿಇ ಯೋಜನೆಯಡಿ ಜಿಲ್ಲೆಯಲ್ಲಿ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಪ.ಜಾತಿ ಮತ್ತು ಪ.ಪಂಗಡದ ಒಟ್ಟು 3490 ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಕಾರ್ಯಕ್ರಮದಲ್ಲಿ ಪ್ರಸಕ್ತ ವರ್ಷ ಒಟ್ಟು 6.27 ಕೋಟಿ ರೂ. ಮೊತ್ತ ಪಾವತಿಸಲಾಗಿದೆ ಎಂದರು. ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಮಾತನಾಡಿ, ಪ್ರಸಕ್ತ ವರ್ಷ ಪ.ಜಾತಿ ಕಾರ್ಯಕ್ರಮಗಳಡಿ ಹನಿ ನೀರಾವರಿಯೋಜನೆಗೆ 4 ಕೋಟಿ ರೂ. ಅನುದಾನ, ಪ.ಪಂಗಡದಲ್ಲಿ 3.50 ಕೋಟಿ ರೂ. ನಿಗದಿಯಾಗಿದ್ದು, ಅನುದಾನ ಬಿಡುಗಡೆಯಾಗಿಲ್ಲ. ಈ ಮೊದಲು ಹನಿನೀರಾವರಿ ಯೋಜನೆಗೆ ಎಲ್ಲ ವರ್ಗದವರಿಗೂ ಶೇ. 90 ಸಬ್ಸಿಡಿ ನೀಡಲಾಗುತ್ತಿತ್ತು. ಆದರೆ ಪ್ರಸ್ತುತ ಪ.ಜಾತಿ ಮತ್ತು ಪ.ವರ್ಗದವರಿಗೆ ಮಾತ್ರ ಶೇ. 90 ಸಬ್ಸಿಡಿ ನೀಡಲಾಗುತ್ತಿದೆ.

ಇಲಾಖೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತೋಟಗಾರಿಕೆ ಮಿಷನ್, ಸಮಗ್ರ ತೋಟಗಾರಿಕೆ ಅಭಿವೃದ್ಧಿ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಸೇರಿದಂತೆ ಪ.ಜಾತಿ ಯೋಜನೆಗಳಿಗೆ 93.71 ಲಕ್ಷ ಹಾಗೂ ಪ.ಪಂಗಡ ಯೋಜನೆಗಳಿಗೆ 57.40 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ ಎಂದರು. ಜಂಟಿಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಮಾತನಾಡಿ, ರೈತರಿಗೆ ಕೃಷಿ ಉಪಕರಣ, ನೀರಾವರಿ ಘಟಕಗಳಿಗೆ ಸಹಾಯಧನ, ಬಿತ್ತನೆ ಬೀಜ ವಿತರಣೆ ಸೇರಿದಂತೆ ವಿವಿಧ ಯೋಜನೆಗಳಡಿ ಎಸ್‍ಸಿಪಿ ನಲ್ಲಿ 1.35 ಕೋಟಿ ರೂ. ಹಾಗೂ ಟಿಎಸ್‍ಪಿ ನಲ್ಲಿ 1.14 ಕೋಟಿ ರೂ. ಅನುದಾನ ಖರ್ಚು ಮಾಡಲಾಗಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್ ಮಾಹಿತಿ ನೀಡಿ, ಪ್ರಧಾನಮಂತ್ರಿ ಮಾತೃವಂದನ ಯೋಜನೆಯಡಿ ಪ.ಜಾತಿ, ಪ.ವರ್ಗ ಸೇರಿದಂತೆ ಎಲ್ಲ ವರ್ಗದವರಿಗೂ ಮೊದಲ ಹೆರಿಗೆಗೆ 5 ಸಾವಿರ ರೂ. ಸಹಾಯಧನ ನೀಡಲಾಗುತ್ತಿದೆ. ಈ ಯೋಜನೆಗೆ ಜಾತಿ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯವಲ್ಲದ ಕಾರಣ ಪ.ಜಾತಿ, ಪ.ವರ್ಗದ ಫಲಾನುಭವಿಗಳ ಸಂಖ್ಯೆ ಎಷ್ಟು ಎಂಬುದರ ಮಾಹಿತಿ ದೊರೆಯುತ್ತಿಲ್ಲ ಎಂದರು. ಅಪರ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಅರ್ಜಿದಾರರು ನೀಡುವ ಅರ್ಜಿ ನಮೂನೆಯಲ್ಲಿ ಜಾತಿ ಹೆಸರು ನಮೂದಿತವಾಗಿರುವುದರಿಂದ, ಇದನ್ನು ಪರಿಗಣಿಸಿ, ಪ.ಜಾತಿ ಹಾಗೂ ಪ.ವರ್ಗದ ಫಲಾನುಭವಿಗಳ ಸಂಖ್ಯೆ ಎಷ್ಟು ಎಂಬುದನ್ನು ವರದಿಯಲ್ಲಿ ಪರಿಗಣಿಸುವಂತೆ ಸೂಚನೆ ನೀಡಿದರು.

ಎಲ್ಲ ಇಲಾಖೆ ಅಧಿಕಾರಿಗಳು ಆಯಾ ವರ್ಷದಲ್ಲಿ ಪ.ಜಾತಿ ಮತ್ತು ಪ.ವರ್ಗದವರಿಗೆ ಮೀಸಲಿರುವ ಅನುದಾನವನ್ನು ಆಯಾ ವರ್ಷದೊಳಗೆ ಕಡ್ಡಾಯವಾಗಿ ಖರ್ಚು ಮಾಡಬೇಕು. ಈಗಾಗಲೆ ಪ್ರಸಕ್ತ ಆರ್ಥಿಕ ವರ್ಷದ ಅಂತ್ಯದ ಅವಧಿ ಅಂದರೆ ಜನವರಿ ತಿಂಗಳಾಂತ್ಯದಲ್ಲಿದ್ದು, ನಿಗದಿಪಡಿಸಿದ ಅನುದಾನವನ್ನು ಅದೇ ಉದ್ದೇಶಕ್ಕೆ ಖರ್ಚು ಮಾಡಬೇಕು. ಮಾರ್ಚ್ ಬರುವವರೆಗೂ ಕಾಯದೆ, ಕೂಡಲೆ ಯೋಜನೆಗಳ ಅನುಷ್ಠಾನ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.

ಜಿ.ಪಂ. ಉಪಕಾರ್ಯದರ್ಶಿ ಆನಂದ್ ಅವರು ಮಾತನಾಡಿ, ಎಸ್‍ಸಿಪಿ, ಟಿಎಸ್‍ಪಿ ಯೋಜನೆಯಡಿ ಆಯಾ ಇಲಾಖೆಗೆ ನಿಗದಿಪಡಿಸಿದ ಹಾಗೂ ಬಿಡುಗಡೆಯಾದ ಅನುದಾನವನ್ನು ತಪ್ಪದೆ ವೆಚ್ಚ ಮಾಡಬೇಕು. ಯೋಜನೆ ಅನುಷ್ಠಾನದಲ್ಲಿ ಲೋಪವೆಸಗುವ ಅಧಿಕಾರಿಗಳ ವಿರುದ್ಧ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆ ಹೂಡಲು ಅವಕಾಶವಿದೆ, ಹೀಗಾಗಿ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ್, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಒಟ್ಟು 40 ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.

Leave a Reply

Your email address will not be published. Required fields are marked *

error: Content is protected !!