ಐದು ಗ್ಯಾರಂಟಿಗಳ ಖಚಿತ ಅನುಷ್ಠಾನ, ಅಭಿವೃದ್ದಿ ಕೆಲಸಗಳು ಕುಂಠಿತವಾಗಲ್ಲ, ಆತಂಕಬೇಡ; ಸಚಿವ ಎಸ್.ಎಸ್.ಮಲ್ಲಿಕಾರ್ಜುನ್

ದಾವಣಗೆರೆ;  ಚುನಾವಣೆಯಲ್ಲಿ ನೀಡಲಾದ ಪ್ರಣಾಲಿಕೆಯಂತೆ ಐದು ಗ್ಯಾರಂಟಿಗಳಲ್ಲಿ 3 ಅನುಷ್ಠಾನ ಮಾಡಿದ್ದು ಆಗಸ್ಟ್ 15 ರಂದು ಗೃಹಲಕ್ಷ್ಮಿಗೆ ಚಾಲನೆ ನೀಡಲಿದೆ. ಇದರೊಂದಿಗೆ ಅಭಿವೃದ್ದಿ ಕೆಲಸಗಳು ನಡೆಯಲಿವೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಮಾತನಾಡಿದರು.

ಅವರು ಆಗಸ್ಟ್ 6 ನಗರದ ಹದಡಿ ರಸ್ತೆಯಲ್ಲಿನ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಬೆಸ್ಕಾಂನಿಂದ ಏರ್ಪಡಿಸಲಾದ ಗೃಹಜ್ಯೋತಿ ಯೋಜನೆಗೆ ಬೆಸ್ಕಾಂ ಗ್ರಾಹಕರಿಗೆ ಶೂನ್ಯ ಬಿಲ್ ನೀಡುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಚುನಾವಣಾ ಸಂದರ್ಭದಲ್ಲಿ ಜನರಿಗೆ ನೀಡಲಾದ ಪ್ರಣಾಲಿಕೆಯಲ್ಲಿ ಪ್ರತಿಯೊಬ್ಬರಿಗೂ 200 ಯುನಿಟ್ ಉಚಿತ ವಿದ್ಯುತ್ ನೀಡಲಾಗುತ್ತದೆ ಎಂದು ಗ್ಯಾರಂಟಿ ಘೋಷಣೆ ಮಾಡಲಾಗಿತ್ತು. ಈ ಗ್ಯಾರಂಟಿಯನ್ನು ಅನುಷ್ಠಾನ ಮಾಡುವುದರ ಜೊತೆಗೆ ಸರ್ಕಾರ ಅಭಿವೃದ್ದಿ ಕೆಲಸಗಳನ್ನು ಕುಂಠಿತವಾಗದಂತೆ ನೋಡಿಕೊಳ್ಳಲಿದ್ದು ಇದರಲ್ಲಿ ಯಾವುದೇ ಆತಂಕ ಬೇಡ ಎಂದರು.
ಜಿಲ್ಲೆಯಲ್ಲಿ 494304 ವಿದ್ಯುತ್ ಗ್ರಾಹಕರಿದ್ದು ಜುಲೈ 27 ರ ವರೆಗೆ 348260 ಅಂದರೆ ಶೇ 70.45 ರಷ್ಟು ಜನರು ಗೃಹಜ್ಯೋತಿ ಯೋಜನೆಗೆ ನೊಂದಾಯಿಸಿದ್ದಾರೆ. ಈ ಫಲಾನುಭವಿಗಳು ಆಗಸ್ಟ್ 1 ರಿಂದ ಯೋಜನೆ ಲಾಭ ಪಡೆಯಲಿದ್ದು 200 ಯುನಿಟ್ ವರೆಗೆ ಶೂನ್ಯ ಬಿಲ್‍ನ್ನು ಪಡೆಯಲಿದ್ದಾರೆ. ಇದರಲ್ಲಿ ಭಾಗ್ಯಜ್ಯೋತಿ, ಅಮೃತ ಜ್ಯೋತಿ ಹಾಗೂ ಕುಟೀರ ಜ್ಯೋತಿ ಫಲಾನುಭವಿಗಳು ಇದ್ದಾರೆ ಎಂದರು.

ಹಿಂದಿನ ಎಲ್ಲಾ ಸರ್ಕಾರಗಳು ಕಲ್ಯಾಣ ಕಾರ್ಯಕ್ರಮಗಳ ಜೊತೆಗೆ ಯೋಜನೆಗಳನ್ನು ರೂಪಿಸಿದ್ದರಿಂದ ದೇಶದ ಆರ್ಥಿಕತೆ ಉತ್ತಮವಾಗಿದೆ. ಎಲ್ಲಾ ಅರ್ಹರು ಸರ್ಕಾರದ ಸೌಲಭ್ಯ ಪಡೆಯುವುದು ಅವರ ಮೂಲಭೂತ ಹಕ್ಕಾಗಿದೆ. ಮತ್ತು ಸರ್ಕಾರ ಜನರಿಗೆ ಮೂಲಭೂತ ಸೌಕರ್ಯಗಳ ಜೊತೆಗೆ ಆರೋಗ್ಯ, ಶಿಕ್ಷಣ ಕೊಡುವ ವ್ಯವಸ್ಥೆ ಮಾಡಬೇಕು ಎಂದರು. ಹೊಸದಾಗಿ ಮಾಡಿರುವ ಗ್ಯಾರಂಟಿ ಯೋಜನೆಗಳಾದ ಶಕ್ತಿ ಕೆ.ಎಸ್.ಆರ್.ಟಿ.ಸಿ.ಯಲ್ಲಿ ಮಹಿಳೆಯರು ಉಚಿತ ಪ್ರಯಾಣದಿಂದ ಅನುಕೂಲವಾಗಿದೆ. ಮತ್ತು ಉಚಿತ ವಿದ್ಯುತ್ ಬಿಲ್‍ನಿಂದ ಅವರ ಆರ್ಥಿಕಾಭಿವೃದ್ದಿಯಾಗುತ್ತದೆ. ಬಡವರು, ಹಿಂದುಳಿದವರಿಗೆ ಯೋಜನೆಗಳನ್ನು ನೀಡುವ ಮೂಲಕ ಅವರ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದಾಗಿದ್ದು ಇದರಿಂದ ಅವರ ಕುಟುಂಬದ ನಿರ್ವಹಣೆ ಸುಲಭವಾಗುತ್ತದೆ. ಈ ಹಿಂದಿನಿಂದಲೂ ಗರೀಭಿ ಹಠಾವೂ ಘೋಷವಾಕ್ಯದಂತೆ ಬಡತನ ನಿರ್ಮೂಲನೆಗಾಗಿ ಅನೇಕ ಯೋಜನೆಗಳನ್ನು ಅನುಷ್ಠಾನ ಮಾಡುತ್ತಾ ಬರಲಾಗಿದೆ ಎಂದರು.

ಎಲ್ಲರ ಕೈಯಲ್ಲಿ ಜಣ ಜಣ; ಜನರ ಕೈಲಿ ಹಣ ಸಿಗಬೇಕು, ಇದರಿಂದ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗಲಿದೆ. ಅನೇಕ ಯೋಜನೆಗಳ ಸೌಲಭ್ಯದ ಹಣವನ್ನು ನೇರವಾಗಿ ಜನರ ಖಾತೆಗೆ ಜಮಾ ಮಾಡಲಾಗುತ್ತಿದೆ. ಬಿಪಿಎಲ್ ಕುಟುಂಬದ ಪ್ರತಿಯೊಬ್ಬರಿಗೂ ತಲಾ 10 ಕೆಜಿ ಅಕ್ಕಿ ನೀಡಲಾಗುತ್ತದೆ. ಇದರಲ್ಲಿ ಐದು ಕೆಜಿ ಅಕ್ಕಿ ಮತ್ತು ಉಳಿದ 5 ಕೆಜಿಗೆ  ಹಣವನ್ನು ಅವರ ಖಾತೆಗೆ ವರ್ಗಾಯಿಸಲಾಗುತ್ತದೆ. ಮತ್ತು ಇದೇ ಆಗಸ್ಟ್ 15 ರಂದು ಗೃಹಲಕ್ಷ್ಮಿಗೆ ಚಾಲನೆ ನೀಡಲಿದ್ದು ಈ ಎರಡು ಸಾವಿರ ರೂ.ಗಳು ಸಹ ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ. ಮತ್ತು ಪದವೀಧರರು ಮತ್ತು ಡಿಪ್ಲೊಮೊ ಪಾಸ್ ಆದವರಿಗೆ ಯುವ ನಿಧಿಯಿಂದ ತಲಾ ಮೂರು ಸಾವಿರ ಮತ್ತು ಒಂದೂವರೆ ಸಾವಿರ ರೂ.ಗಳನ್ನು ಸಹ ಅವರ ಖಾತೆಗೆ ಜಮಾ ಮಾಡಲಾಗುತ್ತದೆ. ಇದರಿಂದ ಎಲ್ಲರ ಆರ್ಥಿಕಾಭಿವೃದ್ದಿಯಾಗಲಿದ್ದು ಮುಖ್ಯಮಂತ್ರಿಗಳು ಆರ್ಥಿಕತೆಯಲ್ಲಿ ಅನುಭವಿಯಾಗಿ ಯಾವುದೇ ಆರ್ಥಿಕತೆಗೆ ಹಿನ್ನಡೆಯಾಗದಂತೆ ಯೋಜನೆ ರೂಪಿಸಲಿದ್ದಾರೆ ಎಂದರು.

ಹರಪನಹಳ್ಳಿ ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ್ ಮಾತನಾಡಿ ಬಡವರಿಗೆ ಏನು ಮಾಡುತ್ತೇವೆ ಎನ್ನುವುದು ಮುಖ್ಯ, ಗ್ಯಾರಂಟಿಗಳಿಂದ ಜನರಿಗೆ ಸಾಕಷ್ಟು ಅನುಕೂಲವಾಗಲಿದ್ದು ಸಂಪನ್ಮೂಲ ಹೊಂದಾಣಿಕೆಯಲ್ಲಿ ಸ್ವಲ್ಪ ಕಷ್ಟವಾಗುತ್ತದೆ. ಆದರೂ ಜನರಿಗೆ ಲಾಭವಿದೆ. ಈಗ ಗೃಹಜ್ಯೋತಿ, ಆ.15 ಕ್ಕೆ ಗೃಹಲಕ್ಷ್ಮಿ ಬರುತ್ತಾಳೆ ಎಂದರು.  ಹರಿಹರ ಶಾಸಕರಾದ ಬಿ.ಪಿ.ಹರೀಶ್ ಮಾತನಾಡಿ ಸವಾಲಿನ ಗ್ಯಾರಂಟಿಗಳನ್ನು ಈಡೇರಿಸುವ ಜೊತೆಗೆ ರಾಜ್ಯ ಮತ್ತು ಗ್ರಾಮೀಣ ಭಾಗದ ರಸ್ತೆ, ಕುಡಿಯುವ ನೀರಿನ ಪೂರೈಕೆಗೂ ಆದ್ಯತೆ ಇರಲಿ. ಶಕ್ತಿ ಯೋಜನೆಯಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ ಶಾಲಾ, ಕಾಲೇಜಿನ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು ಹೆಚ್ಚುವರಿ ಬಸ್ ವ್ಯವಸ್ಥೆಗೆ ಮನವಿ ಮಾಡಿದರು.

ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಮಹಂತೇಶ್ ಬೀಳಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಾಲಿಕೆ ಮೇಯರ್ ವಿನಾಯಕ ಬಿ.ಹೆಚ್, ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್, ಹೆಚ್ಚುವರಿ ರಕ್ಷಣಾಧಿಕಾರಿ ರಾಮಗೊಂಡ ಬಸರಗಿ ಉಪಸ್ಥಿತರಿದ್ದರು. ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ಜಗದೀಶ್ ಸ್ವಾಗತಿಸಿದರು.

Leave a Reply

Your email address will not be published. Required fields are marked *

error: Content is protected !!