ಉಡುಪಿಯ ಶಿಕ್ಷಣ,ಆರೋಗ್ಯ ಹಾಗೂ ಕ್ರೈಂ ಸುಧಾರಣೆಗೆ ಕ್ರಮ ವಹಿಸಲು ಮುಖ್ಯಮಂತ್ರಿಗಳ ಖಡಕ್ ಸೂಚನೆ
ಉಡುಪಿ : ಉಡುಪಿ ಹಾಗೂ ಮಂಗಳೂರು ಜಿಲ್ಲೆ ಶೈಕ್ಷಣಿಕವಾಗಿ ಮುಂಚೂಣಿಯಲ್ಲಿರುವ ಜಿಲ್ಲೆಗಳು.ಉಡುಪಿ ಜಿಲ್ಲೆ ಪ್ರಗತಿಪರಜಿಲ್ಲೆಯಾಗಿದ್ದರೂ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದ ಬೆಳವಣಿಗೆ ಕುಂಠಿತಗೊಂಡಿದೆ. ಜಿಲ್ಲೆಯ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದ ಸುಧಾರಣೆಗೆ ಕ್ರಮ ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಅವರು ಇಂದು ಉಡುಪಿಯಲ್ಲಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಿ ನಂತರ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದರು. ಉಡುಪಿ ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ವಾಡಿಕೆ ಮಳೆಗಿಂತ 53 % ಕಡಿಮೆ ಮಳೆಯಾಗಿದ್ದು, ಜುಲೈ ತಿಂಗಳಲ್ಲಿ ವಾಡಿಕೆ ಮಳೆಗಿಂತ ಶೇ. 25 ರಷ್ಟು ಹೆಚ್ಚು ಮಳೆಯಾಗಿದೆ. ಸುಮಾರು ಶೇ.79 ಬಿತ್ತನ ಕಾರ್ಯ ಮುಗಿದಿದೆ. ಬೀಜ , ಗೊಬ್ಬರ ರಸಾಯನಿಕಗಳಿಗೆ ಇಲ್ಲಿಯವರೆಗೆ ಕೊರತೆಯಾಗಿಲ್ಲ. ಬೆಳೆಹಾನಿ ಯಾಗಿದ್ದರೆ ಮರು ಬಿತ್ತನೆ ಅಥವಾ ಪರ್ಯಾಯ ಬೆಳೆ ಬೆಳೆಯಲು ಬೀಜ , ಗೊಬ್ಬರ ರಸಾಯನಿಕಗಳನ್ನು ಸರಬರಾಜು ಮಾಡಲು ಜಿಲ್ಲಾಧಿಕಾರಿಗಳು ಮತ್ತು ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಕಳೆದ ವರ್ಷ ಜುಲೈ ತಿಂಗಳ ವೇಳೆಗೆ ಶೇ. 75 ರಷ್ಟು ಬಿತ್ತನೆಯಾಗಿದ್ದು, ಈ ವರ್ಷ ಶೇ. 79 ರಷ್ಟು ಬಿತ್ತನೆಯಾಗಿದೆ. ಸುಮಾರು 10 ಜನರ ಪ್ರಾಣಿ ಹಾನಿಯಾಗಿದ್ದು, ಅವರಿಗೆ ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು.
ಕಾಲುಸಂಕಗಳ ನಿರ್ಮಾಣಕ್ಕೆ ಕ್ರಮ :
ಕಾಲುಸಂಕಗಳು ಸಮರ್ಪಕವಾಗಿಲ್ಲದಿರುವ ಕಾರಣ ಜನರ ಓಡಾಟಕ್ಕೆ ತೊಂದರೆಯಾಗಿದೆ. ಆದ್ದರಿಂದ ನರೇಗಾ ಮತ್ತು ಲೋಕೋಪಯೋಗಿ ಇಲಾಖೆಯವರು ಜಂಟಿಯಾಗಿ ಕಾಲು ಸಂಕಗಳ ನಿರ್ಮಾಣಕ್ಕಾಗಿ ಯೋಜನೆ ರೂಪಿಸಿ, ನಿರ್ಮಾಣ ಕಾರ್ಯ ಕೈಗೊಳ್ಳಲು ಸೂಚಿಸಲಾಗಿದೆ. ಒಂದು ಕಾಲಸಂಕ ನಿರ್ಮಿಸಲು ಸುಮಾರು 5 ರಿಂದ 10 ಲಕ್ಷ ರೂ.ಗಳು ವೆಚ್ಚವಾಗಲಿದೆ ಎಂದರು.
ಆರೋಗ್ಯ ಸೂಚ್ಯಂಕದಲ್ಲಿ ಕುಸಿತ : ಹಿಂದಿನ ನಮ್ಮ ಸರ್ಕಾರದ ಅವಧಿಯಲ್ಲಿ ಶಿಕ್ಷಣ ಇಲಾಖೆಯಲ್ಲಿ ಮೊದಲನೇ ಸ್ಥಾನದಲ್ಲಿದ್ದ ಉಡುಪಿ ಜಿಲ್ಲೆ 2023ರಲ್ಲಿ 13 ನೇ ಸ್ಥಾನಕ್ಕೆ ಇಳಿದಿದೆ. 2015 ರಲ್ಲಿ ಆರೋಗ್ಯ ಸೂಚ್ಯಂಕದಲ್ಲಿ ಒಂದನೇ ಸ್ಥಾನದಲ್ಲಿದ್ದ ಉಡುಪಿ ಜಿಲ್ಲೆ ಈಗ 19 ನೇ ಸ್ಥಾನಕ್ಕಿಳಿದಿದೆ. 2015-16 ರಲ್ಲಿ ತಾಯಂದಿರ ಮರಣ 1000 ಮಂದಿಗೆ 14 ಮಂದಿ ಇತ್ತು. 2021-22 ರಲ್ಲಿ ಮರಣ ಪ್ರಮಾಣ 126 ಕ್ಕೆ ಏರಿಕೆಯಾಗಿದ್ದು, 2023 ರಲ್ಲಿ 53 ಮರಣ ಸಂಭವಿಸಿದೆ , 2015-16 ರಲ್ಲಿ ಮಕ್ಕಳ ಸಾವಿನ ಪ್ರಮಾಣ 51 ಇದ್ದು , 2022-23 ರಲ್ಲಿ 166 ಮಕ್ಕಳು ಮರಣ ಹೊಂದಿದ್ದಾರೆ. ಇದು ನಮ್ಮ ಸರ್ಕಾರ ಮತ್ತು ಬಿಜೆಪಿ ಸರ್ಕಾರದ ವ್ಯತ್ಯಾಸವನ್ನು ಬಿಂಬಿಸುತ್ತದೆ ಎಂದು ವಿವರಿಸಿದರು.
ಕಡಲಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ : ಉಡುಪಿ, ದಕ್ಷಿಣ ಕನ್ನಡ , ಉತ್ತರ ಕನ್ನಡ ಜಿಲ್ಲೆಗಗಳಲ್ಲಿ ಕಡಲಕೊರತೆಗಳ ಸಮಸ್ಯೆ ಇದೆ. ಉಡುಪಿ ಜಿಲ್ಲೆಯಲ್ಲಿ 98 ಕಿಮೀ.ಗಳ ಕಡತ ತೀರವಿದೆ. 3 ಜಿಲ್ಲೆಗಳಲ್ಲಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಯೋಜನೆ ರೂಪಿಸಲು ಲೋಕೋಪಯೋಗಿ ಇಲಾಖೆಗೆ ಡಿಪಿಆರ್ ಮಾಡಲು ಸೂಚನೆ ನೀಡಲಾಗಿದೆ ಎಂದರು.
ಆಡಳಿತವನ್ನು ಚುರುಕುಗೊಳಿಸಲು ಸೂಚನೆ : ಉಡುಪಿ ಜಿಲ್ಲೆಯಲ್ಲಿ ಸೈಬರ್ ಕ್ರೈಂ, ರಸ್ತೆ ಅಪಘಾತಗಳು, ಸಾವಿನ ಪ್ರಮಾಣ ಹೆಚ್ಚಿದ್ದು, ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳುವುದರ ಜೊತೆಗೆ , ಲೋಕೋಪಯೋಗಿ ಇಲಾಖೆಯವರು ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ರಸ್ತೆ ದುರಸ್ತಿ ಕಾರ್ಯವನ್ನು ಕೈಗೊಳ್ಳಲು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಜಿಲ್ಲಾಮಟ್ಟದ ಆಡಳಿತವನ್ನು ಚುರುಕುಗೊಳಿಸಲು ನಿರ್ಲಕ್ಷ್ಯತನ, ಉದಾಸೀನತೆ ತೋರುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೊಳ್ಳಲಾಗುವುದು ಎಂದರು.