ದಾವಣಗೆರೆ ಸೇರಿದಂತೆ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಹೊಸದಾಗಿ ವಿಮಾನ ನಿಲ್ದಾಣ – ಸಚಿವ ಮುರುಗೇಶ್ ನಿರಾಣಿ

ಬೆಂಗಳೂರು: ದಾವಣಗೆರೆ ಜಿಲ್ಲೆ ಸೇರಿದಂತೆ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಹೊಸದಾಗಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕಾ ಖಾತೆ ಸಚಿವ ಮುರುಗೇಶ್ ನಿರಾಣಿ ಪ್ರಕಟಿಸಿದ್ದಾರೆ.

ಸದ್ಯಕ್ಕೆ ರಾಜ್ಯದಲ್ಲಿ ಎಂಟು ವಿಮಾನ ನಿಲ್ದಾಣಗಳಿವೆ. ಈ ಹೊಸ ನಾಲ್ಕು ವಿಮಾನ ನಿಲ್ದಾಣಗಳ ನಿರ್ಮಾಣ ದೊಂದಿಗೆ ಪ್ರತಿ 100 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಒಂದು ವಿಮಾನ ನಿಲ್ದಾಣಗಳು ಲಭ್ಯವಾಗಲಿವೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಬಾಗಲಕೋಟೆ, ರಾಯಚೂರು, ದಾವಣಗೆರೆ ಮತ್ತು ಹಾಸನ ಜಿಲ್ಲೆಗಳಲ್ಲಿ ಹೊಸದಾಗಿ ವಿಮಾನ ನಿಲ್ದಾಣಗಳು ಆರಂಭವಾಗಲಿವೆ. ಈ ಉದ್ದೇಶಕ್ಕಾಗಿ ನಿವೇಶನಗಳನ್ನು ಪರಿಶೀಲಿಸಲಾಗಿದೆ. ಕನಿಷ್ಠ 500 ಎಕರೆ ಜಮೀನನ್ನು ಈ ಉದ್ದೇಶಕ್ಕೆ ಗುರುತಿಸಲಾಗಿದ್ದು, ರಾಜ್ಯ ಮುಂದಿನ ದಿನಗಳಲ್ಲಿ ವಿಮಾನ ಉತ್ಪಾದನಾ ಘಟಕವನ್ನು ಕೂಡಾ ಹೊಂದಲಿದೆ ಎಂದು ಹೇಳಿದರು.

ಈ ವರ್ಷದ ನವೆಂಬರ್ 2ರಿಂದ 4ರವರೆಗೆ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯಲಿದ್ದು, ಸುಮಾರು 10 ಲಕ್ಷ ಕೋಟಿ ರೂಪಾಯಿ ಹೂಡಿಕೆ ಹರಿದುಬರುವ ನಿರೀಕ್ಷೆ ಇದೆ ಎಂದರು. ಹಿಂದಿನ ಜಾಗತಿಕ ಹೂಡಿಕೆದಾರರ ಸಮಾವೇಶ ಯಶಸ್ವಿಯಾಗಿದ್ದು, ಹೊಸ ಸಮಾವೇಶದ ಮೂಲಕ ಕನಿಷ್ಠ 10 ಲಕ್ಷ ಮಂದಿ ನಿರುದ್ಯೋಗಿ ಯುವಕರಿಗೆ ಉದ್ಯೋಗ ದೊರಕಲಿದೆ ಎಂದು ಭರವಸೆ ನೀಡಿದರು.

 

Leave a Reply

Your email address will not be published. Required fields are marked *

error: Content is protected !!