KSRTC ಉದ್ಯೋಗಿಗಳಿಗೆ ಬಜೆಟ್ ಬಂಪರ್.. 1 ಕೋಟಿಯ ವಿಮಾ ಯೋಜನೆ ಘೋಷಣೆ

KSRTC ಉದ್ಯೋಗಿಗಳಿಗೆ ಬಜೆಟ್ ಬಂಪರ್.. 1 ಕೋಟಿ
ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿದ್ದಾರೆ. ಈ ವಿಧಾನಸಭಾ ಅವಧಿಯ ಅಂತಿಮ ಬಜೆಟ್ ಇದಾಗಿದ್ದು, ಚುನಾವಣೆಗೆ ತಯಾರಿ ನಡೆದಿರುವಾಗಲೇ ಮಂಡನೆಯಾಗಿರುವ ಈ ಬಜೆಟ್‌ನಲ್ಲಿ ಭರವಸೆಯ ಮಹಾಮಳೆಯನ್ನೇ ಸರ್ಕಾರ ಹರಿಸಿದೆ.
ಈ ಬಾರಿಯ ಬಜೆಟ್ನಲ್ಲಿ ರಾಜ್ಯ ಸಾರಿಗೆ ನಿಗಮ ಸೇರಿದಂತೆ ಸಾರಿಗೆ ವಲಯಕ್ಕೆ ಕೊಡುಗೆ ಪ್ರಕಟಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಕೆಎಸ್ಸಾರ್ಟಿಸಿ ಸಮೂಹದ ನಿಗಮಗಳ ಸಿಬ್ಬಂದಿಗಾಗಿ ವಿಮಾ ಯೋಜನೆ ಘೋಷಿಸಿದ್ದಾರೆ. ಸಾರಿಗೆ ಸಂಸ್ಥೆಯ ಉದ್ಯೋಗಿಗಳಿಗೆ ಒಂದು ಕೋಟಿ ರೂಪಾಯಿ ವಿಮಾ ಯೋಜನೆಯನ್ನು ಅವರು ಘೋಷಿಸಿದ್ದಾರೆ.
ಇದೇ ವೇಳೆ, ಶಾಲೆಗೆ ಹೋಗುವ ವಿದ್ಯಾರ್ಥಿನಿಯರಿಗೆ ಆರ್ಥಿಕ ಸೌಲಭ್ಯ ನೀಡುವ ನಿಟ್ಟಿನಲ್ಲಿ ಹಾಗೂ ಕೆಲಸಕ್ಕೆ ತೆರಳುವ ಮಹಿಳೆಯರಿಗೆ ಅನುಕೂಲ ಕಲ್ಪಿಸುವ ಸಂಬಂಧ ಉಚಿತ ಪಾಸ್ ನೀಡುವ ಯೋಜನೆ ಜಾರಿಗೆ ತರಲಾಗುವುದು ಎಂದು ಸಿಎಂ ಬೊಮ್ಮಾಯಿ ಪ್ರಕಟಿಸಿದ್ದಾರೆ. ಯುವಜನರ ಮನವೊಲಿಸುವ ಕಸರತ್ತು ನಡೆಸಿರುವ ಸಿಎಂ, ಮಹಿಳಾ ಕಾರ್ಮಿಕರಿಗೆ 500 ರೂಪಾಯಿ ಸಹಾಯಧನ ಹಾಗೂ 50 ಲಕ್ಷ ಮಹಿಳೆಯರಿಗೆ ಉಚಿತ ಪಾಸ್ ನೀಡಲಾಗುವುದು ಎಂದು ತಿಳಿಸಿದ್ದಾರೆ.