ಕೋವಿಡ್ ನಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಧನ ನೀಡುವುದು ಸಾಧ್ಯವಿಲ್ಲ: ಕೇಂದ್ರ ಸರ್ಕಾರದಿಂದ ದ್ರೋಹ – ಡಿ,ಬಸವರಾಜ್ ಖಂಡನೆ
ದಾವಣಗೆರೆ: ಕೋವಿಡ್ ನಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಧನ ನೀಡುವುದು ಸಾಧ್ಯವಿಲ್ಲವೆಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟಿಗೆ ಪ್ರಮಾಣ ಪತ್ರ ಸಲ್ಲಿಸುವ ಮೂಲಕ ಮೃತ ಕುಟುಂಬಗಳಿಗೆ ದ್ರೋಹ ಬಗೆದಿದೆ ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಕೇಂದ್ರ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಕೋವಿಡ್-19 ಸಾಂಕ್ರಾಮಿಕವನ್ನು ರಾಷ್ಟ್ರೀಯ ವಿಪತ್ತು ಎಂದು ಈ ಹಿಂದೆ ಕೇಂದ್ರ ಸರ್ಕಾರವು ಘೋಷಿಸಿದೆ. ಹಾಗಾಗಿ ಕೋವಿಡ್‍ನಿಂದ ಮೃತಪಟ್ಟ ಕುಟುಂಬಕ್ಕೆ ತಲಾ ರೂ. 4 ಲಕ್ಷ ಪರಿಹಾರ ನೀಡಬೇಕೆಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪರಿಹಾರ ನೀಡಲಾಗುವುದಿಲ್ಲವೆಂದು ಸುಪ್ರಿಂ ಕೋರ್ಟಿಗೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿರುವುದು ಖಂಡನಾರ್ಹ. ಮೋದಿ ಸರ್ಕಾರಕ್ಕೆ ಮಾನವೀಯತೆ ಮನುಷ್ಯತ್ವ ಯಾವುದೂ ಇಲ್ಲವೆಂದು ಅವರು ಕಿಡಿಕಾರಿದ್ದಾರೆ.
ಕೋವಿಡ್ ನಿಂದ ಮೃತರಿಗೆ ಪರಿಹಾರ ನೀಡಿದರೆ ವಿಪತ್ತು ನಿರ್ವಹಣೆ ನಿಧಿ ಮುಗಿದೇ ಹೋಗುತ್ತದೆಂದು ಹಾಗೂ ಸಾಂಕ್ರಾಮಿಕ ಮುಂದಿನ ಅಲೆಗಳನ್ನು ಎದುರಿಸಲು ಕೇಂದ್ರ ಮತ್ತು ರಾಜ್ಯಗಳ ಸಿದ್ದತೆಯ ಮೇಲೆಯೂ ಇದು ಪರಿಣಾಮ ಬೀರುತ್ತದೆ ಎಂದು ಕುಂಟು ನೆಪ ಹೇಳಿ ಮೃತ ಕುಟುಂಬಗಳಿಗೆ ಮೋದಿ ಸರ್ಕಾರ ಅನ್ಯಾಯವೆಸಗಿದೆ ಎಂದು ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಳೆದ 1 ತಿಂಗಳಿನಿಂದ ಮೃತ ಕುಟುಂಬಗಳಿಗೆ ಪರಿಹಾರ ನೀಡುವ ವಿಚಾರಣೆ ಸುಪ್ರಿಂ ಕೋರ್ಟಿನಲ್ಲಿ ನಡೆಯುತ್ತಿದ್ದು. ಪರಿಹಾರ ಕೋರಿಕೆಯು ನೈಜ್ಯವಾದ ಬೇಡಿಕೆ, ಹಾಗಾಗಿ ಈ ವಿಚಾರವು ಕೇಂದ್ರ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಇದೇ ಜೂ.11 ರಂದು ನಡೆದ ವಿಚಾರಣಾ ಸಂದರ್ಭದಲ್ಲಿ ಸುಪ್ರೀಂ ಕೋರ್ಟಿಗೆ ಮೋದಿ ಸರ್ಕಾರವು ಹೇಳಿತ್ತು. ಇದೀಗ ಏಕಾಏಕಿ ಕೋವಿಡ್‍ನಿಂದ ಸಾವಿಗೀಡಾದ ಮೃತ ಕುಟುಂಬಗಳಿಗೆ ಪರಿಹಾರ ನೀಡಲು ಸಾಧ್ಯವಿಲ್ಲವೆಂದು ಹೇಳಿರುವುದು ಮೃತ ಕುಟುಂಬಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ದೇಶದಲ್ಲಿ ನಿನ್ನೆಯವರೆಗೂ ಕೋವಿಡ್‍ನಿಂದ ಮೃತ ಪಟ್ಟವರ ಸಂಖ್ಯೆ 3,88,164 ಇದ್ದು (ನ್ಯೂರ್ಯಾಕ್ ಟೈಮ್ಸ್ ಪತ್ರಿಕೆಯ ವರದಿಯ ಪ್ರಕಾರ ಭಾರತ ದೇಶದಲ್ಲಿ ಕೋವಿಡ್‍ನಿಂದ ಮೃತ ಪಟ್ಟವರ ಸಂಖ್ಯೆ 43 ಲಕ್ಷ ) ಭಾರತದ ಅಂಕಿ ಅಂಶಗಳ ಪ್ರಕಾರವೇ ಕೋವಿಡ್‍ನಿಂದ ಮೃತಪಟ್ಟ 3,88,164 ಮೃತ ಕುಟುಂಬಗಳಿಗೆ ತಲಾ ರೂ. 4 ಲಕ್ಷದಂತೆ ಪರಿಹಾರ ನೀಡಿದರೆ ಹದಿನೈದು ಸಾವಿರದ ಐದನೂರ ಇಪ್ಪತ್ತಾರು ಕೋಟಿ ಐವತ್ತಾರು ಲಕ್ಷ ರೂ ಆಗುತ್ತದೆ. ಪ್ರಧಾನಿ ತಮ್ಮ ಹೊಸ ಮನೆ ನಿರ್ಮಾಣಕ್ಕಾಗಿ ಹದಿಮೂರು ಸಾವಿರದ ನಾಲ್ಕುನೂರು ಐವತ್ತು ಕೋಟಿ ಮೊತ್ತ ನಿಗದಿಪಡಿಸಿದ್ದಾರೆ. ಪ್ರಧಾನಿ ತಮ್ಮ ಮನೆ ನಿರ್ಮಾಣದ ವಿಚಾರವನ್ನು ರದ್ದುಪಡಿಸಿದರೆ ಇದೇ ಹಣದಲ್ಲಿ ಮೃತರೆಲ್ಲರಿಗೂ ರೂ. ನಾಲ್ಕು ಲಕ್ಷದಂತೆ ಪರಿಹಾರ ನೀಡಬಹುದೆಂದು ಅವರು ಹೇಳಿದ್ದಾರೆ.
ಮೋದಿಯವರಿಗೆ ಬಡವರ ಬಗ್ಗೆ ನೊಂದವರ ಬಗ್ಗೆ ಹೃದಯ ವೈಶಾಲ್ಯತೆ, ಕನಿಕರವಿದ್ದರೆ ಕೂಡಲೇ ತಮ್ಮ ಮನೆ ನಿರ್ಮಾಣದ ಕನಸನ್ನು ಬಿಟ್ಟು ಮೃತ ಕುಟುಂಬಗಳ ನೆರವಿಗೆ ಬರಲಿ ಎಂದು ಅವರು ಒತ್ತಾಯಿಸಿದ್ದಾರೆ.