ಯುವ ಜನತೆ ರಾಷ್ಟ್ರದ ಬೆಳವಣಿಗೆಯನ್ನು ಹೆಮ್ಮೆಯಿಂದ ನೋಡುತ್ತಿದ್ದಾರೆ ಮಂಡ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ

ಮಂಡ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ

ಮಂಡ್ಯ: ನಮ್ಮ ರಾಷ್ಟ್ರದ ಬೆಳವಣಿಗೆಯನ್ನು ನೋಡುವುದರಲ್ಲಿ ಯುವಕರು ಅಪಾರ ಹೆಮ್ಮೆ ಪಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆ ಕಾಲೋನಿಯಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಪಾಲ್ಗೊಂಡು ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಳೆದ ಕೆಲವು ದಿನಗಳಿಂದ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನಮ್ಮ ರಾಷ್ಟ್ರದ ಬೆಳವಣಿಗೆಯನ್ನು ನೋಡುವುದರಲ್ಲಿ ಯುವಕರು ಅಪಾರ ಹೆಮ್ಮೆ ಪಡುತ್ತಿದ್ದಾರೆ. ಈ ಎಲ್ಲಾ ಯೋಜನೆಗಳು ಸಮೃದ್ಧಿ ಮತ್ತು ಅಭಿವೃದ್ಧಿಯ ಹಾದಿಗಳನ್ನು ತೆರೆಯುತ್ತದೆ ಎಂದು ಹೇಳಿದರು.

ಕೆಲವು ಸಮಯಗಳಿಂದ ಕರ್ನಾಟಕದ ಬೇರೆ ಬೇರೆ ಪ್ರದೇಶದ ಜನತಾ ದರ್ಶನ ಮಾಡುವ ಅವಕಾಶ ಲಭಿಸಿದೆ. ಪ್ರತಿ ಸ್ಥಳದಲ್ಲೂ ಕರ್ನಾಟಕ ಜನತೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಅದರಲ್ಲೂ ಮಂಡ್ಯ ಜನರ ಆಶೀರ್ವಾದದ ಸವಿಯು ಮಾಧುರ್ಯದಿಂದ ಕೂಡಿದೆ. ಮೂಲಸೌಕರ್ಯ ತನ್ನೊಂದಿಗೆ ಸೌಕರ್ಯವನ್ನಷ್ಟೇ ಅಲ್ಲ, ಉದ್ಯೋಗ, ವಸತಿ, ಗಳಿಕೆಯ ಹಾದಿಯನ್ನು ತರುತ್ತದೆ. ಕೇಂದ್ರವು ಒಂದು ವರ್ಷದಲ್ಲಿ ಕರ್ನಾಟಕಕ್ಕೆ1 ಲಕ್ಷ ಕೋಟಿಗೂ ಅಧಿಕ ಹಣ ಬಿಡುಗಡೆ ಮಾಡಿದೆ.

ಬೆಂಗಳೂರು ತಂತ್ರಜ್ಞಾನಕ್ಕೆ ಪರಿಚಿತವಾದರೆ, ಮೈಸೂರು ತನ್ನ ಸಂಸ್ಕೃತಿಯ ಕಾರಣಕ್ಕೆ ಲೋಕ ಪರಿಚಿತ. ಕೃಷ್ಣರಾಜ ಒಡೆಯರ್‌ ಹಾಗೂ ಸರ್‌. ಎಂ ವಿಶ್ವೇಶ್ವರಯ್ಯ ಈ ಇಬ್ಬರು ಮಹಾಪುರುಷರನ್ನು ಈ ಪುಣ್ಯಭೂಮಿ ಭಾರತಕ್ಕೆ ನೀಡಿದೆ. ಇಂದು ಇವರ ಪರಿಶ್ರಮ ಹಾಗೂ ತಪಸ್ಸಿನ ಫಲದಿಂದ ಅಭೂತಪೂರ್ವ ಹೆದ್ದಾರಿ ನಿರ್ಮಾಣವಾಗಿದೆ. ಇಂತಹ ಮಹಾಪುರುಷರ ಪ್ರೇರಣೆಯಿಂದ ಇಂದು ದೇಶ ಅನೇಕ ಆಧುನಿಕ ಮೂಲ ಸೌಕರ್ಯಗಳನ್ನು ಕಾಣುತ್ತಿದೆ ಎಂದು ಹೇಳಿದರು.

ದಶಪಥ ಹೆದ್ದಾರಿಯಿಂದ ಪ್ರವಾಸೋದ್ಯಮ ಕ್ಷೇತ್ರ ಮತ್ತಷ್ಟು ಬೆಳೆಯಲಿದೆ. 2014ಕ್ಕಿಂತ ಮೊದಲು ದೇಶದ ಬಡವರ ಬಗ್ಗೆ ಕಾಳಜಿ ತೋರಿಸಲಿಲ್ಲ. ಬಡವರ ಹೆಸರಿನ ಯೋಜನೆಯಲ್ಲಿ ಕೋಟ್ಯಂತರ ಹಣ ಲೂಟಿ ಮಾಡಿದರು ಎಂದು ಕಾಂಗ್ರೆಸ್ ವಿರುದ್ಧ ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. 2014ರಲ್ಲಿ ದೇಶದ ಜನರು ನನಗೆ ಆಶೀರ್ವಾದ ನೀಡಿದರು. ದೇಶದ ಅಭಿವೃದ್ಧಿಗಾಗಿ 2014ರಲ್ಲಿ ಬಡವರ ಪರ ಸರ್ಕಾರ ಅಧಿಕಾರಕ್ಕೆ ಬಂತು. ಬಡವರ ಕಷ್ಟಗಳನ್ನು ಅರಿತುಕೊಂಡು ನಿವಾರಿಸಲು ಪ್ರಯತ್ನಿಸುತ್ತಿದ್ದೇವೆ. ಕಳೆದ 9 ವರ್ಷಗಳಲ್ಲಿ ಕೇಂದ್ರ ಯೋಜನೆಯಿಂದ ಬಡವರ ಬದುಕು ಹಸನಾಗಿದೆ ಎಂದರು.

Leave a Reply

Your email address will not be published. Required fields are marked *

error: Content is protected !!