ದಾವಣಗೆರೆ : ರಾಜ್ಯ ವಿಧಾನಸಭೆ ಚುನಾವಣೆ ಮತದಾನವು ಮೇ 10 ರಂದು ನಡೆಯಲಿದ್ದು ಮತ ಎಣಿಕೆಯು ಮೇ 13 ರ ಶನಿವಾರ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದರು.
ಅವರು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಯ ತುಂಗಭದ್ರ ಸಭಾಂಗಣದಲ್ಲಿ ಮತ ಎಣಿಕೆ ಮೇಲ್ವಿಚಾರಕರು, ಎಣಿಕೆ ಸಹಾಯಕರಿಗೆ ಏರ್ಪಡಿಸಲಾದ ತರಬೇತಿಯಲ್ಲಿ ಭಾಗವಹಿಸಿ ಸಿಬ್ಬಂದಿಗಳಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು.
ದಾವಣಗೆರೆ ಜಿಲ್ಲೆಯ 7 ಕ್ಷೇತ್ರಗಳ ಮತ ಎಣಿಕೆಯು ದಾವಣಗೆರೆ ವಿಶ್ವವಿದ್ಯಾನಿಲಯ ಶಿವಗಂಗೋತ್ರಿಯಲ್ಲಿ ಮೇ 13 ರಂದು ಬೆಳಗ್ಗೆ 8 ಗಂಟೆಯಿಂದ ನಡೆಯಲಿದೆ. ಚುನಾವಣಾ ಎಣಿಕೆಗೆ ಪ್ರತಿ ಕ್ಷೇತ್ರಗಕ್ಕೆ 14 ಟೇಬಲ್‍ಗಳಲ್ಲಿ ಎಣಿಕೆ ನಡೆಯಲಿದ್ದು 15 ರಿಂದ 18 ಸುತ್ತುಗಳ ವರೆಗೆ ಎಣಿಕೆ ನಡೆಯಲಿದೆ.
ಚುನಾವಣೆಗೆ ನಿಯೋಜಿತರಾದ ಸೆಕ್ಟರ್ ಅಧಿಕಾರಿಗಳೇ ಎಣಿಕೆ ಮೇಲ್ವಿಚಾರಕರಾಗಿರುವುದರಿಂದ ಇನ್ನಷ್ಟು ಸರಳವಾಗಿರುತ್ತದೆ. ಪ್ರತಿ ಸುತ್ತಿನ ಎಣಿಕೆಯ ವೇಳೆ ಕಂಟ್ರೋಲ್ ಯುನಿಟ್‍ಯನ್ನು ಪರಿಶೀಲಿಸಿ ಮತಗಟ್ಟೆಗೆ ನೀಡಲಾದ ಸಂಖ್ಯೆಗಳನ್ನು ಪರಿಶೀಲಿಸಿಕೊಂಡು ಮತಗಟ್ಟೆ ಸಂಖ್ಯೆ ಮತ್ತು ಕಂಟ್ರೋಲ್ ಯುನಿಟ್‍ಗೆ ಹೊಂದಾಣಿಕೆಯಾಗುವುದನ್ನು ಖಾತರಿಪಡಿಸಿಕೊಳ್ಳಬೇಕು. ಕೆಲವು ಸಂದರ್ಭದಲ್ಲಿ ಬರೆಯುವಾಗ 1 ಹಾಗೂ 7 ಸಂಖ್ಯೆ ಬರೆಯುವಾಗ ಗೊಂದಲವಾಗದಂತೆ ಸ್ಪಷ್ಟವಾಗಿ ಕಾಣುವಂತೆ ಬರೆಯಬೇಕೆಂದು ತಿಳಿಸಿದರು. ಎಲ್ಲಾ ಎಣಿಕೆಯ ಸಂಪೂರ್ಣ ಉಸ್ತುವಾರಿಯನ್ನು ಚುನಾವಣಾ ವೀಕ್ಷಕರು ವಹಿಸಲಿದ್ದು ಎಲ್ಲಾ ಅನುಮತಿಯನ್ನು ವೀಕ್ಷಕರಿಂದ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಮಾತನಾಡಿ ಎಣಿಕೆ ಸಂದರ್ಭದಲ್ಲಿ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿಕೊಳ್ಳಬೇಕು. ಮತದಾನ ಮುಕ್ತಾಯವಾದಾಗ ಎಷ್ಟು ಮತಗಳಿದ್ದವು ಎನ್ನುವುದು ನಮೂನೆ-17ಸಿ ನಲ್ಲಿ ಇರುತ್ತದೆ. ಕಂಟ್ರೋಲ್ ಯುನಿಟ್‍ನಲ್ಲಿನ ಮತಗಳಿಗೂ ನಮೂನೆಯಲ್ಲಿ ನಮೂದಿಸಿರುವ ಮತಗಳಿಗೂ ತಾಳೆಯಾಗಬೇಕು. ಈ ಬಗ್ಗೆ ಅಭ್ಯರ್ಥಿಗಳ ಪರವಾಗಿ ಬಂದಿರುವ ಏಜೆಂಟರಿಗೂ ತಿಳಿಸಬೇಕೆಂದರು. ಮತ್ತು ವಿವಿ ಪ್ಯಾಟ್ ಸ್ಲಿಪ್‍ಗಳ ಎಣಿಕೆಯನ್ನ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ಮಷಿನ್‍ಗಳ ಎಣಿಕೆಯನ್ನು ಮಾಡಲಾಗುತ್ತದೆ ಎಂದು ಪ್ರಾಯೋಗಿಕವಾಗಿ ಎಣಿಕೆ ಪ್ರಕ್ರಿಯೆಗಳ ಬಗ್ಗೆ ತಿಳಿಸಿಕೊಟ್ಟರು.
ಈ ವೇಳೆ ಮಾಯಕೊಂಡ, ಚನ್ನಗಿರಿ ಚುನಾವಣಾ ವೀಕ್ಷಕರಾದ ದೇಬಾಶಿಸ್ ದಾಸ್ ಹಾಗೂ ಜಿಲ್ಲೆಯ ಎಲ್ಲಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳು ಉಪಸ್ಥಿತರಿದ್ದರು.
