ಚಿತ್ರದುರ್ಗ: ವೀಲಿಂಗ್ ಬೇಡ ಎಂದಿದ್ದಕ್ಕೆ ಕೋಪಗೊಂಡು ಕೊಲೆ
ಚಿತ್ರದುರ್ಗ: ವೀಲಿಂಗ್ ಮಾಡುವುದು ಬೇಡ ಎಂದು ಹೇಳಿದ ಚಿಕ್ಕ ಕಾರಣಕ್ಕೆ ಕುಪಿತಗೊಂಡ ಗುಂಪು ಯವಕನೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ.
ಚಿತ್ರದುರ್ಗದ ಕರುವಿನಕಟ್ಟೆ ವೃತ್ತದಲ್ಲಿ ಈ ಘಟನೆ ನಡೆದಿದೆ. ಕಬೀರಾನಂದ ನಗರದ ಕರುವಿನಕಟ್ಟೆ ವೃತ್ತದ ನಿವಾಸಿ ಎಸ್. ಮಾರುತಿ (23) ಕೊಲೆಯಾದ ಯುವಕ. ಕಾಮನಬಾವಿ ಬಡಾವಣೆಯ ಕೊರಚರಹಟ್ಟಿಯ ಜೀವನ್, ಅಂಜಿನಿ ಹಾಗೂ ಇತರರು ಈ ಕೃತ್ಯ ಎಸಗಿದ್ದಾರೆ.
ಜೀವನ್, ಅಂಜಿನಿ ಹಾಗೂ ಸ್ನೇಹಿತರು ದೀಪಾವಳಿ ಸಂದರ್ಭದಲ್ಲಿ ಕರುವಿನಕಟ್ಟೆ ವೃತ್ತದಲ್ಲಿ ದ್ವಿಚಕ್ರ ವೀಲಿಂಗ್ ಮಾಡುತ್ತಿದ್ದರು. ವೃತ್ತ ಜನನೀಬಿಡ ಸ್ಥಳವಾಗಿದ್ದು, ಚಿಕ್ಕಮಕ್ಕಳಿಗೆ ತೊಂದರೆಯಾಗಬಹುದು ಎಂದು ವೀಲಿಂಗ್‌ಗೆ ಮಾರುತಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಬೈದು ಬುದ್ದಿ ಹೇಳಿದ್ದರು ಎಂದು ನಗರ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದರಿಂದ ಮಾರುತಿ ಮೇಲೆ ಯುವಕರ ಗುಂಪು ಹಗೆ ಸಾಧಿಸಿದೆ. ಶನಿವಾರ ರಾತ್ರಿ 10.30ರ ಸುಮಾರಿಗೆ ಕಾಮನಬಾವಿ ಬಡಾವಣೆಯ ಕಾಳಮ್ಮ ದೇಗುಲದ ಬಳಿ ಮಾರುತಿಯೊಂದಿಗೆ ಗಲಾಟೆ ಮಾಡಿದ್ದಾರೆ. ಎದೆ ಹಾಗೂ ದೇಹದ ಇತರೆಡೆಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆಗೆ ಸ್ಪಂದಿಸದೇ ಭಾನುವಾರ ಬೆಳಿಗ್ಗೆ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.