Sulekere: ಸೂಳೆಕೆರೆ ರಸ್ತೆ ಅಗಲಿಕರಣಕ್ಕೆ ಬ್ಲಾಸ್ಟ್; ನಾಲ್ಕು ದಿನದಲ್ಲಿ ಕ್ರಮಕ್ಕೆ ಆಗ್ರಹ; ಲೋಕಾಯುಕ್ತಕ್ಕೆ ದೂರು ಎಚ್ಚರಿಕೆ

ದಾವಣಗೆರೆ: ಏಷ್ಯಾಖಂಡದ ಎರಡನೇ ಅತೀ ದೊಡ್ಡ ಕೆರೆಯಾದ ಸೂಳೆಕೆರೆಯಲ್ಲಿ ಅಕ್ರಮ ಮತ್ತು ಕಾನೂನು ಬಾಹಿರವಾಗಿ ನಡೆದಿರುವ ಸ್ಫೋಟ ನಡೆದಿದ್ದು  ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಬೇಕೆಂದು ಖಡ್ಗ ಸಂಘದ ಉಪಾಧ್ಯಕ್ಷ ಬಸವರಾಜ್ ಬೆಳ್ಳೂಡಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಕ್ರಮ ಸ್ಪೋಟಕ್ಕೆ ಸಂಬಂಧಿಸಿದಂತೆ ನಾಲ್ಕು ದಿನಗಳೊಳಗಾಗಿ ಕ್ರಮ ಕೈಗೊಳ್ಳದಿದ್ದರೆ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದರು. ಎರಡನೇ ಅತೀ ದೊಡ್ಡ ಕೆರೆಯಾದ ಸೂಳೆಕೆರೆಯ ಶ್ರೀ ಸಿದ್ದೇಶ್ವರ ದೇವಾಲಯದಿಂದ ರಸ್ತೆಯನ್ನು ಅಭಿವೃದ್ಧಿಗೊಳಿಸುವ ಭರದಲ್ಲಿ ಸುಮಾರು 5 ರಿಂದ 6 ದಿನಗಳವರೆಗೆ ಸರಣಿ ಸ್ಫೋಟಗಳನ್ನು ಪಿ ಡ್ಬ್ಲೂಡಿ ಇಲಾಖೆಯ ಅಡಿಯಲ್ಲಿ ಕಾನೂನು ಬಾಹಿರವಾಗಿ ನಡೆಸಲಾಗಿದೆ.

ದಾವಣಗೆರೆಯ ಜಿಲ್ಲಾಧಿಕಾರಿಗಳು ನೀಡಿರುವ ಎನ್.ಓ.ಸಿ. ಯಲ್ಲಿ ನೀಡಿರುವ ಸೂಚನೆಯಂತೆ ಶ್ರೀ ಸಿದ್ದೇಶ್ವರ ದೇವಾಲಯದಿಂದ ಐ ಬಿ ಯ ವರಗೆ ನಿಯಂತ್ರಿತ ಸ್ಫೋಟವನ್ನು ಮಾಡಲು ಮಾತ್ರ ಸೂಚಿಸಿರುತ್ತಾರೆ, ಆದರೆ ಜಿಲ್ಲಾಧಿಕಾರಿಗಳ ಆದೇಶವನ್ನು ದಿಕ್ಕರಿಸಿ ನಿಯಂತ್ರಿತ ಸ್ಫೋಟವನ್ನು ನಡೆಸದೇ , ಸಂಬಂದಪಟ್ಟ ಇಲಾಖೆಯಿಂದ ಅನುಮತಿಯನ್ನು ಪಡೆಯದೆ ಈ ನೆಲದ ಕಾನೂನು ಕಟ್ಟಲೆಗಳನ್ನು ಮುರಿದು ಆಪಾಯಕಾರಿ ಸ್ಫೋಟವನ್ನು ಜೂನ್ ತಿಂಗಳ ಮೊದಲನೇ ಮತ್ತು ಎರಡನೇ ವಾರದಲ್ಲಿ ನಡೆಸುವುದರ ಮೂಲಕ ಸೂಳೆಕೆರೆಯ ನೈಸರ್ಗಿಕತೆಗೆ ಭಂಗವನ್ನು ತರಲಾಗಿದೆ. ಕಾರಣ ಈ ಕಾಮಗಾರಿಯ ನೇತೃತ್ವ ವಹಿಸಿರುವ ಇಲಾಖೆಯ ವಿರುದ್ಧ ಶೀಘ್ರವಾಗಿ ಕಠಿಣ ಕ್ರಮ ಕೈಗೊಳಬೇಕು.

ಸೂಳೆಕೆರೆಯೂ ಒಂದು ಸೂಕ್ಷ್ಮವಾದ ಐತಿಹಾಸಿಕ ಸ್ಥಳವಾಗಿದ್ದು ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ಕುಡಿಯುವ ನೀರಿಗೆ ಜೀವ ಸೆಲೆಯಾಗಿರುತ್ತದೆ . ಇಂಥಹ ಸ್ಥಳದಲ್ಲಿ ಸ್ಫೋಟ ನಡೆದ ಜಾಗದ ಪಕ್ಕದಲ್ಲಿ ಬಸವನ ಕಾಲ ಮತ್ತು ವಿಖ್ಯಾತ ಸುಮಾರು ವರ್ಷಗಳ ಇತಿಹಾಸವಿರುವ ಶ್ರೀ ಸಿದ್ದೇಶ್ವರ ದೇವಾಲಯವಿದೆ ಇಂಥಹ ಪಾರಂಪರಿಕ ಮತ್ತು ಐತಿಹಾಸಿಕ ಸ್ಥಳದಲ್ಲಿ ಕಾನೂನಿನ ಸ್ಫೋಟಕ ನಿಯಮಗಳನ್ನು ಪಾಲಿಸದೆ ಉಗ್ರರ ರೀತಿಯಲ್ಲಿ ಸ್ಫೋಟವನ್ನು ನಡೆಸಿದ್ದಾರೆ . ಈ ಅವೈಜ್ಞಾನಿಕ ಮತ್ತು ಕಾನೂನು ಬಾಹಿರ ಸ್ಫೋಟವು ಸಿದ್ದನ ನಾಲ ಮತ್ತು ಶ್ರೀ ಸಿದ್ದೇಶ್ವರ ದೇವಾಲಯದ ದಕ್ಕೆಗೆ ಮುಂದಿನ ದಿನಗಳಲ್ಲಿ ಕಾರಣವಗಬಹುದು.

ಸ್ಫೋಟ ನಡೆದ ಸ್ಥಳವು ಸೂಳೆಕೆರೆಯ ಸರ್ವೇ ನಂ 1 ರಲ್ಲಿ ಬರುವುದಾಗಿ ಸಂಬಂಧಪಟ್ಟ ಇಲಾಖೆಯವರು ತಿಳಿಸಿರುತ್ತಾರೆ . ಸ್ಫೋಟವನ್ನು ಹಾಡು ಹಗಲೇ ಸಾರ್ವಜನಿಕರು ಓಡಾಡುವ ಸಮಯದಲ್ಲಿ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದೆ , ಸಾರ್ವಜನಿಕರಿಗೆ ಅರಿವಿಗೆ ಬಾರದಂತೆ ಜಾಗೃತಿ ಮೂಡಿಸಿಲ್ಲ. ಸ್ಫೋಟ ನಡೆದ ಸ್ಥಳ ಅರಣ್ಯ ಇಲಾಖೆಯ ಅಧೀನಕ್ಕೆ ಬರುವುದರಿಂದ ಅರಣ್ಯ ಇಲಾಖೆಯ ಅನುಮತಿಯನ್ನು ಪಡೆದಿರುವುದಿಲ್ಲ . ಸ್ಫೋಟ ನಡೆಸಲು ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಇಲಾಖೆ , ಗಣಿ ಮತ್ತು ಭೂ ವಿಜ್ಞಾನ ಇಲಾಶ , ಪುರಾತತ್ವ ಇಲಾಖೆಗಳಿಂದ , ಯಾವುದೇ ಅನುಮತಿಯನ್ನು ಪಡದಿರುವುದಿಲ್ಲ.

ಸ್ಫೋಟವು ಸಾರ್ವಜನಿಕರು ಓಡಾಡುವ ರಸ್ತೆಯ ಬದಿಯಲ್ಲಿ ಮತ್ತು ಸೂಳೆಕೆರೆಯ ದಂಡೆಯ ಮೇಲೆಯೇ ಮಾಡಿರುವುದರಿಂದ ಇದು ಭಾರತೀಯ ಸ್ಕೂಟ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ . ಸೂಳೆಕೆರೆಯ ಗುಡ್ಡಗಳಿಗೆ ಯಾವುದೇ ಧಕ್ಕೆಯಾಗದಂತೆ ಗುಡ್ಡಗಳಿಗೆ ರಕ್ಷಣಾ ಗೋಡಗಳ ವ್ಯವಸ್ಥೆಯನ್ನು ಮಾಡಬೇಕು.  ಈ ಸ್ಫೋಟಕ್ಕೆ ಕಾರಣರಾದ ಇಲಾಖೆಯ ಅಧಿಕಾರಿಗಳನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕೆಂದರು.ಸುದ್ದಿಗೋಷ್ಠಿಯಲ್ಲಿ ಚಂದ್ರಹಾಸ್ ಲಿಂಗದಳ್ಳಿ ಸೈಯದ್ ನಯಾಜ್,ನಾಗರಾಜ್ ಬೆಳ್ಳೂಡಿ ಇದ್ದರು.

Leave a Reply

Your email address will not be published. Required fields are marked *

error: Content is protected !!