ದುಷ್ಕರ್ಮಿಗಳಿಂದ ಅಡಿಕೆ ಗಿಡಗಳಿಗೆ ಕೊಡಲಿ, ಕುಟುಂಬದವರಿಗೆ ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ. ಸಾಂತ್ವನ

ದಾವಣಗೆರೆ; ದಾವಣಗೆರೆ ತಾಲ್ಲೂಕಿನ ಮುದಹದಡಿ ಗ್ರಾಮದ ನಾಗಮ್ಮ ಕೊಂ ನಾಗಪ್ಪನವರ 1 ಎಕರೆ ಜಮೀನಿನಲ್ಲಿ ಬೆಳೆದ ಸುಮಾರು 3 ವರ್ಷದ 800 ಗಿಡ ಅಡಿಕೆ ಗಿಡಗಳನ್ನು ದುಷ್ಕರ್ಮಿಗಳು ಕಡಿದು ಹಾಕಿದ್ದು ಭಾನುವಾರ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ. ಭೇಟಿ ನೀಡಿ ಪರಿಶೀಲನೆ ನಡೆಸಿ ಸಾಂತ್ವನ ಹೇಳಿದರು.
ಅಡಿಕೆ ಗಿಡಗಳನ್ನು ಕಡಿಯಲು ಕಾರಣವೇನು ಮತ್ತು ಇದರಿಂದ ಎಷ್ಟು ನಷ್ಟವಾಗಿದೆ ಎಂದು ವರದಿ ನೀಡಲು ಸ್ಥಳದಲ್ಲಿದ್ದ ತಹಶೀಲ್ದಾರ್ ಅಶ್ವಥ್ ಅವರಿಗೆ ಸೂಚನೆ ನೀಡಿ ವರದಿ ಬಂದ ನಂತರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ದಾವಣಗೆರೆ ತಾಲ್ಲೂಕು ಮುದಹದಡಿ ಗ್ರಾಮದ ದರಿಯಪ್ಪರ ಬೀರಪ್ಪ ಎಂಬ ರೈತನ ಒಂದೂವರೆ ಎಕರೆ ಜಮೀನಿನಲ್ಲಿ 3 ವರ್ಷದ ಸುಮಾರು 800 ಅಡಿಕೆ ಗಿಡಗಳನ್ನು ದುಷ್ಕರ್ಮಿಗಳು ಕಡಿದು ನಾಶ ಮಾಡಿದ್ದಾರೆ. ಈ ದುಷ್ಕೃತ್ಯ ನಿನ್ನೆ ಮಧ್ಯೆ ರಾತ್ರಿ ನಡೆದಿರಬಹುದೆಂದು ಅಂದಾಜಿಸಲಾಗಿದೆ. ಸಣ್ಣ ರೈತನಾಗಿರುವ ಬೀರಪ್ಪನಿಗೆ ಇದರಿಂದ ತೀವ್ರ ನಷ್ಟ ಉಂಟಾಗಿದೆ. ಊರಿನಲ್ಲಿ ಬೀರಪ್ಪ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದು, ಯಾರ ಮೇಲೂ ದ್ವೇಷ ಅಸೂಯೆ ಹೊಂದಿಲ್ಲ. ಹೀಗಾಗಿ ಈ ಪ್ರಕರಣ ಗ್ರಾಮಸ್ಥರಿಗೆ ಸೋಜಿಗವೆನ್ನಿಸಿದೆ.


ದುಷ್ಕೃತ್ಯ ನಡೆದ ಜಮೀನಿಗೆ ತಾಲ್ಲೂಕು ತಹಸೀಲ್ದಾರ್ ಡಾ ಅಶ್ವಥ್, ಕಂದಾಯ ನಿರೀಕ್ಷಕ ಬಸವರಾಜು, ತೋಟಗಾರಿಕೆ ಇಲಾಖೆ ಅಧಿಕಾರಿಗಳಾದ ಪವನ್ ಕುಮಾರ್ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು. ಹದಡಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಂಜೀವ್ ರವರು ಪ್ರಕರಣ ದಾಖಲಿಸಿಕೊಂಡಿದ್ದಾರೆ, ಅವರು ತಮ್ಮ ಸಿಬ್ಬಂದಿಯೊಂದಿಗೆ ಮತ್ತು ಶ್ವಾನದಳದೊಂದಿಗೆ ತನಿಖೆ ಕೈಗೊಂಡಿದ್ದಾರೆ.

ಪ್ರಕರಣವನ್ನು ಕಿಡಿಗೇಡಿಗಳ ದುಷ್ಕೃತ್ಯ ಎಂದು ಭಾವಿಸದೆ ಇದು ಒಂದು ಕಗ್ಗೊಲೆ ಎಂದು ಪರಿಗಣಿಸಿ, ದುಷ್ಕರ್ಮಿಗಳನ್ನು ಭೇದಿಸಿ ಶಿಕ್ಷಿಸಬೇಕು. ಇಂತಹ ದುಷ್ಕೃತ್ಯ ಮುಂದೆಂದೂ ನಡೆಯದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ನಷ್ಟ ಹೊಂದಿರುವ ರೈತನಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು
ರೈತ ಮುಖಂಡರಾದ ಕೊಳೇನಹಳ್ಳಿ ಬಿ ಎಂ ಸತೀಶ್, ಹದಡಿ ಜಿ ಸಿ ನಿಂಗಪ್ಪ, ಆರನೇಕಲ್ಲು ವಿಜಯಕುಮಾರ ರವರುಗಳು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹೊಸಹಳ್ಳಿ ಶಿವಮೂರ್ತಿ, ಬಿಸ್ಲೇರಿ ಮಲ್ಲಿಕಾರ್ಜುನ, ಮುದಹದಡಿ ಗ್ರಾಮದ ಶಂಭುಲಿಂಗನಗೌಡ್ರು, ಮಹೇಂದ್ರನಂದಿಗೌಡ್ರ, ಟಿ ವಿ ತೇಜಸ್ವಿ, ಎಂ.ನಾಗರಾಜ, ಕೆ ದಿಳ್ಳೇಪ್ಪ, ಷಣ್ಮುಖಪ್ಪ, ಮಿಟ್ಲಕಟ್ಟೆ ನಾಗರಾಜ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!