‘ಬಿಜೆಪಿಯವರು ಹೆಣಗಳ ಮೇಲೆ ರಾಜಕೀಯ ಮಾಡುತ್ತಾರೆ’: ಸಿದ್ದರಾಮಯ್ಯ ವಾಗ್ದಾಳಿ

ಉಡುಪಿ: ಉಡುಪಿಯಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಗಮನಸೆಳೆಯಿತು. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಹರಿಪ್ರಸಾದ್ ಸೇರಿದಂತೆ ನಾಯಕರನೇಕರು ಭಾಗಿಯಾದರು.

ಸಮಾವೇಶದಲ್ಲಿ ಮಾತನಾಡಿದ ಸುರ್ಜೀವಾಲ, ಕಮಿಷನ್ ಹಾಗೂ ಕೋಮುವಾದ ಬಿಜೆಪಿ ಸರ್ಕಾರದ ಕಳೆದ ಮೂರುವರೆ ವರ್ಷಗಳ ಆಡಳಿತದ ಕೊಡುಗೆ. ಕಳೆದ ವರ್ಷ ಈ ಸರ್ಕಾರದ ಭ್ರಷ್ಟಾಚಾರ ಕಿರುಕುಳ ತಾಳಲಾರದೆ, ಬಿಜೆಪಿ ಕಾರ್ಯಾಕರ್ತ ಸಂತೋಷ್ ಪಾಟೀಲ್ ಇಲ್ಲಿಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದ. ಸಂತೋಷ್ ಪಾಟೀಲ್ ಉಡುಪಿಗೆ ಬಂದು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು? ಕಾರಣ, ಸಂತೋಷ್ ಪಾಟೀಲ್ ಅವರಿಗೆ ಬಿಜೆಪಿ ಸರ್ಕಾರಕ್ಕೆ 40% ಕಮಿಷನ್ ನೀಡಲು ಸಾಧ್ಯವಾಗಲಿಲ್ಲ. ಹೀಗಾಗಿ ಆತ ಆತ್ಮಹತ್ಯೆ ಮಾಡಿಕೊಂಡ. ಬಿಜೆಪಿಯವರು ತಮ್ಮ ಕಾರ್ಯಕರ್ತರನ್ನೂ ಬಿಡದೆ ಕಮಿಷನ್ ಕಿತ್ತುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದು 40% ಕಮಿಷನ್ ಸರ್ಕಾರ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಭ್ರಷ್ಟಾಚಾರ ವಿಚಾರವಾಗಿ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪತ್ರ ಬರೆದಿದ್ದಾರೆ. ಮೋದಿ ಅವರು ಕರ್ನಾಟಕಕ್ಕೆ ಆಗಮಿಸಿ ನಾ ಖಾವೂಂಗಾ ನಾ ಖಾನೇದೂಂಗಾ ಎಂದು ಭಾಷಣ ಮಾಡಿದ್ದರು. ಆದರೆ ರಾಜ್ಯದಲ್ಲಿ ನಾನು ತಿನ್ನುತ್ತೇನೆ, ಎಲ್ಲರಿಗೂ ತಿನ್ನಿಸುತ್ತೇನೆ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಶಾಂತ್, ರಾಜೇಂದ್ರ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಲ್ಲರೂ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು? ಕಾರಣ, ಈ ಸರ್ಕಾರದಲ್ಲಿ 40% ಕಮಿಷನ್ ಇಲ್ಲದೆ ಯಾವುದೇ ಕೆಲಸಗಳು ನಡೆಯುವುದಿಲ್ಲ ಎಂದು ದೂರಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಬಿಜೆಪಿಯವರು ಹಿಂದೂಗಳ ಪರವಾಗಿರುವವರಲ್ಲ. ಹಿಂದುತ್ವದ ಪರವಾಗಿರುವವರು. ನಾನು ಕೂಡ ಅಪ್ಪಟ ಹಿಂದೂ, ಡಿ.ಕೆ. ಶಿವಕುಮಾರ್, ಸುರ್ಜೆವಾಲ, ಬಿ.ಕೆ. ಹರಿಪ್ರಸಾದ್, ವೀರಪ್ಪ ಮೋಯ್ಲಿ ಇವರೆಲ್ಲರೂ ಅಪ್ಪಟ ಹಿಂದೂಗಳೇ. ಆದರೆ ನಾವು ಹಿಂದುತ್ವವಾದಿಗಳಲ್ಲ, ಹಿಂದೂ ಧ್ರಮ, ಹಿಂದೂಗಳ ಪರವಾಗಿರುವವರು. ಅಂತದರೆ ಮನುಷ್ಯತ್ವದ ಪರವಾಗಿರುವವರು ಎಂದರ್ಥ. ಮನುಷ್ಯ, ಮನುಷ್ಯನನ್ನು ದ್ವೇಷಿಸಬಾರದು, ಪ್ರೀತಿಸಬೇಕು. ಯಾವುದೇ ಧರ್ಮ, ಜಾತಿಯವರಾದರೂ ಎಲ್ಲರೂ ಮನುಷ್ಯರು. ಯಾವ ಧರ್ಮ ಮನುಷ್ಯರನ್ನು ಕೊಲ್ಲು, ಹಿಂಸೆ ನೀಡು ಎಂದು ಹೇಳುತ್ತದೆಯೇ? ಈ ಬಿಜೆಪಿಯವರು ಹಿಂದೂ ಧರ್ಮದ ಹೆಸರಲ್ಲಿ ಕಿಚ್ಚು ಹಚ್ಚುತ್ತಿದ್ದಾರೆ ಎಂದರು.

ಕೊಲೆಯಾದರೆ ಹೆಣಗಳ ಮೇಲೆ ರಾಜಕೀಯ ಮಾಡುತ್ತಾರೆ. ನಿಮಗೆ ಪರೇಶ್ ಮೇಸ್ತಾ ಎಂಬಾತ ಆಕಸ್ಮಿಕವಾಗಿ ಸತ್ತಿದ್ದು, ಅದನ್ನು ಕೊಲೆ ಎಂದು ಬಿಂಬಿಸಿ ಇಲ್ಲಸಲ್ಲದ ಅಪಪ್ರಚಾರ ಮಾಡಿದ್ದು ಲೋಕಸಭಾ ಸದಸ್ಯರು. ಇವರು ಲೋಕಸಭಾ ಸದಸ್ಯರಾಗಲು ಲಾಯಕ್ಕಾ, ನಾಲಾಯಕ್ಕಾ ಎಂದು ಜನ ಅರ್ಥ ಮಾಡಿಕೊಳ್ಳಬೇಕು. ನಾನು ಮುಖ್ಯಮಂತ್ರಿಯಾಗಿದ್ದಾಗ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಿದ್ದೆ, ಅದರ ತನಿಖೆ ವರದಿಯಲ್ಲಿ ಏನಿದೆ? ಪರೇಶ್ ಮೇಸ್ತಾ ಸಾವು ಸಹಜ. ಅದು ಕೊಲೆಯಲ್ಲ ಎಂದು ಹೇಳಿದೆ. ಸಿಬಿಐ ಯಾರ ನಿಯಂತ್ರಣದಲ್ಲಿದೆ ಅಮಿತ್ ಶಾ, ಮೋದಿ ಅವರ ನಿಯಂತ್ರಣದಲ್ಲಿ. ಅದನ್ನು ನೀವು ವಿವಾದ ಮಾಡುತ್ತೀರಲ್ಲಾ, ನಿಮಗೆ ನಾಚಿಕೆ ಮಾನ ಮರ್ಯಾದೆ ಇದೆಯಾ? ಎಂದು ಪ್ರಶ್ನಿಸಿದರು.

ಬಿಜೆಪಿ ಅಧ್ಯಕ್ಷ ದಕ್ಷಿಣ ಕನ್ನಡ ಜಿಲ್ಲೆಯವನು, ನಾನು ಅವನ್ನು ವಿದೂಶಕ ಎನ್ನುತ್ತೇನೆ. ಅವನು ಬಿಜೆಪಿ ಅಧ್ಯಕ್ಷನಾಗಲು ಲಾಯಕ್ಕಲ್ಲಾ. ಆತ ಇತ್ತೀಚೆಗೆ ರಸ್ತೆ, ಚರಂಡಿ ಬಗ್ಗೆ ಮಾತನಾಡಬೇಡಿ, ಲವ್ ಜಿಹಾದ್ ಬಗ್ಗೆ ಮಾತನಾಡಿ ಎನ್ನುತ್ತಾನೆ. ನೀವು ಈ ಹೇಳಿಕೆ ಕೇಳಿದ ಮೇಲೂ ಎಚ್ಛೆತ್ತುಕೊಳ್ಳದಿದ್ದರೆ ಏನು ಹೇಳಬೇಕು? ಈ ಕರಾವಳಿ ಪ್ರದೇಶದ ಜನರನ್ನು ಹೇಗೆ ಮನವಿ ಮಾಡಬೇಕು? ನಿಮಗೆ ಕ ಮುಗಿದು ಕೇಳಿಕೊಳ್ಳುತ್ತೇನೆ, ಅವರ ಮಾತಿಗೆ ಮರುಳಾಗಬೇಡಿ, ಅವರು ನಿಮ್ಮ ದಾರಿ ತಪ್ಪಿಸುತ್ತಾರೆ. ನಿಮ್ಮ ಭವಿಷ್ಯ ನಾಶ ಮಾಡುತ್ತಾರೆ. ಇಲ್ಲಿ ಹಿಂದುಳಿದ ಜಾತಿ, ಬಡವರು ಇದ್ದಾರೆ ಎಂದವರು ಹೇಳಿದರು.

 

 

Leave a Reply

Your email address will not be published. Required fields are marked *

error: Content is protected !!