ನಾಳೆ ಬಿಜೆಪಿ ಸರ್ಕಾರದ ‘ಬಜೆಟ್’ ಮಂತ್ರ.. ಕಾಂಗ್ರೆಸ್‌ನಿಂದ ಕಾದು ನೋಡುವ ತಂತ್ರ.

ಬಿಜೆಪಿ ಸರ್ಕಾರದ ‘ಬಜೆಟ್’ ಮಂತ್ರ

ಬೆಂಗಳೂರು: ನಾಳೆ ಬೆಳಗ್ಗೆ ಸರ್ಕಾರ ಬಜೆಟ್ ಮಂಡನೆ ಮಾಡುತ್ತಿದ್ದು, ಈ ಮೂಲಕ ಆಡಳಿತಾರೂಢ ಬಿಜೆಪಿ ಬಜೆಟ್ ಮಂತ್ರ ಪಠಿಸಲಾರಂಭಿಸಿದೆ. ಇದೇ ವೇಳೆ, ಬಿಜೆಪಿಯ ಬಜೆಟ್ ಪ್ರಚಾರ ತಂತ್ರವನ್ನು ಕಾಂಗ್ರೆಸ್ ಕಾದುನೋಡುತ್ತಿದೆ. ಇದೇ ವೇಳೆ, ಇದು ಈ ಸರ್ಕಾರದ ಕೊನೆ ಬಜೆಟ್ ಹಾಗೂ ಪ್ರಣಾಳಿಕಾ ಬಜೆಟ್ ಆಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮೈಸೂರು ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಈ ಸರ್ಕಾರ ಕಳೆದ ವರ್ಷ ಮಾಡಿದ ಬಜೆಟ್ ಕೇವಲ ಘೋಷಣೆ, ಭರವಸೆ, ಭಾಷಣಕ್ಕೆ ಸೀಮಿತವಾಗಿತ್ತು. ಡಬಲ್ ಇಂಜಿನ್ ಸರ್ಕಾರ ವೇಗವಾಗಿ ರಾಜ್ಯದ ಅಭಿವೃದ್ಧಿ ಮಾಡಲಿದೆ ಎಂದು ಭಾವಿಸಿದ್ದೆವು. ಆದರೆ ಈ ಇಂಜಿನ್ ಆರಂಭವಾಯಿತೇ ಹೊರತು, ಮುಂದಕ್ಕೆ ಹೋಗಲೇ ಇಲ್ಲ. ಬರೀ ಹೊಗೆ ಬಂತು ಎಂದಿದ್ದಾರೆ.
ಕಳೆದ ವರ್ಷದ ಬಜೆಟ್ ಪುಸ್ತಕ ತೆಗೆದುನೋಡಿ. ಅದರಲ್ಲಿ ಜನರಿಗೆ ಕೊಟ್ಟ ಮಾತಿನಲ್ಲಿ ಎಷ್ಟು ಅನುಷ್ಠಾನಕ್ಕೆ ತಂದಿದ್ದಾರೆ ಎಂಬುದನ್ನು ವಿಶ್ಲೇಷಣೆ ಮಾಡಿ. ಬೊಮ್ಮಾಯಿ ಅವರು ಹೊಸ ಬಜೆಟ್ ಮಂಡಿಸುವ ಮುನ್ನ ಕಳೆದ ವರ್ಷದ ಬಜೆಟ್ ಜಾರಿ ಕುರಿತು ಇಂದು ಸಂಜೆ ಒಳಗಾಗಿ ರಿಪೋರ್ಟ್ ಕಾರ್ಡ್ ನೀಡಬೇಕು. ಆಮೂಲಕ ಎಷ್ಟರ ಮಟ್ಟಿಗೆ ನುಡಿದಂತೆ ನಡೆದಿದ್ದಾರೆ ಎಂದು ತಿಳಿಸಬೇಕು. ಈ ಸರ್ಕಾರ ಮೂರು ಬಜೆಟ್ ಮಂಡನೆ ಮಾಡಿದ್ದು, ಯಾವುದನ್ನೂ ಸರಿಯಾಗಿ ಜಾರಿ ಮಾಡಿಲ್ಲ. ಅದಕ್ಕೆ ಕಾರಣವೇನು? ನಿಮ್ಮ ಬಳಿ ಅಧಿಕಾರ ಇಲ್ಲವೇ? ಆಡಳಿತ ಯಂತ್ರ ಇಲ್ಲವೇ? ಮಂತ್ರಿಗಳು ಕೆಲಸ ಮಾಡುತ್ತಿಲ್ಲವೇ? ಅಧಿಕಾರಿಗಳು ಸ್ಪಂದಿಸುತ್ತಿಲ್ಲವೇ? ಶಾಸಕರ ಜಂಜಾಟದಲ್ಲಿ ರಾಜ್ಯ ಮುನ್ನಡೆಸಲು ಆಗುತ್ತಿಲ್ಲವೇ? ಈ ವಿಚಾರವಾಗಿ ಬೊಮ್ಮಾಯಿ ಅವರು ಸ್ಪಷ್ಟನೆ ನೀಡಬೇಕು ಎಂದರು.
ನಾವು ಬಜೆಟ್ ವಿಚಾರದಲ್ಲಿ ಸುಳ್ಳು ಆರೋಪ ಮಾಡಲು ಸಾಧ್ಯವಿಲ್ಲ. 2018 ರ ಬಿಜೆಪಿ ಪ್ರಣಾಳಿಕೆಯಲ್ಲಿ ಶೇ.91ರಷ್ಟು ಈಡೇರಿಸಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ರೈತರ ರಾಷ್ಟ್ರೀಕೃತ ಬ್ಯಾಂಕ್, ಸಹಕಾರಿ ಬ್ಯಾಂಕ್ ಗಳಲ್ಲಿ 1 ಲಕ್ಷ ವರೆಗಿನ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ಯಡಿಯೂರಪ್ಪನವರೇ, ರೈತರ ಶಾಲು ಹಾಕಿಕೊಂಡು ಪ್ರಮಾಣ ವಚನ ಸ್ವೀಕರಿಸಿ ಯಾಕೆ ಮೋಸ ಮಾಡಿದ್ದೀರಿ. ಇನ್ನು ರೈತರಿಗೆ ಬೆಂಬಲ ಬೆಲೆ ನೀಡುವುದಾಗಿ ಭರವಸೆ ನೀಡಿ ಅದನ್ನು ಈಡೇರಿಸಿಲ್ಲ ಯಾಕೆ? ಇನ್ನು ರೈತ ಬಂಧು ನಿಧಿ ಸ್ಥಾಪಿಸುವುದಾಗಿ ಹೇಳಿದ್ದಿರಿ. ರೈತರ ಪಂಪ್ ಸೆಟ್ ಗಳಿಗೆ 10 ಗಂಟೆಗಳ ಕಾಲ 3 ಫೇಸ್ ವಿದ್ಯುತ್ ನೀಡುವ ಭರವಸೆ ನೀಡಿದ್ದಿರಿ. ಯಾಕೆ ನೀಡಿಲ್ಲ? ನಾವು ಉಚಿತ ವಿದ್ಯುತ್ ನೀಡುತ್ತೇವೆ ಎಂದಾಗ ಪ್ರಶ್ನಿಸುವ ಸಚಿವ ಸುನೀಲ್, ಸಿಎಂ ಬೊಮ್ಮಾಯಿ ಹಾಗೂ ಯಡಿಯೂರಪ್ಪನವರೇ ನೀವು ಯಾಕೆ ಈ ಭರವಸೆ ನೀಡಿದ್ದೀರಿ? ಎಂದು ಡಿಕೆಶಿ ಪ್ರಶ್ನಿಸಿದರು.
ಒಂದು ಕಡೆ ಪ್ರಣಾಳಿಕೆ, ಮತ್ತೊಂದು ಕಡೆ ಮೂರು ಬಜೆಟ್ ಗಳಲ್ಲಿ ನೀಡಿದ ಭರವಸೆಯನ್ನು ಈ ಸರ್ಕಾರ ಈಡೇರಿಸಿಲ್ಲ. ಈ ವಿಚಾರವಾಗಿ ಇದುವರೆಗೂ ನಾವು 170 ಪ್ರಶ್ನೆ ಕೇಳಿದ್ದು, ಒಂದಕ್ಕೂ ಉತ್ತರ ನೀಡಿಲ್ಲ. ನಿಮಗೆ ಬಡವರು, ರೈತರು, ಕಾರ್ಮಿಕರು, ಮಹಿಳೆಯರು, ವ್ಯಾಪಾರಿಗಳು, ಯುವಕರ ಬಗ್ಗೆ ಬದ್ಧತೆ ಇಲ್ಲದಿದ್ದರೆ ಚುನಾವಣೆಯಲ್ಲಿ ಮತ ಕೇಳಲು ಸಂಕಲ್ಪ ಯಾತ್ರೆ ಯಾಕೆ ಮಾಡುತ್ತಿದ್ದೀರಿ? ನಿಮ್ಮ ಪ್ರಣಾಳಿಕೆ ನಿಮ್ಮ ಸಂಕಲ್ಪ ಅಲ್ಲವೇ? ಈ ಸರ್ಕಾರ ಕೇವಲ ವಂಚನೆ ಮಾಡುವುದರಲ್ಲಿ ಕಾಲ ಕಳೆದಿದೆ. ಈ ಸರ್ಕಾರ ಕೊಟ್ಟ ಮಾತು ಉಳಿಸಿಕೊಳ್ಳದಿದ್ದರೆ, ನೀವು ಅಧಿಕಾರದಲ್ಲಿ ಮುಂದುವರಿಯಲು ಲಾಯಕ್ಕಿಲ್ಲ ಎಂದರು.


ಈ ಬಜೆಟ್ ಮಂಡನೆ ನಂತರ ಮುಂದಿನ ತಿಂಗಳು 7ರ ನಂತರ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ. ಹೀಗಾಗಿ ಈ ಬಜೆಟ್ ನಿಮ್ಮ ಭಾಷಣದ ಸರಕಾಗಿ ಬಳಕೆಯಾಗಲಿದೆ. ಈ ಸರ್ಕಾರದಿಂದ 90% ರಷ್ಟು ವಚನ ವಂಚನೆಯಾಗಿದೆ. ಮಹಿಳೆಯರಿಗೆ ಸ್ತ್ರೀ ಉನ್ನತಿ ನಿಧಿ ಮೂಲಕ 10 ಸಾವಿರ ಕೋಟಿ ನೀಡುವುದಾಗಿ ಹೇಳಿದಿರಿ, ಉಚಿತ ಸ್ಮಾರ್ಟ್ ಫೋನ್ ನೀಡುವುದಾಗಿ ಹೇಳಿದಿರಿ. ಆದರೆ ಯಾವುದನ್ನೂ ನೀಡಿಲ್ಲ. ಮಹಿಳೆಯರಿಗೆ ನೀಡಿದ 26 ಭರವಸೆಗಳಲ್ಲಿ 24 ನ್ನು ಈಡೇರಿಸಲು ಆಗಲಿಲ್ಲ. ರಾಜ್ಯದ ಯುವಕರಿಗೆ ಕೊಟ್ಟ 18 ಭರವಸೆಗಳಲ್ಲಿ 17 ಭರವಸೆ ಈಡೇರಿಸಲು ಸರ್ಕಾರ ವಿಫಲವಾಗಿದ್ದೇಕೆ? ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆ ಭರ್ತಿಯಾಗಿಲ್ಲ ಯಾಕೆ? ಪಧವಿವರೆಗೂ ಉಚಿತ ಶಿಕ್ಷಣ ನೀಡುವ ಭರವಸೆಯನ್ನು ಕಸದಬುಟ್ಟಿಗೆ ಎಸೆದಿರುವುದೇಕೆ? ಎಂದು ಡಿಕೆಶಿ ಪ್ರಶ್ನಿಸಿದರು.
ಎಸ್ಸಿ/ಎಸ್ಟಿ/ಒಬಿಸಿ ಮಕ್ಕಳಿಗೆ 4500 ಕೋಟಿಯ ವಿದ್ಯಾರ್ಥಿ ವೇತನ ಎಲ್ಲಿದೆ? ಎಸ್ಸಿ/ಎಸ್ಟಿ/ಒಬಿಸಿ ಸಮುದಾಯಕ್ಕೆ ಘೋಷಿಸಿದ್ದ ರೂ. 15,000 ಕೋಟಿ ವೆಚ್ಚದ ವಸತಿ ನಿರ್ಮಾಣ ಭರವಸೆ ಪೂರ್ಣಗೊಂಡಿಲ್ಲ ಏಕೆ? ಗುಡಿಸಲು ಮುಕ್ತ ರಾಜ್ಯ ಮಾಡುತ್ತೇವೆ ಎಂದು ಹೇಳಿದಿರಿ ಎಲ್ಲಿ ಗುಡಿಸಲು ಮುಕ್ತವಾಗಿದೆ? ಈ ಸರ್ಕಾರ ಕೇವಲ ಬರೀ ಬೊಗಳೆ ಮಾತುಗಳನ್ನು ಹೇಳುತ್ತಿದೆ ಎಂದ ಅವರು, ಬಜೆಟ್ನಲ್ಲಿ ಘೋಷಿಸಲಾದ 339 ಭರವಸೆಗಳ ಪೈಕಿ 207 ಭರವಸೆಗಳು ಸರ್ಕಾರಿ ಆದೇಶಕ್ಕೆ ಮಾತ್ರ ಸೀಮಿತವಾಗಿದ್ದರೆ ಉಳಿದ 132 ಭರವಸೆಗಳು ಅನುಷ್ಠಾನಕ್ಕೇ ತಂದಿಲ್ಲ ಏಕೆ? ಎಂದು ಪ್ರಶ್ನಿಸಿದರು.
ಕಳೆದ ಬಜೆಟ್ ನಲ್ಲಿ ಘೋಷಿಸಲಾದ ಅನುದಾನಗಳ ಪೈಕಿ ಕೇವಲ 56% ಮಾತ್ರ ಬಳಕೆ ಮಾಡಿರುವುದು ಏಕೆ? (2.5 ಲಕ್ಷ ಕೋಟಿ ಪೈಕಿ 1.4 ಲಕ್ಷ ಕೋಟಿ ಮಾತ್ರ ಬಳಕೆಯಾಗಿದೆ.) ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ನೀಡಿದ್ದ 3000 ಕೋಟಿ ರೂಪಾಯಿಗಳ ಅನುದಾನ ಪೈಕಿ ಬಸವರಾಜ ಬೊಮ್ಮಾಯಿ 50% ಅನುದಾನವನ್ನೂ ಬಳಸಿಲ್ಲ ಏಕೆ? ಎಂದ ಅವರು, ಮೀಸಲಾತಿ ವಿಚಾರದಲ್ಲಿ ತರಾತುರಿಯಲ್ಲಿ ಸುಗ್ರೀವಾಜ್ಞೆ ತಂದು, ಸಂವಿಧಾನದಲ್ಲಿ ತಿದ್ದುಪಡಿ ತರಲು ಸಾಧ್ಯವಾಗಿಲ್ಲ ಯಾಕೆ? ಮೃತ್ಯುಂಜಯ ಸ್ವಾಮೀಜಿಗಳು ಹೇಳಿದಂತೆ ಮೀಸಲಾತಿ ವಿಚಾರದಲ್ಲಿ ಈ ಸರ್ಕಾರ ತಲೆಗೆ ತುಪ್ಪ ಸವರಿದೆ. ತುಪ್ಪದ ವಾಸನೆಯೂ ಸಿಗುವುದಿಲ್ಲ, ರುಚಿಯು ಸಿಗುವುದಿಲ್ಲ. ಜತೆಗೆ ಒಕ್ಕಲಿಗರು, ಪಂಚಮಸಾಲಿಗಳಿಗೆ ಮೋಸ ಮಾಡುತ್ತಿದೆ ಎಂದು ದೂರಿದರು.

Leave a Reply

Your email address will not be published. Required fields are marked *

error: Content is protected !!