ಶಿಕ್ಷಕ ವೃತ್ತಿ ಗೌರವಯುತ ಹಾಗೂ ಅತ್ಯಂತ ಪವಿತ್ರವಾದದ್ದು – ಶಿಕ್ಷಣ ಚಿಂತಕ ನಿಜಲಿಂಗಪ್ಪ ಬಸೇಗಣ್ಣಿ
ಹಾವೇರಿ: ಶಿಕ್ಷಕ ವೃತ್ತಿ ಗೌರವಯುತ ಹಾಗೂ ಅತ್ಯಂತ ಪವಿತ್ರವಾದದ್ದು. ಶಿಕ್ಷಕರ ಆಸ್ತಿ ಎಂದರೆ
ಮಕ್ಕಳು. ಶಿಕ್ಷಕರು ಮಕ್ಕಳಿಗೆ, ಸಮಾಜಕ್ಕೆ ಮಾದರಿಯಾಗಿರಬೇಕು ಹಾಗೂ
ಅನುಕರಣೀಯರಾಗಿರಬೇಕು ಎಂದು ಶಿಕ್ಷಣ ಚಿಂತಕ ನಿಜಲಿಂಗಪ್ಪ ಬಸೇಗಣ್ಣಿ ಹೇಳಿದರು.
ತಾಲೂಕಿನ ಅಗಡಿ ಗ್ರಾಮದ ಶ್ರೀ ಶೇಷಾಚಲ ಸದ್ಗುರು ಪ್ರೌಢ ಶಾಲೆಯಲ್ಲಿಂದು ಸ್ಪೂರ್ತಿ
ವಿದ್ಯಾ ಕುಟೀರ ಏರ್ಪಡಿಸಿದ್ದ ಶಿಕ್ಷಣ ಸಿರಿ ರಾಜ್ಯ ಪ್ರಶಸ್ತಿ ಪುರಸ್ಕೃತೆ, ಗುರಮಾತೆ ಹೇಮಾ
ದೊಡ್ಡಮನಿ ಅವರ ಗೌರವ ಗುರುವಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು
ಮಾತನಾಡಿದರು.
ಚನ್ನಮ್ಮ ಪಾಟೀಲ ಹಾಗೂ ಅನ್ನಪೂರ್ಣ ನಿಜಲಿಂಗಪ್ಪ ಬಸೇಗಣ್ಣಿ ಗುರುಮಾತೆ ಹೇಮಾ
ಅವರಿಗೆ ಉಡಿ ತುಂಬಿ, ಶಾಲು ಹೊದಿಸಿ ಗೌರವಿಸಿದರು. ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ
ಭಾವುಕರಾಗಿ ಹೇಮಾ ಮಾತನಾಡಿದರು.
ಡಾ.ಆರ್.ವಿ. ಹೆಗಡಾಳ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು ವ್ಯಕ್ತಿಗಿಂತ ವ್ಯಕ್ತಿತ್ವ ದೊಡ್ಡದು.
ಪ್ರಶಸ್ತಿಗಳು ಜವಾಬ್ದಾರಿಯನ್ನು ಹೆಚ್ಚಿಸುತ್ತವೆ ಎಂದು ಹೇಳಿ ಕುಟೀರದ ರಚನಾತ್ಮಕ
ಚಟುವಟಿಕೆಗಳನ್ನು ಶ್ಲಾಘಿಸಿದರು.
ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ ಶಿಕ್ಷಕರು ಮಕ್ಕಳಲ್ಲಿ ದೇವರನ್ನು
ಕಾಣಬೇಕು. ಅವರಲ್ಲಿ ಪುಸ್ತಕ ಜ್ಞಾನದ ಜೊತೆಗೆ ವ್ಯವಹಾರ ಜ್ಞಾನ ಬೆಳೆಸುವ ಪೂರಕ
ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಬೇಕು ಎಂದರು.
ತಾಯಿ ಚನ್ನಮ್ಮ ಪಾಟೀಲ ಮಾತನಾಡಿ ಮಕ್ಕಳಿಗೆ ಮನೆ ಮೊದಲ ಪಾಠಶಾಲೆ. ಮಕ್ಕಳು
ಶಾಲೆಗೆ ಹಾಗೂ ಗ್ರಾಮಕ್ಕೆ ಕೀರ್ತಿ ತರುವಂತವರಾಗಬೇಕು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ತಾಲೂಕ ಇಂಗ್ಲೀಷ ಶಿಕ್ಷಕರ ಸಂಘಕ್ಕೆ ನೂತನವಾಗಿ ಅಧ್ಯಕ್ಷರಾಗಿ
ಆಯ್ಕೆಯಾದ ರವಿರಾಜ ಇಟಗಿ ಗುರುಗಳನ್ನು ವಿದ್ಯಾರ್ಥಿಗಳು ಗೌರವಿಸಿದರು.
ಮುಖ್ಯಾಧ್ಯಾಪಕ ರಾಘವೇಂದ್ರ ನಾಡಗೇರ, ಮಲ್ಲಪ್ಪ ಮಣ್ಣೂರ, ಶಿಲ್ಪಾ ಸಂಕಮ್ಮನವರ,
ಮಂಜುನಾಥ ಸೊಪ್ಪಿನ, ಅಕ್ಷತಾ ಕುದರಿ ಉಪಸ್ಥಿತರಿದ್ದರು.
ಜ್ಯೋತಿ, ಕೃತಿಕಾ, ಲಕ್ಷ್ಮೀ ಪ್ರಾರ್ಥನೆ ಗೀತೆ ಹಾಡಿದರು. ಗುರುಮಾತೆ ರೇಣುಕಾ ಹಲಕಣ್ಣನವರ ಸ್ವಾಗತಿಸಿದರು. ಗುರುಮಾತೆ ಸೌಮ್ಯ ಬಸೇಗಣ್ಣಿ ಕಾರ್ಯಕ್ರಮ ನಿರೂಪಿಸಿದರು.