ಬೆಳಗಾವಿ: ಅತಿ ಶೀಘ್ರದಲ್ಲೇ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ತಲೆದೋರಬಹುದು ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಸೋಮವಾರ ಬಿಜೆಪಿ ಮುಖಂಡರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಎರಡೇ ದಿನದಲ್ಲಿ ಅಧಿಕಾರದ ಅಮಲು ಹೆಚ್ಚಾಗಿದೆ. ಜನರ ವಾಕ್ ಸ್ವಾತಂತ್ರ್ಯ ಕಿತ್ತುಕೊಂಡ ರೀತಿಯಲ್ಲಿ ಮಂತ್ರಿಗಳು ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್‌ನವರು ತುರ್ತುಪರಿಸ್ಥಿತಿ ಹೇರಿದರೂ ಬಿಜೆಪಿ ಅದಕ್ಕೆ ಅವಕಾಶ ನೀಡುವುದಿಲ್ಲ. ಜನರ ಪರವಾಗಿ ನಿಂತು ಹೋರಾಡುತ್ತದೆ ಎಂದರು.
ಗೋಹತ್ಯೆ ನಿಷೇಧ, ಪಠ್ಯಪುಸ್ತಕ ಪರಿಷ್ಕೃರಣೆ ಮುಂತಾದ ವಿಷಯಗಳ ಕುರಿತು ಮಂತ್ರಿಗಳು ಬೇಕಾಬಿಟ್ಟಿ ಮಾತನಾಡುತ್ತಿದ್ದಾರೆ. ಯಾರಾದರೂ ಸರ್ಕಾರನ್ನು ಪ್ರಶ್ನಿಸಿದರೆ ಜೈಲಿಗೆ ಹಾಕುತ್ತೇವೆ ಎಂದು ಹೆದರಿಸುತ್ತಿದ್ದಾರೆ. ಅಧಿಕಾರದ ಅಮಲು ಇಷ್ಟು ಬೇಗೆ ನೆತ್ತಿಗೇರಿದೆ ಎಂದು ದೂರಿದರು.
ಗೋ ಹತ್ಯೆ ನಿಷೇಧ ಕಾಯ್ದೆ 1965ರಿಂದಲೂ ಇದೆ. ನಾವು ತಿದ್ದುಪಡಿ ಮಾಡಿ ಶಿಕ್ಷೆ ಕಠಿಣಗೊಳಿಸಿದ್ದೇವೆ ಅಷ್ಟೇ. ಗೋವಿನ ವಿಷಯಕ್ಕೆ ಬಂದರೆ ಕಾಂಗ್ರೆಸ್‌ಗೆ ಆಪತ್ತು ಕಾದಿದೆ ಎಂದೂ ಎಚ್ಚರಿಸಿದರು.
