ವಯೋಭೇದ ಮಾಡದೆ ದೇವದಾಸಿಯರಿಗೆ ಮಾಸಿಕ ಐದು ಸಾವಿರ ಹೆಚ್ಚಳಕ್ಕೆ ಸಮ್ಮೇಳನದಲ್ಲಿ ಆಗ್ರಹ

ವಯೋಭೇದ ಮಾಡದೆ ದೇವದಾಸಿಯರಿಗೆ ಮಾಸಿಕ ಐದು ಸಾವಿರ ಹೆಚ್ಚಳಕ್ಕೆ ಸಮ್ಮೇಳನದಲ್ಲಿ ಆಗ್ರಹ

ದಾವಣಗೆರೆ: ವಯೋ ಭೇದ ಮಾಡದೇ ಎಲ್ಲ ದೇವದಾಸಿ ಮಹಿಳೆಯರ ಮಾಸಿಕ ಸಹಾಯಧನ ಅಥವಾ ಪೆನ್ಷನ್ 5,000 ರೂ ಗಳ ಹೆಚ್ಚಳಕ್ಕೆ ರಾಜ್ಯ ಸರಕಾರ ಈ ಕೂಡಲೇ ಕ್ರಮವಹಿಸ ಬೇಕೆಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ 4 ನೇ ರಾಜ್ಯ ಸಮ್ಮೇಳನವು ಅಗ್ರಹಿಸುತ್ತದೆ.

ಕಳೆದ 5- 6ವರ್ಷಗಳಿಂದ ದೇವದಾಸಿ ಮಹಿಳೆಯರು ಹಲವು ಹಂತದ ಚಳುವಳಿಯನ್ನು ನಡೆಸುತ್ತಿದ್ದರೂ, ಮಂತ್ರಿಗಳು ಹಾಗೂ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದರೂ, ರಾಜ್ಯ ಸರಕಾರ ಯಾವುದೇ ಕ್ರಮ ಗಳನ್ನು ಕೈಗೊಳ್ಳದಿರುವುದು ಉದಾಸೀನದಿಂದ ಮಹಿಳೆಯರು ದೌರ್ಜನ್ಯದ ದೇವದಾಸಿ ಪದ್ಧತಿಯಲ್ಲಿಯೇ ನಲುಗಲು ಬಿಟ್ಟಿರುವುದು ತೀವ್ರ ಖಂಡನೀಯವಾಗಿದೆ. ಮಠ ಹಾಗೂ ದೇವಸ್ಥಾನಗಳಿಗೆ ನೂರಾರು ಕೋಟಿ ನೀಡುವ ಈ ಸರಕಾರ, ದೇವದಾಸಿ ಮಹಿಳೆಯರ ಮಾಸಿಕ ಸಹಾಯಧನ ಹೆಚ್ಚಳವನ್ನು ನಿರಾಕರಿಸುತ್ತಿರುವುದು ಖೇದಕರವಾಗಿದೆ.

ಒಕ್ಕೂಟ ಹಾಗೂ ರಾಜ್ಯ ಸರಕಾರಗಳ ನಡೆಗಳು, ಈ ಅವಧಿಯಲ್ಲಿ, ವ್ಯಾಪಕವಾದ ಕರಭಾರ, ಬೆಲೆ ಏರಿಕೆ ಹಾಗೂ ಹಣದುಬ್ಬರಕ್ಕೆ ಕಾರಣವಾಗಿದ್ದು ದೇವದಾಸಿ ಮಹಿಳೆಯರು ಮತ್ತು ದುರ್ಬಲರಿಗೆ ನೀಡುವ ಮಾಸಿಕ ಸಹಾಯಧನಗಳು ಕಳೆದ ಐದು ವರ್ಷಗಳ ಹಿಂದೆ ಎಷ್ಟು ಆಹಾರ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದವೋ, ಈ ದಿನಗಳಲ್ಲಿ ಅದರ ಅರ್ಧದಷ್ಟನ್ನು ಖರೀದಿಸುತ್ತಿಲ್ಲ. ಆ ಮೂಲಕ ನಿಜ ಮೌಲ್ಯವನ್ನು ಅದು ಕಳೆದು ಕೊಂಡಿವೆ. ಇದರಿಂದಾಗಿ ದೇವದಾಸಿ ಮಹಿಳೆಯರ ಬದುಕು ಅತ್ಯಂತ ದುರ್ಬರವಾಗಿದೆ.

ಇದುವರೆಗೆ ನೀಡುತ್ತಿದ್ದ 10 ಕೇಜಿ ಪಡಿತರ ಕಡಿತ ಮಾಡಿ 5 ಕೇಜಿಗೆ ಇಳಿಸಲಾಗಿದೆ. ಜಾನುವಾರು ಹತ್ಯೆ ನಿಷೇಧ ಕಾಯ್ದೆಯು ದೇವದಾಸಿ ಮಹಿಳೆಯರ ಹೈನುಗಾರಿಕೆಯ ಮತ್ತು ಆಹಾರದ ಹಕ್ಕುಗಳನ್ನು ಮೊಟಕು ಮಾಡಿದೆಯಲ್ಲದೇ ಅಪೌಷ್ಠಿಕತೆಯಿಂದ ಬಳಲುವ ಈ ಕುಟುಂಬಗಳಿಗೆ ಪರಂಪರೆಯಿಂದ ಸಿಗುತ್ತಿದ್ದ ಆಹಾರವೂ ದೊರೆಯದಂತೆ ಮಾಡಲಾಗಿದೆ.

ಹೀಗಾಗಿ, ದಲಿತರ ಆಹಾರದ ಹಕ್ಕು ಹಾಗೂ ಉದ್ಯೋಗದ ಹಕ್ಕು ಉಳಿಸಿಕೊಡುವುದು ಮತ್ತು ಸಾಮಾಜಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಮಾಸಿಕ ಸಹಾಯಧನವನ್ನು ಹೆಚ್ಚಿಸುವುದು ದುರ್ಬಲರನ್ನು ರಕ್ಷಿಸುವ ಸರಕಾರ ಹೊಣೆಗಾರಿಕೆಯಾಗಿದೆಯೆಂದು ದಾವಣಗೆರೆಯಲ್ಲಿ ನಡೆಯುತ್ತಿರುವ ದೇವದಾಸಿ ಮಹಿಳೆಯರ 4 ನೇ ರಾಜ್ಯ ಸಮ್ಮೇಳನ ಒತ್ತಾಯಿಸುತ್ತದೆ.

ನಿರ್ಣಯ ಮಂಡನೆ ಮಾಡಿದವರು : ಶ್ರೀ ಬಾಳು ರಾಠೋಡ್ , ಅನುಮೋದನೆ ಮಾಡಿದವರು : ಶ್ರೀಮತಿ ಕೆ.ನಾಗರತ್ಙಮ್ಮ.

ಸಮ್ಮೇಳನವು ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿ,
ದೇವದಾಸಿ ಮಹಿಳೆಯರ ಸಹಾಯಧನ 5000 ರೂಗಳಿಗೆ ಹೆಚ್ಚಳ ಮಾಡಲೇಬೇಕು ! ಮಾಡಲೇ ಬೇಕು !! ಘೋಷಣೆಗಳನ್ನು ಕೂಗಲಾಯಿತು.

ರೇಣುಕಮ್ಮ, ಅಧ್ಯಕ್ಷರು.

ಬಿ.ಮಾಳಮ್ಮ , ಪ್ರಧಾನ ಕಾರ್ಯದರ್ಶಿ.

Leave a Reply

Your email address will not be published. Required fields are marked *

error: Content is protected !!