SSLC: ಎಸ್ ಎಸ್ ಎಲ್ ಸಿ ಪರೀಕ್ಷೆ, ಶಾಲೆ ಪ್ರಾರಂಭ, ಶಿಕ್ಷಕರ ವರ್ಗಾವಣೆ ಇತ್ಯಾದಿ ವಿಷಯಗಳ ಬಗ್ಗೆ ಸಚಿವ ಸುರೇಶ್ ಕುಮಾರ್ ಏನೂ ಹೇಳಿದ್ರು ಅಂತೀರಾ…?👇 ಸಂಪೂರ್ಣ ಓದಿ

 

ಬೆಂಗಳೂರು: ಮಕ್ಕಳ ಮುಂದಿನ ಭವಿಷ್ಯದ ಹಿತದೃಷ್ಟಿಯಿಂದ ಸುರಕ್ಷಿತ ವಾತಾವರಣ ಕಲ್ಪಿಸಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದ್ದು, ಸೋಂಕಿತ ಮಕ್ಕಳಿಗೂ ಪರೀಕ್ಷೆ ಬರೆಯಲು ಕೋವಿಡ್ ಕೇರ್ ಸೆಂಟರ್ ನಲ್ಲಿಯೇ ಅವಕಾಶ ಕಲ್ಪಿಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಕಳೆದ ಬಾರಿಯೂ ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ಆತಂಕದಿಂದಲೇ ಆಯೋಜಿಸಲಾಗಿತ್ತು, ಅದೃಷ್ಟವಶಾತ್ ಯಾವುದೇ ತೊಂದರೆಯೂ ಆಗಲಿಲ್ಲ. ಆದರೆ ಈ ಬಾರಿ ಎರಡು ದಿನ ಮಾತ್ರ ಅಗತ್ಯ ಸುರಕ್ಷತೆ ಕ್ರಮ ಕೈಗೊಂಡು ಪರೀಕ್ಷೆ ನಡೆಸಲು ತೀರ್ಮಾನ ಮಾಡಲಾಗಿದೆ ಎಂದು ವಿಕಾಸಸೌಧದಲ್ಲಿ ಶಿಕ್ಷಣ ಇಲಾಖೆ ಆಯುಕ್ತ ಅನ್ಬು ಕುಮಾರ್ ಅವರೊಂದಿಗೆ ಸುದ್ದಿಗೋಷ್ಟಿಯಲ್ಲಿ ಅವರು ಹೇಳಿದರು.

ರಾಜ್ಯದಲ್ಲಿ 8,76,581 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗಿಯಾಗಲಿದ್ದು, 73,066 ಪರೀಕ್ಷಾ ಕೊಠಡಿಗಳು ಇರಲಿವೆ. ಜೂ. 30 ರಂದು ಆಯಾಯ ಮುಖ್ಯಸ್ಥರಿಗೆ ಆಲ್ ಟಿಕೆಟ್ ನೀಡಲಾಗುತ್ತದೆ. ಜುಲೈ 19 ರಂದು 10.30-1.30ರ ವರೆಗೆ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯಲಿದ್ದು, ಜುಲೈ 22 ರಂದು ಕನ್ನಡ, ಹಿಂದಿ, ಇಂಗ್ಲೀಷ್ ಭಾಷಾ ಪತ್ರಿಕೆ ಇರಲಿದೆ. ಎಲ್ಲಾ ಆಬ್ಜೆಕ್ಟೀವ್ ಟೈಪ್ಸ್ ಪ್ರಶ್ನೆ ಪತ್ರಿಕೆ ಇರಲಿದೆ ಎಂದು ಮಾಹಿತಿ ನೀಡಿದರು.

ಇಂದು‌ ಎಲ್ಲಾ ಜಿಲ್ಲಾ ಜಿಲ್ಲಾಧಿಕಾರಿಗಳು, ಸಿಇಓ ಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡಿದ್ದೇವೆ.
ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇವೆ. ಈ ವರ್ಷ ಎರಡೇ ದಿನ ಪರೀಕ್ಷೆ ನಡೆಯಲಿದ್ದು, ಜಿಲ್ಲಾಧಿಕಾರಿಗಳು, ಸಿಇಓಗಳು ಏನು ಕ್ರಮ ತೆಗೆದುಕೊಳ್ಳಬೇಕು ಎಂದು ಅವರಿಗೆ ಸೂಚನೆ ನೀಡಿದ್ದೇವೆ ಎಂದರು.

ಎರಡು ದಿನ ಪರೀಕ್ಷಾ ಕೇಂದ್ರದ ಬಳಿ 144 ಸೆಕ್ಷನ್ ಜಾರಿಯಲ್ಲಿರಲಿದೆ. 200 ಮೀಟರ್ ದೂರದಲ್ಲಿ ಸೆಕ್ಷನ್ ಜಾರಿಯಲ್ಲಿರಲಿದೆ. ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದರು.

10 ಸಾವಿರ ಮಕ್ಕಳು ಮೈಗ್ರೇಂಟ್ ಮಕ್ಕಳಿದ್ದಾರೆ. ಮೈಗ್ರೇಂಟ್ ಮಕ್ಕಳು ಅವರವರ ಮನೆ ಹತ್ತಿರ ಬಳಿಯ ಸೆಂಟರ್ ಗಳಲ್ಲಿ ಬರೆಯಬಹುದು.
ಕೊರೊನಾ ಸೋಂಕಿನ ಲಕ್ಷಣಗಳಿದ್ದರೆ ಅಂತಹ ಮಕ್ಕಳಿಗೆ ಪ್ರತ್ಯೇಕ ಕೊಠಡಿ ಮಾಡಲಾಗುತ್ತದೆ.
ಪಾಸಿಟಿವ್ ಇರುವ ಮಕ್ಕಳು ಪರೀಕ್ಷೆ ಬರೆಯುತ್ತೇನೆಂದರೂ ಸ್ಥಳೀಯ ಕೊವಿಡ್ ಕೇರ್ ಸೆಂಟರ್ ನಲ್ಲಿ ಅವಕಾಶ ನೀಡಲಾಗುತ್ತದೆ. ಪರೀಕ್ಷೆಯಲ್ಲಿ ಭಾಗಿಯಾಗುವ ಶಿಕ್ಷಕ, ಸಿಬ್ಬಂದಿ ಕಡ್ಡಾಯವಾಗಿ ವ್ಯಾಕ್ಸಿನ್ ಹಾಕಿರಬೇಕು.
ಹಾಕಿಸದೇ ಇರುವವರು ಒಂದು ವಾರದ ಒಳಗೆ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು ಎಂದು ತಿಳಿಸಿದರು.

ಎಲ್ಲಾ ಮಕ್ಕಳಿಗೆ N95 ಮಾಸ್ಕ್ ಕೊಡುವ ನಿರ್ಧಾರ ಇತ್ತು. ಆದರೆ, N95 ಮಾಸ್ಕ್ ಅಗತ್ಯ ಇಲ್ಲ ಅದರ ಬದಲು ಸರ್ಜಿಕಲ್ ಅಥವಾ ಬಟ್ಟೆ ಮಾಸ್ಕ್ ಹಾಕಬಹುದು. ಕೊರೊನಾ ಸೊಂಕಿರುವ ಮಕ್ಕಳಿಗೆ N95 ಕಡ್ಡಾಯವಾಗಿ ಹಾಕಬೇಕು ಮತ್ತು ಶಿಕ್ಷಕ, ಸಿಬ್ಬಂದಿಗಳು N95, ಫೇಸ್ ಶೀಲ್ಡ್ ಕಡ್ಡಾಯವಾಗಿ ಹಾಕಿಕೊಳ್ಳಬೇಕು ಎಂದು ಆದೇಶಿಸಿದರು.

ಒಂದು ಕೊಠಡಿಯಲ್ಲಿ 12 ಮಕ್ಕಳು, ಒಂದು ಡೆಸ್ಕ್ ಗೆ ಒಂದು ಮಗು ಕೂರಬೇಕು. ಎಲ್ಲಾ ಕೇಂದ್ರಗಳಲ್ಲಿ ಆಶಾ ಕಾರ್ಯಕರ್ತೆ, ಪ್ಯಾರಾ ಮೆಡಿಕಲ್ ಸ್ಟಾಫ್ ಇರಲಿದ್ದಾರೆ. ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಗೆ ತೆಗೆದುಕೊಂಡು ಹೋಗುವಾಗ ಭದ್ರತೆ ನೀಡಲು ಪೊಲೀಸ್ ಅಧಿಕಾರಿಗಳಿಗೂ ತಿಳಿಸಿದ್ದೇವೆ. ಪತ್ರಿಕೆ ಲೀಕ್ ವದಂತಿ ಹರಡಿಸುವವರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.

ಎಲ್ಲಾ ಸೆಂಟರ್ ಗಳಲ್ಲಿ ಪೊಲೀಸ್ ಸಿಬ್ಬಂದಿ, ಶಾಲಾ ಸಿಬ್ಬಂದಿ 8 ಗಂಟೆಗೆ ಸೆಂಟರ್ ಬಳಿ ಬರಬೇಕು. ಶಿಕ್ಷಕರಲ್ಲಿ ಸೋಂಕಿನ ಲಕ್ಷಣ ಕಂಡು ಬಂದರೆ ಪರೀಕ್ಷಾ ಡ್ಯೂಟಿಗೆ ಅವರನ್ನು ತೆಗೆದುಕೊಳ್ಳುವಂತಿಲ್ಲ‌. ಜತೆಗೆ ಪರೀಕ್ಷೆ ಬರುವಾಗ ಹಾಗು ಹೋಗುವಾಗಲೂ ಮಕ್ಕಳಿಗೂ ಸ್ಯಾನಿಟೈಸ್ ಮಾಡಬೇಕೆಂದು ಸೂಚನೆ‌ ನೀಡಲಾಗಿದೆ ಎಂದರು.

ಕೋವಿಡ್ ಕಾರಣದಿಂದ ಪರೀಕ್ಷೆ ಬರೆಯಲು ಆಗದೇ ಇದ್ದರೆ, ನಂತರ ಅಂತಹ ಮಕ್ಕಳಿಗೆ ಮತ್ತೆ ಅವಕಾಶ ನೀಡಲಾಗುತ್ತದೆ. ಆಗಲೂ ಅವರನ್ನು
ಫ್ರೆಷರ್ ಎಂದೇ ಪರಿಗಣಿಸಲಾಗುತ್ತದೆ. ಮಕ್ಕಳಾಗಲೀ, ಪೋಷಕರಾಗಲೀ ಈ ಬಗ್ಗೆ ಆತಂಕ‌ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ಈ ಬಾರಿ ಕೂಡ ಪರೀಕ್ಷೆ ಸುರಕ್ಷಿತವಾಗಿ ಯಾವುದೇ ಅವಘಡಗಳು ಸಂಭವಿಸದಂತೆ ನಡೆಯಲಿದೆ ಎಂಬ ವಿಶ್ವಾಸ ನಮಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!