ವಕೀಲರ ರಕ್ಷಣಾ ಕಾಯ್ದೆಗೆ ಮೂವರು ಸಚಿವರ ವಿರೋಧ..? ಅಶ್ವತ್ಥ, ಅರಗ, ಮಾಧುಸ್ವಾಮಿ ವಿರುದ್ದ ಆಕ್ರೋಶ ಸ್ಫೋಟ..

ವಕೀಲರ ರಕ್ಷಣಾ ಕಾಯ್ದೆಗೆ ಮೂವರು ಸಚಿವರ ವಿರೋಧ
ಬೆಂಗಳೂರು: ವಕೀಲರ ರಕ್ಷಣಾ ಕಾಯ್ದೆಯನ್ನು ಮೂವರು ಮಂತ್ರಿಗಳು ವಿರೋಧಿಸಿದ್ದಾರೆ ಎಂದು ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್ ಆರೋಪಿಸಿದ್ದಾರೆ. ಈ ಕಾಯ್ದೆ ಜಾರಿ ಸಂಬಂಧ ಹೋರಾಟವನ್ನು ತೀವ್ರಗೊಳಿಸಲಾಗುವುದೆಂದು ಅವರು ತಿಳಿಸಿದ್ದಾರೆ.
ಈ ಸಂಬಂಧ ಮಾಧ್ಯಮ ಹೇಳಿಕೆ ನೀಡಿರುವ ಎ.ಪಿ.ರಂಗನಾಥ್, ಅನೇಕ ವರ್ಷಗಳಿಂದ ವಕೀಲರ ರಕ್ಷಣಾ ಕಾಯ್ದೆಯ ಜಾರಿಗಾಗಿ ಬೆಂಗಳೂರು ವಕೀಲರ ಸಂಘ ಸೇರಿದಂತೆ ರಾಜ್ಯದ ವಿವಿಧ ತಾಲೂಕು ಮತ್ತು ಜಿಲ್ಲಾ ವಕೀಲರ ಸಂಘ ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಹೋರಾಟ ಮಾಡುತ್ತಿದೆ. ರಾಜ್ಯದ ಹಿರಿಯ ವಕೀಲರ ಸಮಿತಿಯು ವಕೀಲರ ರಕ್ಷಣಾ ಕಾಯ್ದೆಯ ಕರಡನ್ನು ಎರಡು ವರ್ಷಗಳ ಹಿಂದೆ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಕಾಯ್ದೆಯನ್ನು ಜಾರಿಗೆ ತರುವ ಭರವಸೆಯನ್ನು ನೀಡಿದ ಮುಖ್ಯಮಂತ್ರಿಗಳು ಸದರಿ ಕಾಯ್ದೆಯನ್ನು ವಿಧಾನ ಮಂಡಲದಲ್ಲಿ ಮಂಡಿಸಲು ಮೀನಾ ಮೇಷ ಎಣಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಕರ್ನಾಟಕ ರಾಜ್ಯದ ವಕೀಲರ ಆಕ್ರೋಶವಿದೆ ಎಂದು ಹೇಳಿದ್ದಾರೆ..
2022 ನವೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ, ಬೆಂಗಳೂರಿನ ವಕೀಲರ ಸಂಘ ಮತ್ತು ರಾಜ್ಯದ ಎಲ್ಲಾ ವಕೀಲರು ವಕೀಲರ ರಕ್ಷಣಾ ಕಾಯ್ದೆ ಜಾರಿಗಾಗಿ ಆಗ್ರಹಿಸಿ ವಿಧಾನಸೌಧ ಚಲೊ ಹಮ್ಮಿಕೊಂಡಿದ್ದು ಆಗ ಪ್ರತಿಭಟನಾ ಸ್ಥಳಕ್ಕೆ ಗೃಹ ಸಚಿವರಾದ ಅರಗ ಜ್ಞಾನೇಂದ್ರರು ಮೌರ್ಯ ವೃತ್ತದಲ್ಲಿ ಭೇಟಿಯಾಗಿ ಕಾಯ್ದೆಯ ಜಾರಿಯ ಬಗ್ಗೆ ಭರವಸೆ ನೀಡಿದ್ದರು. ಮತ್ತೊಮ್ಮೆ ಬೆಂಗಳೂರು ವಕೀಲರ ಸಂಘ ಮತ್ತು ಕರ್ನಾಟಕ ರಾಜ್ಯದ ಎಲ್ಲಾ ತಾಲೂಕು ಜಿಲ್ಲಾ ವಕೀಲರ ಸಂಘಗಳು ಜಂಟಿಯಾಗಿ ಬೆಳಗಾವಿಯಲ್ಲಿ ವಿಧಾನಸಭೆಯ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ವಕೀಲರ ಕಾಯ್ದೆ ಜಾರಿಗಾಗಿ ಹಕ್ಕೊತಾಯ ಮಂಡಿಸಿ ಸುಮಾರು 14 ಕಿಲೋ ಮೀಟರ್ ಪಾದಯಾತ್ರೆಯ ಮೂಲಕ ಸಂಚರಿಸಿ ಸುವರ್ಣ ಸೌಧ ಮುತ್ತಿಗೆ ಹಾಕುವ ಹೋರಾಟ ನಡರಯಿತು. ಆಗ ಸ್ಥಳಕ್ಕೆ ಉನ್ನತ ಶಿಕ್ಷಣ ಸಚಿವರಾದ ಡಾ. ಅಶ್ವತ್ ನಾರಾಯಣ ಮತ್ತು ಗೋವಿಂದ ಕಾರಜೋಳರವರು ಧಾವಿಸಿ ಮನವಿಯನ್ನು ಸ್ವೀಕರಿಸಿದ್ದರು. ಕಂದಾಯ ಸಚಿವ ಆರ್ ಅಶೋಕರವರು ಮುಖ್ಯಮಂತ್ರಿಗಳ ಪರವಾಗಿ ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿ ಮಾಡುವುದಾಗಿ ಭರವಸೆ ನೀಡಿದ್ದರು. ಕಳೆದ ವಾರ ಮತ್ತೊಮ್ಮೆ ಬೆಂಗಳೂರು ವಕೀಲರ ಸಂಘ, ರಾಜ್ಯದ ಎಲ್ಲಾ ವಕೀಲರ ಸಂಘಗಳು ಈ ಬಜೆಟ್ ಅಧಿವೇಶನದಲ್ಲೇ ವಕೀಲರ ರಕ್ಷಣಾ ಕಾಯ್ದೆಯ ಜಾರಿಗಾಗಿ ಆಗ್ರಹಿಸಲು ವಿಧಾನಸೌಧ ಮುತ್ತಿಗೆಯನ್ನು ಹಮ್ಮಿಕೊಂಡಿದ್ದರು.
ಈ ನಡುವೆ, ‘ವಕೀಲರ ರಕ್ಷಣಾ ಕಾಯ್ದೆಯನ್ನು” ಜಾರಿಗೊಳಿಸುವ ವಿಚಾರವಾಗಿ ಕ್ಯಾಬಿನೆಟ್ ಸಭೆಯಲ್ಲಿ ಸಚಿವರಾದ ಡಾ. ಅಶ್ವತ ನಾರಾಯಣ, ಅರಗ ಜ್ಞಾನೇಂದ್ರ ಹಾಗೂ ಮಧುಸ್ವಾಮಿ ಅವರು ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿಗೆ ತರುವ ಕುರಿತಾಗಿ ಬಲವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಎ.ಪಿ.ರಂಗನಾಥ್ ಬೇಸರ ಹೊರಹಾಕಿದ್ದಾರೆ. ನಮ್ಮ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಮತ್ತು ಪೊಲೀಸರ ಶಕ್ತಿ ಹರಣವಾಗುವುದೆಂದು ಪೊಲೀಸ್ ಠಾಣೆಗಳಿಗೆ ವಕೀಲರು ನುಗ್ಗುತ್ತಾರೆ ಎಂದು ಗೃಹ ಮಂತ್ರಿ ಪ್ರತಿಪಾದಿಸಿದ್ದರೆ, ವಕೀಲರುಗಳಿಗೆ ನ್ಯಾಯಮೂರ್ತಿ ನ್ಯಾಯಾಧೀಶರ ಬೆಂಬಲವಿರುತ್ತದೆ. ಅವರಿಗೇಕೆ ಕಾಯ್ದೆ ಎಂದು ಅಶ್ವಥ್ ನರಾಯಣ್ ಅಭಿಪ್ರಾಯಪಟ್ಟಿದ್ದಾರೆ ಎಂದೂ, ಕಾನೂನು ಸಚಿವರು ಪೂರ್ವಗ್ರಹಪೀಡಿತರಾಗಿ ಕಾಯ್ದೆಯ ವಿರೋಧವಾಗಿ ಸುಧೀರ್ಘವಾಗಿ ವಿತ್ತಂಡವಾದ ಮಾಡಿದ್ದಾರೆಂದು ದೂರಿರುವ ಎ.ಪಿ.ರಂಗನಾಥ್, ಸಚಿವರ ಈ ನಿಲುವು ಅತ್ಯಂತ ದುರದೃಷ್ಟಕರ ಎಂದು ಹೇಳಿದ್ದಾರೆ.