ನ್ಯಾಮತಿ ಬಳಿ ಒಮ್ನಿಗೆ ಬಸ್ ಡಿಕ್ಕಿ ಮೂವರು ಸಾವು

ದಾವಣಗೆರೆ: ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಹೋಗುವ ದಾರಿಯಲ್ಲಿ ಕೆಎಸ್‌ಆರ್‌ಟಿಸಿ ವಾಯುವ್ಯ ಸಾರಿಗೆ ಬಸ್‌ ಹಾಗೂ ಒಮಿನಿ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಒಮಿನಿಗೆ ಡಿಕ್ಕಿಯಾದ ಬಸ್‌ ರಸ್ತೆ ಪಕ್ಕದ ತಡೆಗೋಡೆಗೆ ಗುದ್ದಿಕೊಂಡು ನಿಂತಿದೆ. ಘಟನೆಯಲ್ಲಿ ಒಮಿನಿಯಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಚಿನ್ನಿಕಟ್ಟೆ ಬಿದರಹಳ್ಳಿ ನಡುವಿನ ಮಾರ್ಗದ ನಡುವೆ ಈ ಘಟನೆ ನಡೆದಿದ್ದು ಒಮಿನಿಗೆ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆಯಿತು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಘಟನೆಯಲ್ಲಿ ಬಸ್‌ನಲ್ಲಿದ್ದವರಿಗೂ ಗಾಯವಾಗಿದ್ದು ಅವರನ್ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.

ಇನ್ನು ಒಮಿನಿಯಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದು ಸೂರಗೊಂಡನಕೊಪ್ಪದಿಂದ ಶಿಕಾರಿಪುರದ ಕಡೆಗೆ ತೆರಳುತ್ತಿದ್ದರು ಎನ್ನಲಾಗಿದೆ. ಮೃತರಲ್ಲಿ ಓರ್ವ ಹರಮಘಟ್ಟದವರು ಹಾಗೂ ಇನ್ನಿಬ್ಬರು ಸೂರಗೊಂಡನಕೊಪ್ಪದವರು ಎಂದು ತಿಳಿದುಬಂದಿದ್ದು, ಅವರ ಗುರುತು ಇನ್ನಷ್ಟೆ ಗೊತ್ತಾಗಬೇಕಿದೆ. ಒಮಿನಿಯಲ್ಲಿದ್ದ ಇನ್ನೊಬ್ಬರಿಗೂ ಗಂಭೀರವಾದ ಗಾಯವಾಗಿದ್ದು ಅವರನ್ನ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ರವಾನಿಸಲಾಗಿದೆ.

ಇನ್ನೂ ಬಸ್‌ ರಸ್ತೆಪಕ್ಕದ ತಡೆಗೋಡೆಗೆ ಗುದ್ದಿದ್ದು, ಬಸ್‌ನ ಮುಂದಿನ ಚಕ್ರ ಕಳಚಿದ್ದು, ಮುಂಭಾಗ ಜಖಂಗೊಂಡಿದೆ. ಘಟನೆಯಲ್ಲಿ ಒಮಿನಿ ವಾಹನ ಸಂಪೂರ್ಣ ಛಿದ್ರಗೊಂಡಿದ್ದು ಮೃತದೇಹಗಳು ಛಿದ್ರಗೊಂಡಿವೆ. ಸ್ಥಳದಲ್ಲಿ ಜನರ ಜಮಾಯಿಸಿದ್ದು ಪೊಲೀಸರು, ತುರ್ತು ವಾಹನ ಸಿಬ್ಬಂದಿ ಸ್ಥಳದಲ್ಲಿದ್ದಾರೆ.

ಮೃತರು ಹರಮಘಟ್ಟದ ನಜುಂಡಪ್ಪ, ರಾಕೇಶ್, ದೇವರಾಜ್ ಎಂದು ತಿಳಿದುಬಂದಿದ್ದು ನ್ಯಾಮತಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *

error: Content is protected !!