ಸಾಧಾರಣ ಹಿನ್ನೆಲೆಯವರಿಗೂ ಬಿಜೆಪಿಯಲ್ಲಿ ಪ್ರಮುಖ ಸ್ಥಾನ: ಡಾ. ಸಿಎನ್ ಅಶ್ವತ್ಥನಾರಾಯಣ

ಸಾಧಾರಣ ಹಿನ್ನೆಲೆಯವರಿಗೂ ಬಿಜೆಪಿಯಲ್ಲಿ ಪ್ರಮುಖ ಸ್ಥಾನ: ಡಾ. ಸಿಎನ್ ಅಶ್ವತ್ಥನಾರಾಯಣ

ದಾವಣಗೆರೆ: ಸಾಧಾರಣ ಕುಟುಂಬದಿಂದ ಬಂದವರಿಗೂ ಮಹತ್ವದ ಸ್ಥಾನಕ್ಕೆ ಏರಲು ಅವಕಾಶ ಕೊಡುವ ಪಕ್ಷ ಬಿಜೆಪಿ ಮಾತ್ರವಾಗಿದೆ ಎಂದು ಉನ್ನತ ಶಿಕ್ಷಣ ಮತ್ತು ಐಟಿಬಿಟಿ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ್ ಶನಿವಾರ ಹೇಳಿದರು.

ಬಿಜೆಪಿ ಯುವ ಮೋರ್ಚಾ ನಗರದಲ್ಲಿ ಏರ್ಪಡಿಸಿದ್ದ ಯುವ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿಯಲ್ಲಿ ಇಂದು ಮುಖ್ಯಸ್ಥಾನಗಳಲ್ಲಿ ಇರುವವರೆಲ್ಲಾ ಸಾಧಾರಣ ಹಿನ್ನೆಲೆಯಿಂದ ಬಂದವರೇ ಆಗಿದ್ದಾರೆ. ಆದರೆ, ಅಂಥವರಲ್ಲಿರುವ ಶಕ್ತಿ, ಸಾಮರ್ಥ್ಯ ಹಾಗೂ ಪ್ರತಿಭೆಯನ್ನು ಗುರುತಿಸಿ ನಾಯಕರನ್ನಾಗಿಸುವ ಕೆಲಸ ಬಿಜೆಪಿಯಲ್ಲಿ ನಡೆಯುತ್ತಿದೆ ಎಂದು ವಿವರಿಸಿದರು.

ನೂರು ನಲವತ್ತು ಕೋಟಿ ಜನಸಂಖ್ಯೆಯ ಭಾರತ ದೇಶದಲ್ಲಿ ಕೋವಿಡ್ ಸೋಂಕನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಲಾಯಿತು. ಇದನ್ನು ನೋಡಿ ಪ್ರಪಂಚದ ಅಭಿವೃದ್ಧಿ ಹೊಂದಿದ ದೇಶಗಳು ಕೂಡ ಅಚ್ಚರಿ ಪಟ್ಟವು. ಜೊತೆಗೆ, ಭಾರತದ ಅಭಿಪ್ರಾಯಕ್ಕೆ ಈಗ ಪ್ರಪಂಚದೆಲ್ಲೆಡೆ ಅಗ್ರ ಮನ್ನಣೆ ಇದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಿಂದಾಗಿ ಇದೆಲ್ಲಾ ಸಾಧ್ಯವಾಗಿದೆ ಎಂದು ನಾರಾಯಣ ವಿವರಿಸಿದರು.

ಹಿಂದೆ ಇದ್ದ ಪಕ್ಷಗಳು ಅಧಿಕಾರದಲ್ಲಿದ್ದಾಗ ಯುವಕ ಯುವತಿಯರ ಸಬಲೀಕರಣಕ್ಕೆ ಗಮನ ಕೊಡಲಿಲ್ಲ. ಆದರೆ ನಮ್ಮ ಪಕ್ಷವು ಗುಣಮಟ್ಟದ ಶಿಕ್ಷಣ ಹಾಗೂ ಕೌಶಲಗಳನ್ನು ಕೊಡುವ ಮೂಲಕ ಯುವ ಸಬಲೀಕರಣಕ್ಕೆ ಒತ್ತು ಕೊಟ್ಟಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ, ಐಟಿಐ, ಪಾಲಿಟೆಕ್ನಿಕ್ ಕಾಲೇಜುಗಳ ಉನ್ನತೀಕರಣ, ಮೂರು ವರ್ಷಗಳಲ್ಲಿ 25 ವಿಶ್ವವಿದ್ಯಾಲಯಗಳ ಸ್ಥಾಪನೆ ಇವೆಲ್ಲವೂ ಇದಕ್ಕೆ ಉದಾಹರಣೆಗಳಾಗಿವೆ ಎಂದರು.

ಅಧಿಕಾರ ಅನುಭವಿಸುವುದಕ್ಕಾಗಿ ಅಧಿಕಾರಕ್ಕೆ ಬರುವ ಅಗತ್ಯವಿಲ್ಲ. ಆದರೆ, ಇಂದು ನಾಡನ್ನು ಸದೃಢವಾಗಿ ಕಟ್ಟುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅದಕ್ಕೋಸ್ಕರ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರಾದಿಯಾಗಿ ನಾವೆಲ್ಲರೂ ಪರಿಶ್ರಮಿಸಬೇಕಾಗಿದೆ ಎಂದರು.

ಸಂಸದ ಸಿದ್ದೇಶ್ವರ, ದಾವಣಗೆರೆ ಜಿಲ್ಲಾ ಬಿಜೆಪಿ ಅಧ್ಯಕ್ಷ ವಿವೇಕ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶಿವಪ್ರಕಾಶ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ, ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಚಂದ್ರ ಕುಮಾರ್, ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!