ವಿಧಾನಸಭೆ ಚುನಾವಣೆ ದಾವಣಗೆರೆ ಜಿಲ್ಲೆಯ 7 ಕ್ಷೇತ್ರಗಳಿಂದ 1442553 ಮತದಾರರು, 1685 ಮತಗಟ್ಟೆಗಳು

ವಿಧಾನಸಭೆ ಚುನಾವಣೆ ದಾವಣಗೆರೆ ಜಿಲ್ಲೆಯ 7 ಕ್ಷೇತ್ರಗಳಿಂದ 1442553 ಮತದಾರರು, 1685 ಮತಗಟ್ಟೆಗಳು

ದಾವಣಗೆರೆ : ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣಾ ಮತದಾನವು ಮೇ 10 ರಂದು ನಡೆಯಲಿದ್ದು ದಾವಣಗೆರೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಿಂದ ಅಂತಿಮವಾಗಿ 1442553 ಮತದಾರರು ಇದ್ದು 1685 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದರು.
ಅವರು ಗುರುವಾರ ಅವರ ಕಚೇರಿಯಲ್ಲಿ ಔಪಚಾರಿಕವಾಗಿ ಪತ್ರಕರ್ತರೊಂದಿಗೆ ಮಾತನಾಡಿದರು. ಅಂತಿಮ ಮತದಾರರ ಪಟ್ಟಿ ಪ್ರಕಟಣೆ ಸೇರಿದಂತೆ ಏಪ್ರಿಲ್ 20 ರವರೆಗೆ ನೊಂದಾಯಿಸಿದ ಎಲ್ಲಾ ಮತದಾರರು ಸೇರಿದಂತೆ ಅಂತಿಮವಾಗಿ ಈ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಇದು ಅಂತಿಮ ಮತದಾರರ ಪಟ್ಟಿಯಾಗಿರುತ್ತದೆ. ಇದೇ ಮತದಾರರ ಪಟ್ಟಿಯನ್ವಯ ಮತದಾನವಾಗಲಿದೆ. ಒಟ್ಟು ಮತದಾರರಲ್ಲಿ 721964 ಪುರುಷ, 720004 ಮಹಿಳಾ ಮತದಾರರು, 118 ಇತರೆ ಸೇರಿದಂತೆ 467 ಸೇವಾ ಮತದಾರರಿದ್ದಾರೆ.

ಕ್ಷೇತ್ರವಾರು ಮತದಾರರ ವಿವರ: ಜಗಳೂರು 97690 ಪುರುಷ, 95257 ಮಹಿಳೆಯರು, 11 ಇತರೆ, 70 ಸೇವಾ ಮತದಾರರು ಸೇರಿ 193028. ಹರಿಹರ 103667 ಪುರುಷ, 103832 ಮಹಿಳೆಯರು, 18 ಇತರೆ ಹಾಗೂ 72 ಸೇವಾ ಮತದಾರರು ಸೇರಿ 207589, ದಾವಣಗೆರೆ ಉತ್ತರ 119353 ಪುರುಷ, 121841 ಮಹಿಳೆಯರು, 38 ಇತರೆ, 46 ಸೇವಾ ಮತದಾರರು ಸೇರಿ 241278, ದಾವಣಗೆರೆ ಉತ್ತರ 104762 ಪುರುಷ, 105873 ಮಹಿಳೆಯರು, 33 ಇತರೆ, 40 ಸೇವಾ ಮತದಾರರು ಸೇರಿ 210708, ಮಾಯಕೊಂಡ 96491 ಪುರುಷ, 94803 ಮಹಿಳೆಯರು, 6 ಇತರೆ, 121 ಸೇವಾ ಮತದಾರರು ಸೇರಿದಂತೆ ಒಟ್ಟು 191421. ಚನ್ನಗಿರಿ 100266 ಪುರುಷ, 99194 ಮಹಿಳಾ, 8 ಇತರೆ, 49 ಸೇವಾ ಮತದಾರರು ಸೇರಿ 199517. ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ 99735 ಪುರುಷ, 99204 ಮಹಿಳೆಯರು, 4 ಇತರೆ, 69 ಸೇವಾ ಮತದಾರರು ಸೇರಿ ಒಟ್ಟು 199012 ಮತದಾರರಿದ್ದಾರೆ. ಅತೀ ಹೆಚ್ಚು ಮತದಾರರಿರುವ ಕ್ಷೇತ್ರ ದಾವಣಗೆರೆ ಉತ್ತರ ಎಂದರು.

ವಯೋಮಿತಿವಾರು ಮತದಾರರು: 18-19 ರ ವಯೋಮಾನ 35454, 20-29 ರವರೆಗೆ 287161, 30 ರಿಂದ 39 ರ ವಯೋಮಾನ 342321, 40 ರಿಂದ 49 ರ ವಯೋಮಾನ 306292, 50 ರಿಂದ 59 ರ ವಯೋಮಾನ 227876, 60 ರಿಂದ 69 ರಲ್ಲಿ 143794, 70-79 ರ ವಯೋಮಾನ 71589, 80 ರ ಮೇಲ್ಪಟ್ಟು 27599 ಮತದಾರರಿದ್ದಾರೆ. 2023 ರ ಜನವರಿಯಿಂದ ಏಪ್ರಿಲ್ 20 ರ ವರೆಗೆ ನಿರಂತರವಾಗಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿದ್ದರಿಂದ 17710 ಪುರುಷ ಹಾಗೂ 20492 ಮಹಿಳಾ, 7 ಇತರೆ ಮತದಾರರು ಸೇರಿ 38209 ಯುವ ಮತದಾರರನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ.

ಮೂರು ವರ್ಗದವರಿಗೆ ಮನೆಯಿಂದಲೇ ಮತದಾನ: ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯನ್ವಯ 80 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು, ವಿಶೇಷಚೇತನರು, ಕೋವಿಡ್ ಬಾಧಿತರು ಮನೆಯಿಂದಲೇ ಮತದಾನ ಮಾಡಲು ವಿಶೇಷ ಅವಕಾಶ ಕಲ್ಪಿಸಲಾಗಿದೆ. ಇವರಿಗೆ ಈಗಾಗಲೇ 12.ಡಿ ಫಾರಂ ವಿತರಣೆ ಮಾಡಲಾಗಿದೆ. ಹಿರಿಯ ನಾಗರೀಕರಲ್ಲಿ 27566 ಮತದಾರರನ್ನು ಗುರುತಿಸಿ 12ಡಿ ನಮೂನೆಯನ್ನು 20687 ಜನರಿಗೆ ವಿತರಣೆ ಮಾಡಲಾಗಿದ್ದು ಇದರಲ್ಲಿ 6879 ಜನರು ವಿವಿಧ ಕಾರಣದಿಂದ ಲಭ್ಯವಾಗಿರುವುದಿಲ್ಲ. ಹಿರಿಯ ನಾಗರೀಕರಲ್ಲಿ ಮನೆಯಿಂದಲೇ ಮತದಾನ ಮಾಡಲು 1870 ಜನರು 12.ಡಿ ಭರ್ತಿ ಮಾಡಿ ನೀಡಿರುವರು.
ವಿಶೇಷಚೇತನರ ವರ್ಗದಲ್ಲಿ 17610 ಮತದಾರರನ್ನು ಗುರುತಿಸಿ 12.ಡಿ ವಿತರಿಸಲಾಗಿದೆ. ಇದರಲ್ಲಿ ವಿವಿಧ ಕಾರಣದಿಂದ 1614 ಜನರಿಗೆ 12ಡಿ ವಿತರಿಸಿರುವುದಿಲ್ಲ. ವಿತರಣೆ ಮಾಡಿದವರಲ್ಲಿ 510 ಜನರು ಮನೆಯಿಂದ ಮತದಾನ ಮಾಡಲು 12ಡಿ ಭರ್ತಿ ಮಾಡಿ ಹಿಂದಿರುಗಿಸಿದ್ದಾರೆ.

12.ಡಿ ಮತದಾನಕ್ಕೆ ದಿನಾಂಕ ನಿಗಧಿ :ಹಿರಿಯ ನಾಗರೀಕರು, ವಿಶೇಷಚೇತನರು, ಕೋವಿಡ್ ಬಾಧಿತರಿಗೆ ಮತದಾನ ಮಾಡಿಸಲು 7 ವಿಧಾನಸಭಾ ಕ್ಷೇತ್ರಗಳಿಂದ 87 ತಂಡಗಳನ್ನು ರಚಿಸಲಾಗಿದೆ. ಈ ತಂಡದವರಿಂದ ಏಪ್ರಿಲ್ 29 ರಂದು ಬೆಳಗ್ಗೆ 7 ರಿಂದ 6 ಗಂಟೆಯವರೆಗೆ ಮೊದಲ ಹಂತದ ಮತದಾನ ಭೇಟಿ, ಹೊನ್ನಾಳಿ ಕ್ಷೇತ್ರಕ್ಕೆ ಏಪ್ರಿಲ್ 29, 30 ಎರಡು ದಿನ ಮೊದಲ ಭೇಟಿ ನಿಗಧಿ ಮಾಡಿದೆ. ಅವಶ್ಯವಿದ್ದಲ್ಲಿ ಮೇ 2 ರಂದು ಎರಡನೇ ಭೇಟಿ ನಿಗಧಿ ಮಾಡಲಾಗಿದೆ. ಆಯೋಗವು ಮೇ 6 ರವರೆಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಿದೆ. ಮತಗಟ್ಟೆ ಅಧಿಕಾರಿಯ ಮೂಲಕ ಮತದಾರರಿಗೆ ಮೊದಲ ಹಂತ ಮತ್ತು ಮತದಾನ ಮಾಡದಿದ್ದಲ್ಲಿ ಎರಡನೇ ಹಂತದ ಮತದಾನದ ಮಾಹಿತಿ ನೀಡಲಾಗುತ್ತದೆ. ಒಂದು ವೇಳೆ ಮನೆಯಲ್ಲಿ ಇಲ್ಲದಿದ್ದಲ್ಲಿ ಪುನಃ ಮತದಾನಕ್ಕೆ ಅವಕಾಶ ಇರುವುದಿಲ್ಲ.

9 ವಿವಿಧ ಇಲಾಖೆಗಳ ಅಗತ್ಯ ಸೇವಾ ಸಿಬ್ಬಂದಿಗೆ ಅಂಚೆ ಮತಪತ್ರದಲ್ಲಿ ಮತದಾನ: ಕೆಎಸ್‍ಆರ್‍ಟಿಸಿ, ಬಿಎಸ್‍ಎನ್‍ಎಲ್, ರೈಲ್ವೆ, ದೂರದರ್ಶನ, ಆಕಾಶವಾಣಿ, ಆರೋಗ್ಯ ಇಲಾಖೆ, ವಿಮಾನಯಾನ, ಬಸ್‍ಸೇವೆ, ಅಗ್ನಿಶಾಮಕ ಸೇವೆ, ಮಾಧ್ಯಮ ಪ್ರತಿನಿಧಿಗಳು, ಸಂಚಾರಿ ಪೊಲೀಸ್, ಅಂಬುಲೆನ್ಸ್ ಸೇವೆಯಲ್ಲಿರುವವರಿಗೆ ಬೇಡಿಕೆಯನ್ವಯ ಒಟ್ಟು 339 ಮತದಾರರಿಗೆ 12ಡಿ ಯನ್ನು ನೀಡಿಲಾಗಿದೆ. ಇವರಿಗೆ ಪೋಸ್ಟಲ್ ಬ್ಯಾಲೆಟ್ ವಿತರಿಸಲಾಗುತ್ತಿದ್ದು ಇವರು ಮೇ 2 ರಿಂದ 4 ರ ವರೆಗೆ ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ಮಾಡಲು ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಅಂಚೆ ಮತದಾನ ಕೇಂದ್ರವನ್ನು ತೆರೆಯಲಾಗುತ್ತದೆ. ಅಗತ್ಯ ಸೇವಾ ಮತದಾರರು ಮಾತ್ರ ಇಲ್ಲಿ ಮತಹಾಕಬೇಕು ಎಂದರು.

ಚುನಾವಣಾ ಸಿಬ್ಬಂದಿಗೆ ನಮೂನೆ-12 : ಚುನಾವಣಾ ದಿನದಂದು ಕರ್ತವ್ಯ ನಿರ್ವಹಿಸುವ ಚುನಾವಣಾ ಸಿಬ್ಬಂದಿ ಸೇರಿದಂತೆ ಪೊಲೀಸ್ ಸಿಬ್ಬಂದಿಗಳಿಗೆ ನಮೂನೆ-12 ವಿತರಣೆಗೆ 9935 ಸಿಬ್ಬಂದಿಗೆ ನೀಡಲು ಗುರುತಿಸಲಾಗಿದೆ. ಇದುವರೆಗೆ 7973 ಸಿಬ್ಬಂದಿಯವರು ನಮೂನೆ-12 ಭರ್ತಿ ಮಾಡಿ ನೀಡಿರುವರು. ಇವರಿಗೆ ಅಂಚೆ ಬ್ಯಾಲೆಟ್ ನೀಡಲು ಸಿದ್ದತೆ ಮಾಡಿಕೊಳ್ಳಲಾಗಿದೆ.

ವಿದ್ಯುನ್ಮಾನ ಮತಯಂತ್ರಗಳ ಹಂಚಿಕೆ: ಜಿಲ್ಲೆಯಲ್ಲಿ 1685 ಮತಗಟ್ಟೆಗಳಿದ್ದು 1685 ಬ್ಯಾಲೆಟ್ ಯುನಿಟ್, 1685 ಕಂಟ್ರೋಲ್ ಯುನಿಟ್, 1685 ವಿವಿ ಪ್ಯಾಟ್ ಅವಶ್ಯವಿರುತ್ತದೆ. ಇಷ್ಟು ಸಂಖ್ಯೆಗಳ ಜೊತೆಗೆ ಶೇ 20 ರಷ್ಟು ಹೆಚ್ಚುವರಿಯಾಗಿ 339 ಬ್ಯಾಲೆಟ್ ಮತ್ತು ಕಂಟ್ರೋಲ್ ಯುನಿಟ್, ಶೇ 30 ರಷ್ಟು ವಿವಿ ಪ್ಯಾಟ್ 509 ಹೆಚ್ಚುವರಿ ಸೇರಿ ಒಟ್ಟು 2029 ಬ್ಯಾಲೆಟ್ ಯುನಿಟ್, 2029 ಕಂಟ್ರೋಲ್ ಯುನಿಟ್, 2194 ವಿವಿ ಪ್ಯಾಟ್ ಹಂಚಿಕೆ ಮಾಡಲಾಗಿದೆ. ಮತಯಂತ್ರಗಳ ಎರಡನೇ ಹಂತದ ರ್ಯಾಂಡಮೈಜೇಷನ್ ಏಪ್ರಿಲ್ 30 ರಂದು ಅಭ್ಯರ್ಥಿಗಳು, ಚುನಾವಣಾಧಿಕಾರಿಗಳ ಹಾಗೂ ವೀಕ್ಷಕರ ಸಮ್ಮುಖದಲ್ಲಿ ನಡೆಯಲಿದೆ. ಮತ್ತು ಮೇ 1, 2 ರಂದು ಅಭ್ಯರ್ಥಿ, ವೀಕ್ಷಕರ ಸಮ್ಮುಖದಲ್ಲಿ ಮತಪತ್ರಗಳನ್ನು ಯಂತ್ರಗಳಿಗೆ ಜೋಡಿಸುವ ಕೆಲಸ ಮಾಡಲಾಗುತ್ತದೆ ಎಂದರು.

ಏ.30 ನಮ್ಮ ನಡೆ, ಮತಗಟ್ಟೆಯ ಕಡೆ:  ಜಿಲ್ಲೆಯ ಎಲ್ಲಾ ಮತಗಟ್ಟೆಯಲ್ಲಿ ಮತಗಟ್ಟೆ ಅಧಿಕಾರಿಗಳ ನೇತೃತ್ವದಲ್ಲಿ ಏಪ್ರಿಲ್ 30 ರಂದು ಬೆಳಗ್ಗೆ 8 ಗಂಟೆಗೆ ಮತ್ತು ಪಿಡಿಓ, ಚುನಾವಣಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿಯವರ ನೇತೃತ್ವದಲ್ಲಿ ಪ್ರಜಾಪ್ರಭುತ್ವದ ಹಬ್ಬ ಮೇ 10 ಮತದಾನ ಎಂಬ ಧ್ಯೇಯ ಒಳಗೊಂಡ ಧ್ವಜಾರೋಹಣ ಮಾಡುವ ಮೂಲಕ ಮತದಾರರಿಗೆ ಮತಗಟ್ಟೆ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಇಲ್ಲಿ ಮತದಾರರಿಗೆ ಮಾತ್ರ ಅವಕಾಶ ಇದ್ದು ಇತರೆ ರಾಜಕೀಯ ಪ್ರೇರಿತ ವ್ಯಕ್ತಿಗಳಿಗೆ ಭಾಗವಹಿಸಲು ಅವಕಾಶ ಇರುವುದಿಲ್ಲ.

ವಿಶೇಷ ಮತಗಟ್ಟೆಗಳ ಸ್ಥಾಪನೆ: ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ 7 ಸಖಿ ಮತಗಟ್ಟೆ, 7 ವಿಶೇಷಚೇತನರ ಮತಗಟ್ಟೆ, ಯುವ ಮತದಾರರ ಮತಗಟ್ಟೆ ಜಿಲ್ಲೆಯಲ್ಲಿ 1, ಸಾಂಪ್ರದಾಯಿಕ ಮತಗಟ್ಟೆ 1, ವಿಷಯಾಧಾರಿತ 2 ಮತಗಟ್ಟೆ ಸ್ಥಾಪಿಸಲಿದ್ದು ಇವು ಮತಗಟ್ಟೆ ವಿಶೇಷವಾಗಿರುತ್ತವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!