ಚಿತ್ರದುರ್ಗ: ಕಾಂಗ್ರೆಸ್ ಸರ್ಕಾರ ತನ್ನ ಗ್ಯಾರಂಟಿ ಕಾರ್ಡ್‌ನಲ್ಲಿ 200 ಯೂನಿಟ್ ವಿದ್ಯುತ್ ಉಚಿತ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಇದೀಗ ಹಲವೆಡೆ ವಿದ್ಯುತ್ ಬಿಲ್ ಪಾವತಿಸಲು ಜನತೆ ನಿರಾಕರಿಸುತ್ತಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಆಯ್ಕೆಯಾಗಿದ್ದು, ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವುದು ಬಾಕಿ ಇದೆ.
ಕಾಂಗ್ರೆಸ್ ಮುಖಂಡರು ಪ್ರಚಾರದ ಅವಧಿಯಲ್ಲಿ ಜೂನ್ ತಿಂಗಳಿನಿಂದಲೇ ಕರೆಂಟ್ ಬಿಲ್ ಕಟ್ಟುವ ಅಗತ್ಯವಿಲ್ಲ ಎಂದು ಖಡಾಕಂಡಿತವಾಗಿ ಹೇಳಿದ್ದರು. ಇದೀಗ ಜನತೆ ಬಿಲ್ ಕಟ್ಟುವುದಿಲ್ಲ ಎಂದು ಹೇಳುತ್ತಿದ್ದಾರೆ.
ಚಿತ್ರದುರ್ಗ ತಾಲ್ಲೂಕಿನ ಸಿದ್ದಾಪುರ ಗ್ರಾಮದಲ್ಲಿ ವಿದ್ಯುತ್ ಬಿಲ್ ಪಾವತಿಗೆ ನಿರಾಕರಿಸಿದ್ದಾರೆ. ಬೆಸ್ಕಾಂ ಮೀಟರ್ ರೀಡರ್ ಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದು, ನಾವು ಯಾವುದೇ ಕಾರಣಕ್ಕೂ ಬಿಲ್ ಕಟ್ಟುವುದಿಲ್ಲ ಎಂದು ಹೇಳಿದ್ದಾರೆ.
ಗ್ರಾಮಸ್ಥರು ವಿದ್ಯುತ್ ಬಿಲ್ ಕಟ್ಟಲ್ಲ ಎಂದಿರುವ ವಿಡಿಯೋ ವೈರಲ್ ಆಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ನಾವು ಬಿಲ್ ಕಟ್ಟಲ್ಲ. ವಿದ್ಯುತ್ ಫ್ರೀ ಎಂದು ಮೊದಲೇ ಕಾಂಗ್ರೆಸ್ ಘೋಷಿಸಿದೆ ಎಂದಿದ್ದಾರೆ.
ಆದರೆ ಆದೇಶ ಬರುವವರೆಗೆ ಬಿಲ್ ಕಟ್ಟಲೇಬೇಕು ಎಂದು ಮೀಟರ್ ರೀಡರ್ ಹೇಳಿದ್ದಕ್ಕೆ ಜನರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
