ದಾವಣಗೆರೆ: ನಗರದ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ಸಂಬಂಧಿಸಿದ ಕಾಮಗಾರಿ ನಡೆಸಿದ ಗುತ್ತಿಗೆದಾರರಿಂದ ಅಧಿಕಾರಿಗಳು ಲಂಚ ಪಡೆಯುತ್ತಿರುವ ಬಗ್ಗೆ ಆಡಿಯೋ ಹಾಗೂ ವಿಡಿಯೋ ಆದರಿಸಿ ನಾಲ್ವರು ಎಂಜಿನಿಯರ್ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ನಮ್ಮ ಹೋರಾಟ ಯಶಸ್ವಿಯಾಗಿದೆ ಎಂದು ಶ್ರೀ ರಾಮಸೇನೆ ಜಿಲ್ಲಾಧ್ಯಕ್ಷ ಮಣಿಕಂಠ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತಿಚೆಗೆ ನಗರದ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಕಾರ್ಯಪಾಲಕ ಅಭಿಯಂತರು ಹಾಗೂ ಅವರ ಸಹಾಯಕ ಎಂಜಿನಿಯರ್ ತಮ್ಮ ಕಚೇರಿಯಿಂದ ಮಂಜೂರಾದ ಕಾಮಗಾರಿಯ ಹಣವನ್ನು ಗುತ್ತಿಗೆದಾರರಿಗೆ ಬಿಡುಗಡೆ ಮಾಡಲು ಲಂಚ ಕೇಳಿದ್ದಾರೆ. ನಾನೂ ಕೂಡ ಈ ಅಧಿಕಾರಕ್ಕೆ ಬರಲು 25 ಲಕ್ಷ ಹಣ ನೀಡಿದ್ದೇನೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಅಧಿಕಾರಿಗಳ ಈ ವರ್ತನೆ ಸರಿಯಲ್ಲ ಎಂದರು.
ಈ ಬಗ್ಗೆ ಆಡಿಯೋ ಹಾಗೂ ವಿಡಿಯೋ ಲಭ್ಯವಿದೆ. ಈ ಬಗ್ಗೆ ಸಂಪೂರ್ಣ ದಾಖಲೆಗಳೊಂದಿಗೆ ಐಜಿಪಿಯವರಿಗೆ ಕ್ರಮ ವಹಿಸಬೇಕೆಂದು ಮನವಿ ಮಾಡಲಾಗಿದೆ. ಆದ್ದರಿಂದ ಇಲಾಖೆಯ ಅಧೀಕ್ಷಕ ಅಭಿಯಂತರ, ಕಾರ್ಯಪಾಲಕ ಅಭಿಯಂತರ, ಸಹಾಯಕ ಕಾರ್ಯಪಾಲಕ ಅಭಿಯಂತರ, ಸಹಾಯಕ ಅಭಿಯಂತರ ಇವರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಕಾರಣ ಪೊಲೀಸರು ಈ ಎಲ್ಲರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಇತ್ತೀಚಿನ ದಿನಗಳಲ್ಲಿ ದಾವಣಗೆರೆ ಮಹಾನಗಗರ ಪಾಲಿಕೆಯಲ್ಲಿ ಅಧಿಕಾರಿ ಸಿಬ್ಬಂದಿಯವರು ಸಾರ್ವಜನಿಕರಿಂದ ಲಂಚ ಪಡೆಯುವ ಸಮಯದಲ್ಲಿ ಲೋಕಾಯುಕ್ತ ಅಧಿಕಾರಿಗಳು ಟ್ರ್ಯಾಪ್ ಮೂಲಕ ಪ್ರಕರಣ ದಾಖಲಿಸಿರುತ್ತಾರೆ ಹಾಗೂ ಇದೇ ರೀತಿ ದಾವಣಗೆರೆ ವಿಶೇಷ ಭೂ-ಸ್ವಾಧೀನ ಅಧಿಕಾರಿ, ಹರಿಹರ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಮಹಿಳಾ ಮಕ್ಕಳ ಸ್ನೇಹಿ ನ್ಯಾಯಾಲಯದ ಎಸ್.ಪಿ.ಪಿ.ಯವರು ಸಹ ಲಂಚ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಆದರೂ ಅಧಿಕಾರಿಗಳು ಲಂಚ ಪಡೆಯುವುದನ್ನು ಬಿಡುತ್ತಿಲ್ಲ. ನೇರಾನೇರವಾಗಿ ತಮ್ಮ ಕಚೇರಿಯಲ್ಲಿಯೇ ಲಂಚ ಪಡೆಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
