ಉಸಿರಿರುವ ವರೆಗೂ ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ಶ್ರಮಿಸುತ್ತೇನೆ ವಿದಾಯ ಭಾಷಣ ಮಾಡಿದ ಯಡಿಯೂರಪ್ಪ
ಬೆಂಗಳೂರು: ‘ಜೀವನದ ಕೊನೆಯ ಉಸಿರು ಇರುವವರೆಗೂ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ’ ಎಂದು ರಾಜ್ಯ ಬಿಜೆಪಿಯ ಪ್ರಬಲ ನಾಯಕ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಕರ್ನಾಟಕ ವಿಧಾನಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ‘ವಿದಾಯ ಭಾಷಣ’ ಮಾಡಿದ ಅವರು, ಬಿಜೆಪಿಯಾಗಲಿ, ಪ್ರಧಾನಿ ಮೋದಿಯಾಗಲಿ ನನ್ನನ್ನು ಎಂದಿಗೂ ಕಡೆಗಣಿಸಿಲ್ಲ ಎಂದು ಬಿಎಸ್‌ವೈ ಸ್ಪಷ್ಟನೆ ನೀಡಿದರು.
ಈಗಾಗಲೇ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿರುವ 79 ವರ್ಷದ ಹಿರಿಯ ನಾಯಕ, ‘ಮನೆಯಲ್ಲಿ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ. ವಿಧಾನಸಭೆ ಅಧಿವೇಶನದ ನಂತರ ರಾಜ್ಯ ಪ್ರವಾಸ ಮಾಡಿ ಪಕ್ಷ ಮತ್ತು ಅದರ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತೇನೆ’ ಎಂದು ಹೇಳಿದರು.
ವಿಶ್ವಾಸದಿಂದ ಜನರ ಮುಂದೆ ಹೋಗಿ ಮತ ಕೇಳುವಂತೆ ಆಡಳಿತ ಪಕ್ಷದ ಶಾಸಕರನ್ನು ಒತ್ತಾಯಿಸಿದ ಅವರು, ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ ಎಂದು ಹೇಳಿದರು.
‘ಈ ಚುನಾವಣೆಯ ಐದು ವರ್ಷಗಳ ನಂತರ ಮುಂದಿನ ಚುನಾವಣೆಯಲ್ಲೂ ದೇವರು ನನಗೆ ಶಕ್ತಿ ನೀಡಿದರೆ, ನಾನು ಬಿಜೆಪಿ ಅಧಿಕಾರಕ್ಕೆ ಬರಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇನೆ. ನಿಮಗೆ ತಿಳಿದಿರುವಂತೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷ ನನಗೆ ನೀಡಿದ ಗೌರವ ಮತ್ತು ಸ್ಥಾನಗಳನ್ನು ನನ್ನ ಜೀವಿತಾವಧಿಯಲ್ಲಿ ಮರೆಯಲು ಸಾಧ್ಯವಿಲ್ಲ’ ಎಂದು ಅವರು ಹೇಳಿದರು.
‘ನನ್ನ ಜೀವನದ ಕೊನೆಯ ಉಸಿರು ಇರುವವರೆಗೂ ನಾನು ಬಿಜೆಪಿಯನ್ನು ಕಟ್ಟಲು ಮತ್ತು ಅಧಿಕಾರಕ್ಕೆ ತರಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಅದರಲ್ಲಿ ಯಾವುದೇ ಅನುಮಾನ ಬೇಡ. ಈ ಭಾಗದಲ್ಲಿರುವ ನಮ್ಮ (ಬಿಜೆಪಿ) ಎಲ್ಲಾ ಶಾಸಕರಿಗೆ ನಾನು ಹೇಳಲು ಬಯಸುತ್ತೇನೆ. ಆತ್ಮವಿಶ್ವಾಸದಿಂದ ಕೆಲಸ ಮಾಡಿ. ಚುನಾವಣೆಗೆ ಸಿದ್ಧರಾಗಿ. ಆ ಕಡೆಯಿಂದ (ವಿರೋಧಿ ಪಕ್ಷಗಳ) ಹಲವರು ನಮ್ಮೊಂದಿಗೆ ಬರಲು ಸಿದ್ಧರಿದ್ದಾರೆ. ನಿಮಗೆ ವಿಶ್ವಾಸವಿದ್ದರೆ ಅವರನ್ನು ಕರೆದುಕೊಂಡು ಹೋಗಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತರಬಹುದು’ ಎಂದು ಅವರು ಹೇಳಿದರು.
ಶುಕ್ರವಾರದಂದು ಅಧಿವೇಶನ ಮುಕ್ತಾಯವಾಗಲಿದ್ದು, ವಿಧಾನಸಭೆಯಲ್ಲಿ ಕೊನೆಯ ಬಾರಿಗೆ ಮಾತನಾಡುತ್ತಿರುವುದಾಗಿ ಯಡಿಯೂರಪ್ಪ ತಿಳಿಸಿದರು. ‘ಇದು ಒಂದು ರೀತಿಯಲ್ಲಿ ನನ್ನ ವಿದಾಯ, ಏಕೆಂದರೆ ನಾನು ವಿಧಾನಸಭೆಗೆ ಬಂದು ಮಾತನಾಡಲು ಸಾಧ್ಯವಿಲ್ಲ’ ಎಂದು ಹೇಳಿದರು.