ಅಶೋಕ ರೈಲ್ವೆ ಗೇಟ್ ಸಮಸ್ಯೆ ಪರಿಹಾರಕ್ಕೆ ಅಂಡರ್ ಪಾಸ್ ರಸ್ತೆ ನಿರ್ಮಾಣ- ಸಂಸದ ಜಿ.ಎಂ. ಸಿದ್ದೇಶ್ವರ

ದಾವಣಗೆರ: ದಾವಣಗೆರೆ ನಗರದ ಅಶೋಕ ಚಿತ್ರಮಂದಿರದ ಬಳಿ ರೈಲ್ವೆ ಲೆವೆಲ್ ಕ್ರಾಸಿಂಗ್ 199 ರ ಬಳಿ ರೈಲ್ವೆ ಗೇಟ್ ಹತ್ತಿರ ಕೆಳಸೇತುವೆ ನಿರ್ಮಾಣದ ವಿಷಯವಾಗಿ ಇಂದು ಜಿಲ್ಲಾಧಿಕಾರಿಗಳ ಕಛೆರಿಯಲ್ಲಿ ಇಂದು ಸಭೆ ಏರ್ಪಾಡಾಗಿತ್ತು, ಅಶೋಕ ಚಿತ್ರಮಂದಿರದ ಬಳಿ ಹಾಲಿ ಇರುವ ಗೇಟನ್ನು ರೈಲ್ವೆ ಇಲಾಖೆ ತೆರವುಗೊಳಿಸಿ ಸದರಿ ಜಾಗದಲ್ಲಿ ಲಿಮಿಟೆಡ್ ಹೈಟ್ ಸಬ್‍ವೇ ಹಾಗೂ ಅಲ್ಲಿಂದ 800 ಮೀಟರ್ ದೂರದಲ್ಲಿ ಪುಷ್ಪಾಂಜಲಿ ಚಿತ್ರಮಂದಿರದ ಎದುರುಗಡೆ ಎರಡು ವೆಂಟ್‍ಗಳುಳ್ಳ ಕೆಳಸೇತುವೆಯನ್ನು ನಿರ್ಮಾಣ ಮಾಡಲು ರೈಲ್ವೆ ಇಲಾಖೆ ರೂ.35.00 ಕೋಟಿ ಅನುದಾನವನ್ನು ಒದಗಿಸಲು ಬಜೆಟ್‍ನಲ್ಲಿ ಅವಕಾಶ ಕಲ್ಪಿಸಿಕೊಡಲಾಗಿದೆ. ಕೆಳಸೇತುವೆ ನಿರ್ಮಾಣವಾದರೆ ಸೇತುವೆಗೆ ಸಂಪರ್ಕ ಕಲ್ಪಿಸಲು ರೈಲ್ವೆ ಹಳಿಯ ಇನ್ನೊಂದು ಮಗ್ಗಲಲ್ಲಿ ಸಮಾನಾಂತರ ರಸ್ತೆ ನಿರ್ಮಾಣ ಮಾಡಬೇಕಾಗುತ್ತದೆ ಎನ್ನುವ ವಿಷಯ ಸಭೆಯಲ್ಲಿ ಚರ್ಚೆಗೆ ಬಂದಿತು.

ಸಮಾನಾಂತರ ರಸ್ತೆ ನಿರ್ಮಾಣ ಮಾಡಲು ಅಲ್ಲಿ ಖಾಸಗಿ ಜಮೀನನ್ನು ಬಳಸಿಕೊಂಡು ರಸ್ತೆ ನಿರ್ಮಾಣ ಮಾಡಬೇಕಾಗುತ್ತದೆ ಎನ್ನುವ ವಿಷಯವನ್ನು ಜಿಲ್ಲಾಧಿಕಾರಿಗಳು ಸಭೆಯ ಗಮನಕ್ಕೆ ತಂದರು. ಅಶೋಕ ಚಿತ್ರಮಂದಿರದ ರೈಲ್ವೆ ಗೇಟ್ ಸಮಸ್ಯೆ ಕಳೆದ ನಾಲ್ಕೈದು ದಶಕಗಳ ಸಮಸ್ಯೆ ಇದನ್ನು ಪರಿಹರಿಸಲು ಏನೇನು ಅವಕಾಶವಿದೆಯೋ ಎಲ್ಲವನ್ನು ಬಳಸಿಕೊಂಡು ಈ ಸಮಸ್ಯೆಗೆ ಮುಕ್ತಿ ನೀಡಿ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅವರು ತಿಳಿಸಿದರು. ಖಾಸಗಿ ಜಮೀನನ್ನು ಸ್ವಾಧೀನಪಡಿಸಿಕೊಂಡು ಮಾಲಿಕರಿಗೆ ಪರಿಹಾರ ನೀಡಲು ಈ ಯೋಜನೆಯಡಿ ಯಾವುದೇ ಅವಕಾಶ ಇಲ್ಲ ಎನ್ನುವ ವಿಷಯವನ್ನೂ ಸಹ ಮಾಲಿಕರಿಗೆ ತಿಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಸಭೆಯಲ್ಲಿ ಪ್ರಸ್ತಾಪಿಸಿದರು. ನಾಳೆಯೇ ಅಲ್ಲಿರುವ ಖಾಸಗಿ ಜಮೀನಿನ ಮಾಲಿಕರ ಸಭೆ ಕರೆದು ಸಮಾನಾಂತರ ರಸ್ತೆ ನಿರ್ಮಾಣಕ್ಕೆ ಜಾಗ ಬಿಟ್ಟುಕೊಡುವಂತೆ ಮಾಲಿಕರ ಮನವೊಲಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ದಾವಣಗೆರೆ ನಗರದ ಕಳೆದ ನಾಲ್ಕೈದು ದಶಕಗಳ ಈ ಸಮಸ್ಯೆಯನ್ನು ಪರಿಹರಿಸಲು ಇಲ್ಲಿರುವ ರೈಲ್ವೆ ಹಳಿಗೆ ಸಮಾನಾಂತರವಾಗಿ ಅಶೋಕ ಚಿತ್ರಮಂದಿರದ ರಸ್ತೆಯಿಂದ ಈರುಳ್ಳಿ ಮಾರ್ಕೆಟ್ ಸೇತುವೆಯವರೆಗೆ 60 ಅಡಿ ರಸ್ತೆ ನಿರ್ಮಾಣ ಮಾಡಬೇಕಾಗಿದ್ದು ರಸ್ತೆಯನ್ನು ಮಹಾನಗರಪಾಲಿಕೆ ಅಥವಾ ನಗರಾಭಿವೃದ್ದಿ ಪ್ರಾಧಿಕಾರದ ವತಿಯಿಂದ ಮಾಡಿಕೊಡಲಾಗುವುದು ಎಂದು ಸಂಸದರು ತಿಳಿಸಿದರು.

ಒಟ್ಟಾರೆಯಾಗಿ ನಗರದ ಜ್ವಲಂತ ಸಮಸ್ಯಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಸೇರಿ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದು ಸಂಸದರು ತಿಳಿಸಿದರು.

ಬೆಂಗಳೂರಿನ ರೈಲ್ವೆ ಇಲಾಖೆ ಡೆಪ್ಯುಟಿ ಚೀಫ್ ಇಂಜಿನಿಯರ್ ದೇವೇಂದ್ರಗುಪ್ತ, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಶ್ರೀಧರ್ ಮೂರ್ತಿ, ಮಹಾನಗರಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ. ರಿಷ್ಯಂತ್, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಧೂಡಾ ಆಯುಕ್ತ ಕುಮಾರಸ್ವಾಮಿ, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!