ದಾವಣಗೆರೆ ಜನರಿಗೆ ಕುಡಿಯುವ ನೀರು ಪೂರೈಕೆ, ಟಿವಿ ಸ್ಟೇಷನ್ ಕೆರೆಗೆ ಕಾಲುವೆ ನೀರು, ಪರಿಶೀಲಿಸಿದ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ
ದಾವಣಗೆರೆ: ದಾವಣಗೆರೆ ನಗರಕ್ಕೆ ಕುಡಿಯುವ ನೀರು ಒದಗಿಸಲು ಟಿವಿ ಸ್ಟೇಷನ್ ಕೆರೆಯನ್ನು ಭರ್ತಿ ಮಾಡಿ ನೀರು ಪೂರೈಕೆ ಮಾಡಲಾಗುತ್ತಿದೆ. ಈ ಕೆರೆಯಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿ 4 ಅಡಿಗೆ ಕುಸಿದಿದ್ದು ಮುಂದಿನ 15 ದಿನಗಳಿಗಾಗುವಷ್ಟು ನೀರಿನ ಸಂಗ್ರಹವಿರುತ್ತದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೀರು ಸಂಗ್ರಹ ಮಾಡಿ ಬೇಸಿಗೆಯಲ್ಲಿ ತೊಂದರೆಯಾಗದಂತೆ ಭದ್ರಾ ಕಾಲುವೆ ಮೂಲಕ ನೀರು ತುಂಬಿಸಲಾಗುತ್ತಿದೆ. ನೀರಿನ ಪ್ರಮಾಣ ಎಷ್ಟು ಬರುತ್ತಿದೆ, ಮುಂದಿನ ಎಷ್ಟು ದಿನಗಳು ನೀರು ಪೂರೈಕೆ ಮಾಡಬಹುದೆಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಅವರು ಮಾರ್ಚ್ 27 ರಂದು ಪಾಲಿಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೆರೆಯಲ್ಲಿ ನೀರು 9 ಮೀಟರ್ ಇರಬೇಕಾಗಿದ್ದು ಪ್ರಸ್ತುತ 4 ಅಡಿ ಇರುತ್ತದೆ. ಕೆರೆಗೆ ಮುಂದಿನ ದಿನಗಳಿಗಾಗುವಷ್ಟು ನೀರು ಸಂಗ್ರಹ ಮಾಡಲು ಸೂಚನೆ ನೀಡಿದ ಅವರು ಜನರು ಸಹ ಬೇಸಿಗೆ ಕಳೆಯುವ ವರೆಗೆ ನೀರಿನ ಮಿತ ಬಳಕೆ ಮಾಡಬೇಕೆಂದು ಮನವಿ ಮಾಡಿದ್ದಾರೆ.
ಪಾಲಿಕೆ ಆಯುಕ್ತರಾದ ರೇಣುಕಾ, ಡಿಯುಡಿಸಿ ಯೋಜನಾ ನಿರ್ದೇಶಕ ಮಹಾಂತೇಶ್ ಉಪಸ್ಥಿತರಿದ್ದರು.