ಶಿಸ್ತಿನ ಜೀವನವನ್ನು ನಡೆಸುವುದೇ ನಿಜವಾದ ಯೋಗ – ಮಾಜಿ ಸಚೇತಕ ಡಾ.ಎ.ಹೆಚ್‌. ಶಿವಯೋಗಿಸ್ವಾಮಿ

ದಾವಣಗೆರೆ: ಶಿಸ್ತಿನ ಜೀವನವನ್ನು ನಡೆಸುವುದೇ ನಿಜವಾದ ಯೋಗ. ಯೋಗವು ಕೇವಲ ದೈಹಿಕವಾಗಿ ಅಷ್ಟೇ ಅಲ್ಲದೆ ಮಾನಸಿಕವಾಗಿ ಶಕ್ತಿ ತುಂಬುವ ಅದ್ಭುತವಾದ ಕ್ರಿಯೆಯಾಗಿದೆ ಎಂದು ವಿಪ ಮಾಜಿ ಸಚೇತಕ ಡಾ.ಎ.ಹೆಚ್‌. ಶಿವಯೋಗಿಸ್ವಾಮಿ ಪ್ರತಿಪಾದಿಸಿದರು.

ಶ್ರೀ ಸೋಮೇಶ್ವರ ವಿದ್ಯಾಲಯದ ಮಂಜುಷಾ ಸಭಾಂಗಣದಲ್ಲಿ ಬಿಜೆಪಿ ಉತ್ತರ ಮಂಡಲದ ವತಿಯಿಂದ ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಶಿಸ್ತಿನ ಜೀವನ ಹೊಂದಿರುವ ಮತ್ತು ಮಾನಸಿಕವಾಗಿ ಸದೃಡವಾಗಿರುವ ವ್ಯಕ್ತಿ ಮಾತ್ರ ಸಂಸ್ಕಾರಯುತನಾಗಬಲ್ಲನು. ಅಂತಹ ವ್ಯಕ್ತಿಗಳಿಂದ ಮಾತ್ರ ಸದೃಢ ಹಾಗೂ ಬಲಿಷ್ಠ ದೇಶ ಕಟ್ಟಲು ಸಾಧ್ಯ ಎಂದು ಅಭಿಪ್ರಾಯಿಸಿದರು.

ಶ್ರೀ ಸೋಮೇಶ್ವರ ವಿದ್ಯಾಲಯದ ಕಾರ್ಯದರ್ಶಿ ಮತ್ತು ಬಿಜೆಪಿ ರಾಜ್ಯ ಶಿಕ್ಷಕರ ಪ್ರಕೋಷ್ಠದ ಸಹ ಸಂಚಾಲಕ ಕೆ.ಎಮ್‌.ಸುರೇಶ್ ಮಾತನಾಡಿ, ಪುರಾತನ ಕಾಲದಿಂದಲೂ ಯೋಗಾಸನವು ಹೆಚ್ವಿನ ಪ್ರಾಮುಖ್ಯತೆ ಮತ್ತು ಮಹತ್ವವನ್ನು ಪಡೆದುಕೊಂಡಿದ್ದು, ಸರಿಯಾದ ಮಾರ್ಗದರ್ಶಕರ ಮೂಲಕ ಅದನ್ನು ಕಲಿತು ಯೋಗಾಭ್ಯಾಸ ಮಾಡಿದಲ್ಲಿ ನಿಸ್ಸಂಶಯವಾಗಿ ದೇಹಕ್ಕೆ ಮತ್ತು ಜೀವನದಲ್ಲಿ ಅತ್ಯುತ್ತಮ ಫಲಿತಾಂಶವನ್ನು ಪಡೆಯಬಹುದು ಎಂದು ಹೇಳಿದರು.

ಯೋಗವನ್ನು ವಿಶ್ವದ ಉದ್ದಗಲಕ್ಕೆ ಪಸರಿಸಿದ್ದು ಮಾತ್ರವಲ್ಲದೆ ಜೂನ್ 21 ವಿಶ್ವ ಯೋಗ ದಿನಾಚರಣೆ ದಿನವಾಗಿ ಜಾರಿಗೆ ತಂದ ಕೀರ್ತಿ ನಮ್ಮ ದೇಶಕ್ಕೆ ಸಲ್ಲುತ್ತದೆ ಎಂದರು.ಕಾರ್ಯಕ್ರಮದಲ್ಲಿ ಯೋಗ ಗುರುಗಳಾದ ಡಾ.ಸಿದ್ದಯ್ಯ ಅವರು ಪ್ರಾತ್ಯಕ್ಷಿಕೆಯ ಮೂಲಕ ಎಲ್ಲರಿಗೂ ಸರಳ ಯೋಗವನ್ನು ಕಲಿಸಿದರು. ಮತ್ತು ವಿವಿಧ ಆಸನಗಳಿಂದ ದೇಹಕ್ಕೆ ಮತ್ತು ಮನಸ್ಸಿಗೆ ಯಾವ ರೀತಿಯಲ್ಲಿ ಪ್ರಯೋಜನಗಳಿವೆ ಎನ್ನುವುದನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಬಿ.ಜಿ.ಅಜಯ್‌ಕುಮಾರ್, ಜಿಲ್ಲಾ ಬಿಜೆಪಿ ವಕ್ತಾರರಾದ ಶಿವಶಂಕರ್, ಮಹಾನಗರ ಪಾಲಿಕೆ ಸದಸ್ಯ ಕೆ.ಎಮ್.ವೀರೇಶ್, ಬಿಜೆಪಿ ಉತ್ತರ ಮಂಡಲದ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ, ಉತ್ತರ ಮಹಿಳಾ ಮೋರ್ಚಾ ಅಧ್ಯಕ್ಷೆ ಸರ್ವಮಂಗಳ, ಶ್ರೀನಿವಾಸ, ಸಚಿನ್ ವರ್ಣೇಕರ್, ಶಿವು, ಪ್ರದೀಪ್, ಅನಿಲ್, ರಘು ತೊಗಟೆ ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!