ಕರೋನಾ ಮೂರನೇ ಅಲೆಯಲ್ಲಿ ಮಕ್ಕಳ ರಕ್ಷಣೆಗಾಗಿ ಜಿಲ್ಲೆಯಲ್ಲಿ 9 ಕಡೆ ಮಕ್ಕಳ ಕೋವಿಡ್ ಕೇರ್ ಸೆಂಟರ್ ವ್ಯವಸ್ಥೆ – ಸಚಿವೆ ಶಶಿಕಲಾ ಜೊಲ್ಲೆ

ದಾವಣಗೆರೆ: ಕರೋನಾ ಮೂರನೇ ಅಲೆಯಲ್ಲಿ ಮಕ್ಕಳ ರಕ್ಷಣೆಗಾಗಿ ಜಿಲ್ಲೆಯಲ್ಲಿ 9 ಕಡೆ ಮಕ್ಕಳ ಕೋವಿಡ್ ಕೇರ್ ಸೆಂಟರ್ ವ್ಯವಸ್ಥೆ ಮತ್ತು ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳಿಗೆ 60 ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.
ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳೊಂದಿಗೆ ಕೋವಿಡ್ 3ನೇ ಅಲೆಗೆ ಸಿದ್ಧತೆ ಕುರಿತು ಸಭೆ ನಡೆಸಿದ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 16 ವರ್ಷದೊಳಗಿನ ಒಟ್ಟು 2,48,360 ಮಕ್ಕಳಿದ್ದು, ಮೊದಲ ಮತ್ತು ಎರಡನೇ ಅಲೆಯಲ್ಲಿ 4,158 ಮಕ್ಕಳು ಸೋಂಕಿಗೆ ತುತ್ತಾಗಿದ್ದು, ಅದೃಷ್ಟವಾಷಾತ್ ಯಾವುದೇ ಸಾವು ಸಂಭವಿಸಿಲ್ಲ. ಮೂರನೇ ಅಲೆಯಲ್ಲೂ ಮಕ್ಕಳಿಗೆ ಅಗತ್ಯ ವೈದ್ಯಯ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ನಾಲ್ಕು ತಾಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಮಕ್ಕಳಿಗೆ ತಲಾ 10 ಆಕ್ಸಿಜನ್ ಬೆಡ್ ವ್ಯವಸ್ಥೆ,
ಎನ್‌ಐಸಿಯು ಹಾಗೂ ಪಿಐಸಿಯು ಸೌಲಭ್ಯ ವೃದ್ಧಿಸುವ ಕಾರ್ಯ, ಜಿಲ್ಲಾಸ್ಪತ್ರೆಗೆ 60 ವೆಂಟಿಲೇಟರ್‌ಗೆ ಬೇಡಿಕೆ ಸಲ್ಲಿಕೆಯಾಗಿದೆ ಎಂದು ಮಾಹಿತಿ ನೀಡಿದರು.
3ನೇ ಅಲೆಗೆ ಅಪೌಷ್ಟಿಕ ಮಕ್ಕಳು ತುತ್ತಾಗುವ ಭೀತಿ ಇರುವುದರಿಂದ ಅಂತಹ ಮಕ್ಕಳಿಗೆ ಹಾಗೂ ಅವರ ತಾಯಿಗೆ ಪೌಷ್ಠಿಕ ಆಹಾರ ಸರಬರಾಜು ಮಾಡಲಾಗುತ್ತದೆ ಎಂದರು.
ಮಿಸ್ಸಿ ಖಾಯಿಲೆ ಸಂಬಂಧಿಸಿದಂತೆ ಖಾಸಗಿ ಆಸ್ಪತ್ರೆಯಲ್ಲಿ 1 ಪ್ರಕರಣ ದಾಖಲಾಗಿದೆ. ಪೋಷಣ ಅಭಿಯಾನದಲ್ಲಿ ಉತ್ತಮ ಸಾಧನೆಯಾಗಿದ್ದು, ಅಪೌಷ್ಠಿಕತೆ ನಿರ್ಮೂಲನೆಯಲ್ಲಿ 35ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಏರಿಕೆ ಕಂಡಿದೆ. ಇನ್ನೂ ಹೆಚ್ಚಿನ ಸಾಧನೆಗೆ ಕೋವಿಡ್‌ನಿಂದ ತಡೆಯಾಗಿದೆ ಎಂದರು.
ಅಧಿಕಾರಿಗಳಿಂದ ಪೂರಕ ಪೌಷ್ಠಿಕ ಆಹಾರ ದುರ್ಬಳಕೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಚಿಕ್ಕಬಳ್ಳಾಪುರದಲ್ಲಿ ಇಂಥ ಪ್ರಕರಣದಲ್ಲಿ ಅಧಿಕಾರಿಗಳು ಭಾಗಿಯಾಗಿದ್ದರು, ಅವರ ವಿರುದ್ಧ ಕಾನೂನು ಜರುಗಿಸಿದ್ದೇವೆ. ಅದೇ ಮಾದರಿಯನ್ನು ಎಲ್ಲ ಜಿಲ್ಲೆಗಳಲ್ಲೂ ಅನುಸರಿಸಲಾಗುವುದು. ಪೂರಕ ಪೌಷ್ಠಿಕ ಆಹಾರ ತಯಾರಿಕೆ ಕೇಂದ್ರದಲ್ಲಿ ಪಾರದರ್ಶಕ ನೀತಿ ಜಾರಿಗೊಳಿಸುತ್ತೇವೆ. ಇದಕ್ಕಾಗಿ ಆನ್‌ಲೈನ್ ಇಂಡೆಂಟ್ ಕ್ರಮ ಜಾರಿಗೊಳಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಶಾಲೆಗಳ ಪುನಾರಂಭದ ಬಗ್ಗೆ ಪ್ರತಿಕ್ರಿಯಿಸಿದ ಅವರು, 2 ವರ್ಷದಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದು, ಶಿಕ್ಷಣ ಸಚಿವರೊಂದಿಗೆ ಚರ್ಚೆ ಮಾಡಿದ್ದೇನೆ. ನಿರಂತರ ಪ್ರವಾಸದಲ್ಲಿರುವ ಹಿನ್ನೆಲೆ ಪ್ರಸ್ತುತ, ಮಾಹಿತಿ ಕೊರತೆ ಇದೆ. ಸೋಂಕು ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲೆಗಳನ್ನು ಆರಂಭಿಸಬಹುದು ಎಂದು ಜೊಲ್ಲೆ ಅಭಿಪ್ರಾಯ ವ್ಯಕ್ತಪಡಿಸಿದರು.