ಸಚಿವರ ಜೊತೆ ಯೋಗದ ಆಯಾಮಗಳನ್ನ ಹೇಳಿಕೊಟ್ಟ ವಚನಾನಂದ ಶ್ರೀ – ಬೆಂಗಳೂರಿನಲ್ಲಿ 7ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ 

ಬೆಂಗಳೂರು: ಯೋಗ ಶಿಕ್ಷಣವನ್ನು ರಾಜ್ಯದ ಪಠ್ಯಕ್ರಮದಲ್ಲಿ ಸೇರಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರು ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು. ಉನ್ನತ ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ,  ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆ ಹಾಗೂ ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಸಹಯೋಗದಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ನಡೆದ 7ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿರು.

ಮನುಕುಲದ ಮಾನಸಿಕ- ದೈಹಿಕ ಸದೃಢತೆಗಾಗಿ ಹಿರಿಯರು ಕೊಟ್ಟು ಹೋಗಿರುವ ಯೋಗಕ್ಕೆ ಈಗ ವಿಶ್ವ ಮನ್ನಣೆ ಸಿಕ್ಕಿದೆ. ಮಕ್ಕಳ ಏಕಾಗ್ರತೆ ಮತ್ತು ಬೆಳವಣಿಗೆಗೆ ಇದು ಅತಿ ಹೆಚ್ಚು ಪರಿಣಾಮಕಾರಿ” ಎಂದರು. ಈ ವರ್ಷದಿಂದಲೇ ಜಾರಿಗೆ ಬರುತ್ತಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಯೋಗವನ್ನು ಪಠ್ಯವನ್ನಾಗಿ ಅಳವಡಿಸುವ ಅಂಶವಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಕ್ರಮ ವಹಿಸಿದೆ. ಮಕ್ಕಳು ಆರಂಭದಿಂದಲೇ ಶೈಕ್ಷಣಿಕವಾಗಿ ಬೆಳವಣಿಗೆ ಸಾಧಿಸುವುದರ ಜತೆಗೆ, ಯೋಗದ ಮೂಲಕ ದೈಹಿಕ-ಮಾನಸಿಕವಾಗಿ ಸದೃಢರಾಗಲಿದ್ದಾರೆ ಎಂದು ಡಿಸಿಎಂ ಹೇಳಿದರು.  ಇದಕ್ಕೂ ಮುನ್ನ ಮಾತನಾಡಿದ ರಾಜ್ಯ ಒಲಿಂಪಿಕ್‌ ಸಂಸ್ಥೆ ಅಧ್ಯಕ್ಷರೂ ಆದ ಶಾಸಕ ಗೋವಿಂದರಾಜು ಅವರು ಯೋಗವನ್ನು ಶಿಕ್ಷಣದ ಪಠ್ಯದಲ್ಲಿ ಸೇರಿಸಬೇಕೆಂದು ಮನವಿ ಮಾಡಿದರು. ಅದಕ್ಕೆ ಡಿಸಿಎಂ ಸ್ಪಂದಿಸಿ ಈ ಪ್ರತಿಕ್ರಿಯೆ ನೀಡಿದರು.

ಯೋಗ ಸೀಮಿತವಾದುದಲ್ಲ: ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ: 
ಯೋಗ ದಿನಾಚರಣೆಗೆ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ ಅವರು, “ಯೋಗವು ಯಾವುದೇ ದೇಶ, ಜಾತಿ, ಧರ್ಮಕ್ಕೆ ಸೀಮಿತವಾದುದ್ದಲ್ಲ. ಇದು ಮನುಷ್ಯನ ಅಸ್ತಿತ್ವಕ್ಕೆ ಸೇರಿರುವಂಥದ್ದು. ಮನುಷ್ಯನನ್ನು ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ಯಲು ನಮ್ಮ ಹಿರಿಯರು ಸಂಶೋಧಿಸಿದ ವಿಜ್ಞಾನವೇ ಯೋಗ” ಎಂದು ನುಡಿದರು.

ಯೋಗ ಭಾರತಕ್ಕೆ ಸೇರಿದ್ದು ಎಂದು ಜಗತ್ತು ಅದನ್ನು ಬಳಸದೇ ಇರಬಾರದು. ಹಾಗೆ ಮಾಡಿದರೆ ಜಗತ್ತಿಗೇ ನಷ್ಟ. ಯುರೋಪಿಯನ್‌ ವಿಜ್ಞಾನಿ ಲಾವಾಶಿಯರ್‌ ಅವರು ಆಮ್ಲಜನಕವನ್ನು ಸಂಶೋಧಿಸಿದರು ಎಂಬ ಕಾರಣಕ್ಕೆ ನಾವು ಅದನ್ನು ಬಳಸದೇ ಇದ್ದರೆ ನಮಗೇ ನಷ್ಟ. ಹಾಗೆಯ ಯೋಗವೂ ಕೂಡ. ಯೋಗ ಜಗತ್ತಿನ ಪ್ರತಿಯೊಬ್ಬರ ಜೀವನ ಶೈಲಿ ಆಗಬೇಕು ಎಂದು ಸ್ವಾಮೀಜಿ ಅವರು ಆಶಯ ವ್ಯಕ್ತಪಡಿಸಿದರು.

ವಚನಾನಂದ ಶ್ರೀಗಳಿಂದ ಯೋಗ ಮಾರ್ಗದರ್ಶನ: 
ಹರಿಹರದ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಅವರು ಈ ಸಂದರ್ಭದಲ್ಲಿ ಯೋಗ ಮಾರ್ಗದರ್ಶನ ನೀಡಿದರು. ಯೋಗ ಪಟುಗಳಿಂದ ಶ್ರೀಗಳವರು ʼಕಟ್ಟಿ ಚಕ್ರಾಸನʼ, ʼತ್ರಿಕೋನಾಸನʼ, ʼಊರ್ಧ್ವ ತಾಡಾಸನʼ, ʼಪಾದ ಹಸ್ತಾಸನʼ, ʼಉಸ್ಟ್ರಾಸನʼ, ʼಶಶಾಂಕಾಸನʼ, ʼಮಂಡೂಕಾಸನʼ, ʼಮಕರಾಸನʼ, ʼಭುಜಂಗಾಸನʼ, ʼಬಾಲ ಕ್ರೀಡಾಸನʼ, ʼಶಲ್ಬಾಸನʼ, ʼಉತ್ಥಾನ ಪಾದಾಸನʼ, ʼಅರ್ಧಪವನ ಮುಕ್ತಾಸನʼ, ʼಪವನ ಮುಕ್ತಾಸನʼ ಜತೆಗೆ, ʼಕಪಾಲಬಾತಿʼ, ʼಪ್ರಾಣಯಾಮʼ, ʼನಾಡಿ ಶೋಧನʼ, ʼಶೀಥಲಿ ಪ್ರಾಣಯಾಮʼ, ʼಭ್ರಾಮರಿ ಪ್ರಾಣಯಾಮʼ ಮಾಡಿಸಿದರು.‌

ಕ್ರೀಡಾ ಮತ್ತು ಯವಜನ ಸಬಲೀಕರಣ ಖಾತೆ ಸಚಿವ ಡಾ.ಕೆ.ಸಿ.ನಾರಾಯಣ ಗೌಡ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್‌ ಪ್ರಭಾಕರ್, ಯುವಜನ ಸೇವೆ ಇಲಾಖೆ ಆಯುಕ್ತ ಗೋಪಾಲಕೃಷ್ಣ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!